ಮುಂಬೈ(ಏ.16): ಚೆನ್ನೈ ಸೂಪರ್ ಕಿಂಗ್ಸ್ ಸೋಲಿನಿಂದ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಸುಲಭ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಭರ್ಜರಿ ಗೆಲುವು ಕಂಡಿದೆ.  

ಗೆಲುವಿಗೆ 107 ರನ್ ಟಾರ್ಗೆಟ್ ಪಡೆದ ಚೆನ್ನೈ ಸೂಪರ್ ಕಿಂಗ್ಸ್, ಆರಂಭದಲ್ಲಿ ರುತುರಾಜ್ ಗಾಯಕ್ವಾಡ್ ವಿಕೆಟ್ ಪತನಗೊಂಡಿದೆ. ಗಾಯಕ್ವಾಡ್ 5 ರನ್ ಸಿಡಿಸಿ ಔಟಾದರು. ಆದರೆ ಚೆನ್ನೈ ಯಾವ ಹಂತದಲ್ಲಿ ಆತಂಕ ಎದುರಿಸಲಿಲ್ಲ. ಕಾರಣ ಮೊಯಿನ್ ಆಲಿ ಹಾಗೂ ಫಾಫ್ ಡುಪ್ಲೆಸಿಸ್ ಜೊತೆಯಾಟ ಚೆನ್ನೈ ಹಾದಿ ಸುಗಮಗೊಂಡಿತು.

2ನೇ ವಿಕೆಟ್‌ಗೆ ಫಾಫ್ ಡುಪ್ಲೆಸಿಸ್ ಹಾಗೂ ಮೊಯಿನ್ ಆಲಿ ಜೋಡಿ 66 ರನ್ ಜೊತೆಯಾಟ ನೀಡಿತು. ಮೊಯಿನ್ ಆಲಿ 31 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು. ಮೊಯಿನ್ ಆಲಿ ವಿಕೆಟ್ ಪತನ ಚೆನ್ನೈ ತಂಡಕ್ಕೆ ಯಾವ ಸಂಕಷ್ಟ ತರಲಿಲ್ಲ. ಸುರೇಶ್ ರೈನಾ ಜೊತೆ ಸೇರಿದ ಫಾಫ್ ಡುಪ್ಲೆಸಿಸ್ ಹೋರಾಟ ಮುಂದುವರಿಸಿದರು.

ಸುರೇಶ್ ರೈನಾ 8 ಹಾಗೂ ಅಂಬಾಟಿ ರಾಯುಡು ಡಕೌಟ್ ಆದರು. ದಿಢೀರ್ 3 ವಿಕೆಟ್ ಕಳೆದುಕೊಂಡ ಚೆನ್ನೈ ಪಾಳಯದಲ್ಲಿ ಕೊಂಚ ಆತಂಕ ಎದುರಾಗಿದ್ದು ನಿಜ. ಆದರೆ ಚೆನ್ನೈ ಗೆಲುವಿಗೆ ಅಂತಿಮ 30 ಎಸೆತದಲ್ಲಿ ಕೇವಲ 5 ರನ್ ಅವಶ್ಯಕತೆ ಇತ್ತು. 

ಫಾಫ್ ಡುಪ್ಲೆಸಿಸ್ ಅಜೇಯ 36 ರನ್ ಸಿಡಿಸಿದರು. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ 15.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. 6 ವಿಕೆಟ್ ಗೆಲುವು ಕಂಡ ಚೆನ್ನೈ ಸೋಲಿನಿಂದ ಹೊರಬಂದರೆ, ಶುಭಾರಂಭ ಮಾಡಿದ ಪಂಜಾಬ್ ಕಿಂಗ್ಸ್ ಸೋಲಿನ ಕಹಿ ಅನುಭವಿಸಿದೆ.