ಚೆನ್ನೈ(ಮಾ.05): ಎಂ.ಎಸ್‌.ಧೋನಿ ಬುಧವಾರ ರಾತ್ರಿ ಚೆನ್ನೈ ತಲುಪಿದ್ದು, 2021ರ ಐಪಿಎಲ್‌ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಮಾರ್ಚ್ 9ರಿಂದ ಅಭ್ಯಾಸ ಶಿಬಿರ ಆರಂಭಿಸುವ ಸಾಧ್ಯತೆ ಇದೆ. 

ಧೋನಿ ಜೊತೆ ಬ್ಯಾಟ್ಸ್‌ಮನ್‌ ಅಂಬಟಿ ರಾಯುಡು ಸಹ ಬುಧವಾರ ಚೆನ್ನೈಗೆ ಬಂದಿಳಿದರು. ಸದ್ಯಕ್ಕೆ ಲಭ್ಯವಿರುವ ಆಟಗಾರರೊಂದಿಗೆ ಶಿಬಿರ ನಡೆಸುವುದಾಗಿ ತಂಡದ ಸಿಇಒ ಕಾಶಿ ವಿಶ್ವನಾಥನ್‌ ಹೇಳಿದ್ದಾರೆ. ಧೋನಿ ಸೇರಿ ಶಿಬಿರಕ್ಕೆ ಆಗಮಿಸಿರುವ ಆಟಗಾರರು 5 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದು, 3 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ.

IPL 2021: ಹರಾಜಿನ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಹೀಗಿದೆ ನೋಡಿ

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ವೇಳಾಪಟ್ಟಿ ಇನ್ನೂ ಖಚಿತವಾಗದಿದ್ದರೂ, ಮೂರು ಬಾರಿಯ ಐಪಿಎಲ್‌ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈಗಿನಿಂದಲೇ ಸಿದ್ದತೆ ಆರಂಭಿಸಲು ಮುಂದಾಗಿದೆ. ಇತ್ತೀಚೆಗಷ್ಟೇ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್‌(9.25 ಕೋಟಿ), ಮೋಯಿನ್ ಅಲಿ(7 ಕೋಟಿ), ಚೇತೇಶ್ವರ್ ಪೂಜಾರ(50 ಲಕ್ಷ) ಹಾಗೂ ತಮಿಳುನಾಡು ಬ್ಯಾಟ್ಸ್‌ಮನ್‌ಗಳಾದ ಸಿ. ಹರಿ ನಿಶಾಂತ್, ಹರಿಶಂಕರ್ ರೆಡ್ಡಿ ಹಾಗೂ ಭಗತ್ ವರ್ಮಾ ಅವರನ್ನು ಮೂಲ ಬೆಲೆ 20 ಲಕ್ಷ ರುಪಾಯಿ ನೀಡಿ ಖರೀದಿಸಿದೆ.

ಐಪಿಎಲ್‌ ಇತಿಹಾಸದಲ್ಲೇ ಕಳೆದ ಬಾರಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಪ್ಲೇ ಆಫ್‌ ಪ್ರವೇಶಿಸಲು ವಿಫಲವಾಗಿತ್ತು. ಈ ಬಾರಿಗೆ ಮತ್ತೆ ಕಮ್‌ಬ್ಯಾಕ್‌ ಮಾಡಲು ಸಿಎಸ್‌ಕೆ ತಂಡ ಎದುರು ನೋಡುತ್ತಿದೆ.