ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ನಿರ್ಮಾಣವಾಗಲಿರುವ ಕೆಲವೊಂದು ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು ಇಲ್ಲಿವೆ ನೋಡಿ.

ನವದೆಹಲಿ(ಮೇ.01): 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ 27ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯವನ್ನು ವಹಿಸಿದೆ.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಆಡಿದ 6 ಪಂದ್ಯಗಳ ಪೈಕಿ 5ರಲ್ಲಿ ಗೆಲುವು ಹಾಗೂ ಒಂದು ಪಂದ್ಯದಲ್ಲಿ ಸೋಲು ಕಾಣುವ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನೊಂದು ಕಡೆ ರೋಹಿತ್ ಶರ್ಮಾ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡ 6 ಪಂದ್ಯಗಳನ್ನಾಡಿ 3 ಗೆಲುವು ಹಾಗೂ 3 ಸೋಲುಗಳೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಎರಡು ತಂಡಗಳು ನಡುವಿನ ಈ ಪಂದ್ಯದಲ್ಲಿ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.

ಐಪಿಎಲ್ 2021: ಮುಂಬೈ- ಚೆನ್ನೈ ಬದ್ಧವೈರಿಗಳ ಕಾದಾಟಕ್ಕೆ ಕ್ಷಣಗಣನೆ ಆರಂಭ

ಇಂದು(ಮೇ.01) ನಡೆಯಲಿರುವ ಪಂದ್ಯದಲ್ಲಿ ಹಿಟ್‌ ಮ್ಯಾನ್‌ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಮಹತ್ವದ ಮೈಲಿಗಲ್ಲು ಸಾಧಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವಿನ ಪಂದ್ಯದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳು ಇಲ್ಲಿವೆ ನೋಡಿ.

200ನೇ ಐಪಿಎಲ್‌ ಪಂದ್ಯಕ್ಕೆ ಸಜ್ಜಾದ ಸುರೇಶ್ ರೈನಾ: ಇದುವರೆಗೂ ಸುರೇಶ್ ರೈನಾ 199 ಐಪಿಎಲ್‌ ಪಂದ್ಯವನ್ನಾಡಿದ್ದು, ಇಂದು 200ನೇ ಪಂದ್ಯವಾಡಲು ಸಜ್ಜಾಗಿದ್ದಾರೆ. ಇದರೊಂದಿಗೆ 200 ಐಪಿಎಲ್ ಪಂದ್ಯವನ್ನಾಡಿದ ಮೊದಲ ಎಡಗೈ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ರೈನಾ ಪಾಲಾಗಲಿದೆ. ಈ ಮೊದಲು ಎಂ ಎಸ್ ಧೋನಿ, ರೋಹಿತ್ ಶರ್ಮಾ ಹಾಗೂ ದಿನೇಶ್ ಕಾರ್ತಿಕ್ ಬಳಿಕ 200ನೇ ಪಂದ್ಯವನ್ನಾಡಿದ 4ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ರೈನಾ ಭಾಜನರಾಗಲಿದ್ದಾರೆ.

350ನೇ ಟಿ20 ಪಂದ್ಯಕ್ಕೆ ರೆಡಿಯಾದ ಹಿಟ್‌ಮ್ಯಾನ್: ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ 350 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಈ ಮೂಲಕ 350 ಟಿ20 ಪಂದ್ಯವನ್ನಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಪಾತ್ರರಾಗಲಿದ್ದಾರೆ.

ದಾಖಲೆ ಬರೆಯಲು ಕೃನಾಲ್ ಪಾಂಡ್ಯಗೆ ಬೇಕಿದೆ ಇನ್ನೊಂದು ವಿಕೆಟ್‌: ಮುಂಬೈ ಇಂಡಿಯನ್ಸ್‌ ಪರ ಕೃನಾಲ್ ಪಾಂಡ್ಯ 50 ವಿಕೆಟ್‌ ಪೂರೈಸಲು ಕೇವಲ ಇನ್ನೊಂದು ವಿಕೆಟ್ ಅವಶ್ಯಕತೆಯಿದ್ದು, ಇನ್ನೊಂದು ವಿಕೆಟ್‌ ಕಬಳಿಸಿದರೆ 50 ಹಾಗೂ 1,000+ ರನ್‌ ಬಾರಿಸಿದ ಎರಡನೇ ಮುಂಬೈ ಇಂಡಿಯನ್ಸ್‌ ಆಲ್ರೌಂಡರ್ ಎನಿಸಲಿದ್ದಾರೆ. ಈ ಮೊದಲು ಕೀರನ್ ಪೊಲ್ಲಾರ್ಡ್‌ 50 ವಿಕೆಟ್ 1000+ ರನ್ ಬಾರಿಸಿದ್ದಾರೆ.

ದೀಪಕ್ ಚಹರ್ ಇಂದು ಚೆನ್ನೈ ಸೂಪರ್ ಕಿಂಗ್ಸ್ ಪರ 50ನೇ ಐಪಿಎಲ್‌ ಪಂದ್ಯವನ್ನಾಡಲಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪರ 50 ಐಪಿಎಲ್‌ ಪಂದ್ಯವನ್ನಾಡಿದ ಮೊದಲ ಸ್ಪೆಷಲಿಸ್ಟ್ ವೇಗಿ ಎನಿಸಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡೆಲ್ಲಿಯಲ್ಲಿ ನಡೆದ ಕಳೆದ 6 ಐಪಿಎಲ್ ಪಂದ್ಯಗಳ ಪೈಕಿ 5ರಲ್ಲಿ ಗೆಲುವು ದಾಖಲಿಸಿದೆ. 2018ರಲ್ಲಿ ಧೋನಿ ಪಡೆ ಕೊನೆಯದಾಗಿ ಡೆಲ್ಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಸೋಲಿನ ರುಚಿ ಕಂಡಿತ್ತು.