ಕೆಕೆಆರ್‌ ವಿರುದ್ದ ಮೊದಲ ಓವರ್‌ನಲ್ಲೇ ಪೃಥ್ವಿ ಶಾ 6 ಎಸೆತದಲ್ಲಿ 6 ಬೌಂಡರಿ ಬಾರಿಸಿದ್ದಕ್ಕೆ ವಿರೇಂದ್ರ ಸೆಹ್ವಾಗ್ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಅಹಮದಾಬಾದ್‌(ಏ.30): ತಮ್ಮ ವಿಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡದ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ವಿರೇಂದ್ರ ಸೆಹ್ವಾಗ್, ಇದೀಗ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅಮೋಘ ಬ್ಯಾಟಿಂಗ್‌ ಪ್ರದರ್ಶನವನ್ನು ಮನಬಿಚ್ಚಿ ಕೊಂಡಾಡಿದ್ದಾರೆ. 

ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೋಲ್ಕತ ನೈಟ್‌ ರೈಡರ್ಸ್ ವಿರುದ್ದ ಶಿವಂ ಮಾವಿ ಎಸೆದ ಮೊದಲ ಓವರ್‌ನಲ್ಲೇ 6 ಎಸೆತಗಳಲ್ಲಿ ಸತತ 6 ಬೌಂಡರಿ ಬಾರಿಸುವ ಮೂಲಕ ತಾನೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್‌ ಎನ್ನುವುದನ್ನು ಕ್ರಿಕೆಟ್ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ. ಕೇವಲ 5.6 ಅಡಿ ಎತ್ತರದ ವಾಮನ ಮೂರ್ತಿ ಶಾ ಬ್ಯಾಟಿಂಗ್‌ ಅಬ್ಬರಕ್ಕೆ ಕೆಕೆಆರ್ ತಂಡ ತತ್ತರಿಸಿ ಹೋಯಿತು. ಕೇವಲ 41 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 11 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಸ್ಪೋಟಕ 82 ರನ್‌ ಚಚ್ಚಿದರು. ಈ ಮೂಲಕ ಡೆಲ್ಲಿ ಇನ್ನೂ 21 ಎಸೆತಗಳು ಬಾಕಿ ಇರುವಂತೆಯೇ ಗೆಲುವು ಸಾಧಿಸುವಲ್ಲಿ ಪೃಥ್ವಿ ಬ್ಯಾಟಿಂಗ್ ಪ್ರಮುಖ ಪಾತ್ರವಹಿಸಿತು. ಇದೀಗ ಪೃಥ್ವಿ ಬ್ಯಾಟಿಂಗ್‌ಗೆ ಮುಲ್ತಾನಿನ ಸುಲ್ತಾನ ಖ್ಯಾತಿಯ ಸೆಹ್ವಾಗ್‌ ಮನಸೋತಿದ್ದಾರೆ.

ಸರಿಯಾದ ಗ್ಯಾಪ್ ಹುಡುಕಿ 6 ಎಸೆತಗಳಲ್ಲಿ ಸತತ 6 ಬೌಂಡರಿ ಬಾರಿಸುವುದು ಅಷ್ಟು ಸುಲಭದ ಮಾತಲ್ಲ. ನಾನು ವೃತ್ತಿ ಜೀವನದಲ್ಲಿ 6 ಎಸೆತಗಳಲ್ಲಿ 6 ಬೌಂಡರಿಗಳನ್ನು ಬಾರಿಸಬೇಕು ಎಂದು ಹಲವು ಬಾರಿ ಯೋಚಿಸಿದ್ದೆ. ಆದರೆ ಹೆಚ್ಚೆಂದರೆ 18ರಿಂದ 20 ರನ್‌ ಬಾರಿಸಲಷ್ಟೇ ನನಗೆ ಸಾಧ್ಯವಾಗಿದೆ. 6 ಎಸೆತಗಳಲ್ಲಿ 6 ಬೌಂಡರಿ ಅಥವಾ ಸಿಕ್ಸರ್‌ ಬಾರಿಸಲು ನನಗೆ ಸಾಧ್ಯವಾಗಿಲ್ಲ. ಈ ಸಾಧನೆ ಮಾಡಬೇಕಿದ್ದರೆ ಸರಿಯಾದ ಸಮಯದಲ್ಲಿ ಸರಿಯಾದ ಜಾಗ ಹುಡುಕಿ ಚೆಂಡನ್ನು ಬಾರಿಸಬೇಕಾಗುತ್ತದೆ ಎಂದು ಕ್ರಿಕ್‌ಬಜ್‌ ಜತೆಗಿನ ಮಾತಕತೆ ವೇಳೆ ಹೇಳಿದ್ದಾರೆ.

ಪೃಥ್ವಿ ಶಾ-ಧವನ್ ಅಬ್ಬರಕ್ಕೆ KKR ಧೂಳೀಪಟ; ಡೆಲ್ಲಿ ತಂಡಕ್ಕೆ 7 ವಿಕೆಟ್ ಗೆಲುವು!

ಶಿವಂ ಮಾವಿ ಹಾಗೂ ಪೃಥ್ವಿ ಶಾ ಅಂಡರ್ 19 ತಂಡದಲ್ಲಿ ಒಟ್ಟಿಗೆ ಆಡಿದ್ದಾರೆ. ಮಾವಿ ಎಲ್ಲಿ ಬೌಲಿಂಗ್ ಮಾಡುತ್ತಾರೆ ಎನ್ನುವುದು ಪೃಥ್ವಿಗೆ ಗೊತ್ತಿರುತ್ತದೆ. ಈ ಆತ್ಮವಿಶ್ವಾಸ ಪೃಥ್ವಿ ನೆರವಿಗೆ ಬಂದಿರಬಹುದು. ಹಾಗಂತ ನಾನೂ ಆಶಿಶ್ ನೆಹ್ರಾ ಅವರನ್ನು ಸಾಕಷ್ಟು ಬಾರಿ ನೆಟ್ಸ್ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಎದುರಿಸಿದ್ದೇನೆ, ಆದರೆ ಒಂದೇ ಓವರ್‌ನಲ್ಲಿ ನೆಹ್ರಾಗೆ 6 ಬೌಂಡರಿ ಬಾರಿಸಲು ನನಗೆ ಸಾಧ್ಯವಾಗಿಲ್ಲ. ನಿಮ್ಮ ಅದ್ಭುತ ಆಟಕ್ಕೆ ಹ್ಯಾಟ್ಸ್‌ ಆಫ್ ಎಂದು ವೀರೂ ಪೃಥ್ವಿ ಬ್ಯಾಟಿಂಗ್‌ಗೆ ಫುಲ್‌ ಮಾರ್ಕ್ಸ್ ನೀಡಿದ್ದಾರೆ.