* ಯುಎಇ ಚರಣದ ಐಪಿಎಲ್ ಆರಂಭಕ್ಕೆ ಕ್ಷಣಗಣನೆ* ಕ್ವಾರಂಟೈನ್‌ ಮುಗಿಸಿ ಆರ್‌ಸಿಬಿ ತಂಡ ಕೂಡಿಕೊಂಡ ಕಿಂಗ್ ಕೊಹ್ಲಿ* ಗೆಳೆಯ ಎಬಿ ಡಿವಿಲಿಯರ್ಸ್‌ ಅವರನ್ನು ಅಪ್ಪಿಕೊಂಡ ನಾಯಕ ವಿರಾಟ್

ಅಬುಧಾಬಿ(ಸೆ.18): ಕಂಡ ತಕ್ಷಣ ಮುಗುಳು ನಗೆ-ಬಿಗಿಯಾದ ಪ್ರೀತಿಯ ಅಪ್ಪುಗೆ. ಇದು ವಿಶ್ವಕ್ರಿಕೆಟ್‌ನ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಎಬಿ ಡಿವಿಲಿಯರ್ಸ್‌ ಹಾಗೂ ವಿರಾಟ್ ಕೊಹ್ಲಿ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಭೇಟಿಯಾದ ಸುಂದರ ಕ್ಷಣಗಳಿವು. 

ಹೌದು, ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ಸಾಕಷ್ಟು ಮೊದಲೇ ದುಬೈ ತಲುಪಿ ಕ್ವಾರಂಟೈನ್ ಮುಗಿಸಿ, ಅಭ್ಯಾಸ ಆರಂಭಿಸಿದ್ದಾರೆ. ಇನ್ನು ಟೆಸ್ಟ್‌ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್‌ನಿಂದ ನೇರವಾಗಿ ದುಬೈಗೆ ಬಂದಿಳಿದು 6 ದಿನಗಳ ಕಡ್ಡಾಯ ಕ್ವಾರಂಟೈನ್‌ ಮುಗಿಸಿ, ಮೊದಲ ಬಾರಿಗೆ ಆರ್‌ಸಿಬಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. 

ಟೀಂ ಇಂಡಿಯಾ ಕೋಚ್‌ ಮತ್ತೆ ಕನ್ನಡಿಗ ಕುಂಬ್ಳೆಗೆ ಮಣೆ ಹಾಕುತ್ತಾ ಬಿಸಿಸಿಐ..?

ಆರ್‌ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್‌ ಭೇಟಿಯಾಗಿರುವ ಕ್ಷಣ ಹಾಗೂ ಕೆಲವು ಆರ್‌ಸಿಬಿ ಕ್ರಿಕೆಟಿಗರು ಅಭ್ಯಾಸ ನಡೆಸುತ್ತಿರುವ ದೃಶ್ಯಾವಳಿಗಳನ್ನು ಹಂಚಿಕೊಂಡಿದ್ದು, ಈ ವಿಡಿಯೋ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Scroll to load tweet…

ಮ್ಯಾಂಚೆಸ್ಟರ್ ಟೆಸ್ಟ್‌ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪಾಳಯದಲ್ಲಿ ಕೋವಿಡ್ 19 ಸೋಂಕು ಪತ್ತೆಯಾದ ಬೆನ್ನಲ್ಲೇ ಕೊನೆಯ ಕ್ಷಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ ಪಂದ್ಯವನ್ನು ರದ್ದು ಮಾಡಲಾಗಿತ್ತು. ಬಳಿಕ ಮರುದಿನವೇ ಆರ್‌ಸಿಬಿ ಫ್ರಾಂಚೈಸಿ ವಿಶೇಷ ವಿಮಾನದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಯುಎಇಗೆ ಕರೆಸಿಕೊಂಡಿತ್ತು. 

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯು ಸೆಪ್ಟೆಂಬರ್ 20ರಂದು ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಕೋಲ್ಕತ ನೈಟ್‌ ರೈಡರ್ಸ್‌ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಸದ್ಯ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ಕನವರಿಕೆಯಲ್ಲಿದೆ.