* ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾದ ರಾಜಸ್ಥಾನ ರಾಯಲ್ಸ್‌* ರಾಜಸ್ಥಾನ ಎದುರು 33 ರನ್‌ಗಳ ಜಯ ದಾಖಲಿಸಿದ ಡೆಲ್ಲಿ* ಆಲ್ರೌಂಡ್ ಪ್ರದರ್ಶನದ ಮೂಲಕ ಪ್ಲೇ ಆಫ್ ಹಾದಿ ಖಚಿತಪಡಿಸಿಕೊಂಡ ಡೆಲ್ಲಿ

ಅಬುಧಾಬಿ(ಸೆ.25): ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ತಂಡವು 33 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಎದುರು ಗೆಲುವಿನ ನಗೆ ಬೀರಿದೆ. ಇದರೊಂದಿಗೆ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫ್ಲೇ ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಇನ್ನು ಇದೇ ವೇಳೆ ರಾಜಸ್ಥಾನ ರಾಯಲ್ಸ್‌(Rajasthan Royals) ತಂಡದ ಪ್ಲೇ ಆಫ್‌ ಹಾದಿ ಮತ್ತಷ್ಟು ದುರ್ಗಮ ಎನಿಸಿದೆ. ಸಂಜು ಸ್ಯಾಮ್ಸನ್‌(Sanju Samson) ಕೆಚ್ಚೆದೆಯ ಹೋರಾಟ(70*) ವ್ಯರ್ಥವಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ್ದ 155 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್‌ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಆವೇಶ್‌ ಖಾನ್ ರಾಯಲ್ಸ್‌ ಆರಂಭಿಕ ಬ್ಯಾಟ್ಸ್‌ಮನ್‌ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು ಎರಡನೇ ಓವರ್‌ನ ಮೊದಲ ಎಸೆತದಲ್ಲೇ ನೊಕಿಯೆ ಮತ್ತೋರ್ವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಅವರನ್ನು ಬಲಿ ಪಡೆದರು. ಇನ್ನು ಡೇವಿಡ್ ಮಿಲ್ಲರ್‌ ಆಫ್‌ಸ್ಪಿನ್ನರ್ ಅಶ್ವಿನ್‌ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ರಾಯಲ್ಸ್‌ 17 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಪವರ್‌ ಪ್ಲೇನಲ್ಲಿ ಒಂದೇ ಒಂದು ಬೌಂಡರಿ ಬಾರಿಸಲು ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಸಾಧ್ಯವಾಗಲಿಲ್ಲ. 

Scroll to load tweet…

IPL 2021 DC vs RR: ರಾಯಲ್ಸ್‌ಗೆ ಸ್ಪರ್ಧಾತ್ಮಕ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌

ಇನ್ನು ನಾಲ್ಕನೇ ವಿಕೆಟ್‌ಗೆ ಮಹಿಪಾಲ್ ಲೊಮ್ರಾರ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ 31 ರನ್‌ಗಳ ಜತೆಯಾಟವಾಡುವ ತಂಡಕ್ಕೆ ಆಸರೆಯಾದರು. 19 ರನ್‌ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಲೋಮ್ರರ್‌ರನ್ನು ಕಗಿಸೋ ರಬಾಡ ಪೆವಿಲಿಯನ್ ಹಾದಿ ತೋರಿಸಿದರು. ರಯಾನ್ ಪರಾಗ್(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. 

ಸಂಜು-ತೆವಾಟಿಯಾ ಜತೆಯಾಟ: 55 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ರಾಹುಲ್ ತೆವಾಟಿಯಾ ಆಸರೆಯಾದರು. ಸಂಜು ಸ್ಯಾಮ್ಸನ್‌ 39 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. 6ನೇ ವಿಕೆಟ್‌ಗೆ ಈ ಜೋಡಿ 44 ರನ್‌ಗಳ ಜತೆಯಾಟ ನಿಭಾಯಿಸಿತು. 

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. 21 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಬಳಿಕ ಶ್ರೇಯಸ್‌ ಅಯ್ಯರ್, ಶಿಮ್ರೊನ್‌ ಹೆಟ್ಮೇಯರ್ ಹಾಗೂ ರಿಷಭ್ ಪಂತ್ ಸಮಯೋಚಿತ ಬ್ಯಾಟಿಂಗ್‌ ನೆರವಿನಿಂದ 6 ವಿಕೆಟ್ ಕಳೆದುಕೊಂಡು 155 ರನ್‌ ಕಲೆಹಾಕಿತ್ತು. 

ಸಂಕ್ಷಿಪ್ತ ಸ್ಕೋರ್

ಡೆಲ್ಲಿ ಕ್ಯಾಪಿಟಲ್ಸ್‌: 155/6
ಶ್ರೇಯಸ್‌ ಅಯ್ಯರ್: 43
ಮುಷ್ತಾಫಿಜುರ್: 22/2

ರಾಜಸ್ಥಾನ ರಾಯಲ್ಸ್: 121/6
ಸಂಜು ಸ್ಯಾಮ್ಸನ್‌: 70*