ನವದೆಹಲಿ(ನ.25): ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಬುಧವಾರ(ನ.25) ತಮ್ಮ 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜೂಲನ್ ಗೋಸ್ವಾಮಿಯ ಜನ್ಮದಿನಕ್ಕೆ ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ತಮ್ಮ ಕರಾರುವಕ್ಕಾದ ವೇಗದ ಬೌಲಿಂಗ್ ದಾಳಿಯ ಮೂಲಕ ಭಾರತ ಮಹಿಳಾ ಕ್ರಿಕೆಟ್‌ಗೆ ಹೊಸ ವ್ಯಾಖ್ಯಾನ ಬರೆದ ಪ್ರತಿಭಾನ್ವಿತ ಆಟಗಾರ್ತಿ ಜೂಲಬ್ ಗೋಸ್ವಾಮಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸುದೀರ್ಘ ಕ್ರಿಕೆಟ್‌ ಪಯಣದಿಂದ ಯುವ ಪೀಳಿಗೆಗೆ ಭದ್ರ ಅಡಿಪಾಯ ಸಿಕ್ಕಂತೆ ಆಗಿದೆ ಎಂದು ಯುವಿ ಟ್ವೀಟ್ ಮಾಡಿದ್ದಾರೆ.

ಜೂಲನ್ ಗೋಸ್ವಾಮಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಬೌಲರ್‌ ಆಗಿ ಹೊರಹೊಮ್ಮಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300  ವಿಕೆಟ್ ಪಡೆದ ಮೊದಲ ಆಟಗಾರ್ತಿ ಎನ್ನುವ ಗೌರವಕ್ಕೆ ಜೂಲನ್ ಪಾತ್ರರಾಗಿದ್ದಾರೆ. ಬಿಸಿಸಿಐ ಕೂಡಾ ಜೂಲನ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದೆ.

ವಿರಾಟ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ..?

 
ಜೂಲನ್ ಗೋಸ್ವಾಮಿ 2018ರ ಆಗಸ್ಟ್‌ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮುಂದುವರೆದಿದ್ದಾರೆ. ಜೂಲನ್ ಇದುವರೆಗೂ 10 ಟೆಸ್ಟ್, 182 ಏಕದಿನ ಹಾಗೂ 68 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 40, 225 ಹಾಗೂ 56 ವಿಕೆಟ್ ಕಬಳಿಸಿದ್ದಾರೆ.

 

38 ವರ್ಷದ ಜೂಲನ್ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 2018ರ ಫೆಬ್ರವರಿಯಲ್ಲಿ 200 ವಿಕೆಟ್‌ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಗೌರವಕ್ಕೆ ಭಾಜನರಾಗಿದ್ದರು. ಅನುಭವಿ ವೇಗಿ ಜೂಲನ್ 2010ರಲ್ಲಿ ಅರ್ಜುನ ಹಾಗೂ 2012ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಇತ್ತೀಚೆಗಷ್ಟೇ ಶಾರ್ಜಾದಲ್ಲಿ ನಡೆದ ಮಹಿಳಾ ಟಿ20 ಚಾಲೆಂಜ್‌ನಲ್ಲಿ ಜೂಲನ್ ಗೋಸ್ವಾಮಿ ಟ್ರೈಯಲ್‌ಬ್ಲೇಜರ್ಸ್ ತಂಡವನ್ನು ಪ್ರತಿನಿಧಿಸಿದ್ದರು.