14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಕೊರೋನಾ ವೈರಸ್‌ಗೆ ಒಳಗಾಗಿದ್ದ ಅಕ್ಷರ್ ಪಟೇಲ್ ಇದೀಗ ಸಂಪೂರ್ಣ ಗುಣಮುಖರಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಏ.24): ಅನುಭವಿ ಆಲ್ರೌಂಡರ್ ಅಕ್ಷರ್ ಪಟೇಲ್ ಕೋವಿಡ್-19ನಿಂದ ಗುಣಮುಖರಾಗಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಯೋ ಬಬಲ್‌ನೊಳಕ್ಕೆ ಪ್ರವೇಶಿಸಿದ್ದಾರೆ. 20 ದಿನಗಳ ಕ್ವಾರಂಟೈನ್ ಬಳಿಕ ತಮ್ಮ ತಂಡದ ಸಹ ಆಟಗಾರರನ್ನು ಭೇಟಿ ಮಾಡಿದ್ದು, ಟೆಸ್ಟ್ ಪಾದಾರ್ಪಣೆಯ ಬಳಿಕ ತಮ್ಮ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಅಕ್ಷರ್ ಪಟೇಲ್ ಬಣ್ಣಿಸಿದ್ದಾರೆ.
ಮಾ.28ರಂದು ಕೋವಿಡ್ ನೆಗೆಟಿವ್ ವರದಿಯೊಂದಿಗೆ ಮುಂಬೈನಲ್ಲಿ ತಂಡದ ಹೋಟೆಲ್ ಪ್ರವೇಶಿಸಿದ್ದ ಅಕ್ಷರ್‌ಗೆ ಏಪ್ರಿಲ್ 3ರಂದು ನಡೆಸಿದ್ದ ಮತ್ತೊಂದು ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸೋಂಕಿನ ಲಕ್ಷಣಗಳು ಇದ್ದ ಕಾರಣ, ಅವರನ್ನು ಬಿಸಿಸಿಐನ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೈನಲ್ ಪ್ರವೇಶಿಸುವಲ್ಲಿ ಅಕ್ಷರ್ ಪಟೇಲ್ ಪಾತ್ರ ಮಹತ್ವದ್ದಾಗಿತ್ತು. ಅಕ್ಷರ್ ಪಟೇಲ್ 15 ಪಂದ್ಯಗಳನ್ನಾಡಿ ಕೇವಲ 9 ವಿಕೆಟ್ ಪಡೆದಿದ್ದರಾದರೂ, ಹೂಡಿಬಡಿಯಾಟದ ಟೂರ್ನಿಯಲ್ಲಿ ಕೇವಲ 6.41ರ ಎಕಾನಮಿಯಲ್ಲಿ ರನ್ ಬಿಟ್ಟುಕೊಡುವ ಮೂಲಕ ಎದುರಾಳಿ ತಂಡದ ರನ್ ಗಳಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು.
IPL 2021: ಡೆಲ್ಲಿಗೆ ಮತ್ತೊಂದು ಶಾಕ್, ಸ್ಟಾರ್ ಆಟಗಾರಿಗೆ ಕೊರೋನಾ ಸೋಂಕು..!
ಐಪಿಎಲ್‌ನಲ್ಲಿ ಇದುವರೆಗೂ ಅಕ್ಷರ್ ಪಟೇಲ್ 97 ಪಂದ್ಯಗಳನ್ನಾಡಿ 80 ವಿಕೆಟ್ ಕಬಳಿಸಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲಿ 127.69ರ ಸ್ಟ್ರೈಕ್‌ರೇಟ್‌ನಲ್ಲಿ 913 ರನ್ ಬಾರಿಸುವ ಮೂಲಕ ಉಪಯುಕ್ತ ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ
ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 4 ಪಂದ್ಯಗಳನ್ನಾಡಿ 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ 6 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಏಪ್ರಿಲ್ 25ರಂದು ಚೆನ್ನೈನಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
