* ಚೆನ್ನೈ ಎದುರು ಭರ್ಜರಿ ಗೆಲುವು ಸಾಧಿಸಿದ ಪಂಜಾಬ್ ಕಿಂಗ್ಸ್* ಅಜೇಯ 98 ರನ್‌ ಚಚ್ಚಿ ಮಿಂಚಿದ ನಾಯಕ ಕೆ.ಎಲ್‌. ರಾಹುಲ್‌* ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ ಚೆನ್ನೈ ಸೂಪರ್‌ ಕಿಂಗ್ಸ್

ದುಬೈ(ಅ.07): ನಾಯಕ ಕೆ.ಎಲ್. ರಾಹುಲ್ (KL Rahul) (98*) ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎದುರು ಪಂಜಾಬ್ ಕಿಂಗ್ಸ್‌ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈ ನೀಡಿದ್ದ 135 ರನ್‌ಗಳ ಸಾಧಾರಣ ಗುರಿಯನ್ನು ಇನ್ನೂ 7 ಓವರ್‌ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವ ಮೂಲಕ ಪಂಜಾಬ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಇನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಲೀಗ್‌ ಹಂತದಲ್ಲಿ ಹ್ಯಾಟ್ರಿಕ್ ಸೋಲು ಕಂಡು ಮುಖಭಂಗ ಅನುಭವಿಸಿದೆ

ಚೆನ್ನೈ ಸೂಪರ್‌ ಕಿಂಗ್ಸ್‌ ನೀಡಿದ್ದ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್‌ (Punjab Kings) ಮತ್ತೊಮ್ಮೆ ಉತ್ತಮ ಆರಂಭವನ್ನೇ ಪಡೆಯಿತು. ಕನ್ನಡದ ಜೋಡಿಯಾದ ಮಯಾಂಕ್ ಅಗರ್‌ವಾಲ್ (Mayank Agarwal) ಹಾಗೂ ಕೆ.ಎಲ್‌ ರಾಹುಲ್ ಪಂಜಾಬ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಈ ಜೋಡಿ 4.3 ಓವರ್‌ಗಳಲ್ಲಿ 46 ರನ್‌ ಕಲೆ ಹಾಕಿತು. ಅಗರ್‌ವಾಲ್ 12 ರನ್‌ ಬಾರಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ಇದೇ ಓವರ್‌ನಲ್ಲಿ ಸರ್ಫರಾಜ್ ಖಾನ್ ಶೂನ್ಯ ಸುತ್ತಿ ಶಾರ್ದೂಲ್ ಠಾಕೂರ್‌ಗೆ ಎರಡನೇ ಬಲಿಯಾದರು. ಇನ್ನು ಶಾರುಕ್ ಖಾನ್ ಆಟ ಕೇವಲ 8 ರನ್‌ಗಳಿಗೆ ಸೀಮಿತವಾಯಿತು.

Scroll to load tweet…

ಕೆ.ಎಲ್‌ ರಾಹುಲ್ ಆರ್ಭಟ: ಪಂಜಾಬ್ ತಂಡದ ನಾಯಕ ಕೆ.ಎಲ್‌. ಮತ್ತೊಮ್ಮೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಚೆನ್ನೈ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ರಾಹುಲ್‌ ಚೆಂಡನ್ನು ಮೈದಾನದ ಮೂಲೆ ಮೂಲೆಗಳಿಗೆ ಅಟ್ಟುವ ಮೂಲಕ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ರಾಹುಲ್ 42 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿನಿಂದ ಅಜೇಯ 98 ರನ್‌ ಬಾರಿಸುವ ಮೂಲಕ ಇನ್ನೂ 7 ಓವರ್‌ ಬಾಕಿ ಇರುವಂತೆಯೇ ತಂಡ ಗೆಲುವಿನ ಕೇಕೆ ಹಾಕುವಂತೆ ಮಾಡಿದರು.

IPL 2021: ಪಂಜಾಬ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್‌

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಪಂಜಾಬ್ ಕಿಂಗ್ಸ್‌ ಶಿಸ್ತುಬದ್ದ ದಾಳಿಗೆ ತತ್ತರಿಸಿ ಹೋಯಿತು. ಋತುರಾಜ್ ಗಾಯಕ್ವಾಡ್‌(12), ಮೋಯಿನ್ ಅಲಿ(0), ರಾಬಿನ್ ಉತ್ತಪ್ಪ(2),ಅಂಬಟಿ ರಾಯುಡು(4) ಹಾಗೂ ಧೋನಿ(15) ಅಲ್ಪ ಮೊತ್ತಕ್ಕೆ ತಂಡ ಕುಸಿಯಲು ಕಾರಣರಾದರು. ಫಾಫ್ ಡು ಪ್ಲೆಸಿಸ್‌(76) ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು