ಮೈದಾನದಲ್ಲಿ ಸಿಕ್ಸರ್‌ ಹಾಗೂ ಬೌಂಡರಿ ಬಾರಿಸುವುದರಲ್ಲಿ ನಿಸ್ಸೀಮ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್, ಇದೀಗ ತಾವು ತಮ್ಮ ಪತ್ನಿಗೆ ಮೈದಾನದಲ್ಲೇ ಮುತ್ತಿಕ್ಕಿ ಸುದ್ದಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಏ.30): ರಾಜಸ್ಥಾನ ರಾಯಲ್ಸ್‌ ವಿರುದ್ದ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್‌ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್‌ ತಮ್ಮ ಪತ್ನಿ ದೇವಿಶಾ ಶೆಟ್ಟಿಗೆ ಮೈದಾನದಲ್ಲೇ ಮುತ್ತಿಕ್ಕಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಮುಂಬೈ ಇಂಡಿಯನ್ಸ್‌ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ದ ಗೆಲುವು ಸಾಧಿಸಿದಾಗ ಸೂರ್ಯ ಪತ್ನಿ ದೇವಿಶಾ ಶೆಟ್ಟಿ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದರು. ದೇವಿಶಾ ಶೆಟ್ಟಿ ಸ್ಟೇಡಿಯಂನ ಗ್ಲಾಸ್‌ನ ಹಿಂಬದಿಯಲ್ಲಿದ್ದರು. ಮೈದಾನದಲ್ಲಿದ್ದ ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿಗೆ ಚುಂಬಿಸಲು ಹತ್ತಿರ ಬಂದಿದ್ದಾರೆ. ಆಗ ದೇವಿಶಾ ತಮ್ಮ ಕೆನ್ನೆಯನ್ನು ಮುಂದೆ ನೀಡಿದ್ದಾರೆ. ತಡಮಾಡದ ಸೂರ್ಯ, ಗ್ಲಾಸ್‌ನ ಮತ್ತೊಂದು ತುದಿಯಿಂದ ಮುತ್ತಿಕ್ಕಿದ್ದಾರೆ. 

ಈ ಸುಂದರ ಕ್ಷಣವನ್ನು ಜಹೀರ್ ಖಾನ್‌ ಪತ್ನಿ ಸಾಗರಿಕ ಘಾಟ್ಗೆ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್‌ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಆಟಗಾರರು ಬಯೋ ಬಬಲ್‌ನಲ್ಲಿ ತಮ್ಮ ಮಡದಿಯರ ಜತೆ ಇರಲು ಅವಕಾಶ ಮಾಡಿಕೊಟ್ಟಿದೆ. ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಸೂರ್ಯ ತಮ್ಮ ಪತ್ನಿಯನ್ನು ಹೆಚ್ಚು ಖುಷಿಪಡಿಸಲು ಸಾಧ್ಯವಾಗಲಿಲ್ಲ. ಸೂರ್ಯ ಕೇವಲ 10 ಎಸೆತಗಳನ್ನು ಎದುರಿಸಿ 16 ರನ್‌ ಬಾರಿಸಲಷ್ಟೇ ಶಕ್ತರಾದರು.