Asianet Suvarna News Asianet Suvarna News

ಜೂಲನ್ ಗೋಸ್ವಾಮಿ ಕ್ರಿಕೆಟ್‌ ಯುಗಾಂತ್ಯ; ಗೆಲುವಿನ ವಿದಾಯ ನೀಡಿದ ಹರ್ಮನ್‌ಪ್ರೀತ್ ಪಡೆ

ಇಂಗ್ಲೆಂಡ್ ಎದುರು ವಿದಾಯದ ಪಂದ್ಯವನ್ನಾಡಿದ ಜೂಲನ್‌ ಗೋಸ್ವಾಮಿ
ಜೂಲನ್ ಗೋಸ್ವಾಮಿಗೆ ಗೆಲುವಿನ ವಿದಾಯ ನೀಡಿದ ಭಾರತ ಮಹಿಳಾ ಕ್ರಿಕೆಟ್ ತಂಡ
39 ವರ್ಷದ ಜೂಲನ್‌ಗೆ ಇಂಗ್ಲೆಂಡ್‌ ಆಟಗಾರ್ತಿಯರು ಗಾರ್ಡ್‌ ಆಫ್‌ ಆನರ್‌

Indian Womens Cricket team gave perfect farewell party to Jhulan Goswami retirement match kvn
Author
First Published Sep 25, 2022, 9:34 AM IST

ಲಂಡನ್‌(ಸೆ.25): ಎರಡು ದಶಕಗಳಿಗೂ ಹೆಚ್ಚು ಕಾಲ ಭಾರತ ತಂಡವನ್ನು ಪ್ರತಿನಿಧಿಸಿ, ಮಹಿಳಾ ಕ್ರಿಕೆಟ್‌ನ ಶ್ರೇಷ್ಠ ವೇಗದ ಬೌಲರ್‌ ಎನ್ನುವ ಹಿರಿಮೆ ಸಂಪಾದಿಸಿರುವ ಜೂಲನ್‌ ಗೋಸ್ವಾಮಿ ಶನಿವಾರ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯ ಅವರ ಕೊನೆಯ ಪಂದ್ಯವೆನಿಸಿತು. ಕ್ರಿಕೆಟ್‌ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್‌ನ 40ನೇ ಓವರಲ್ಲಿ ಬ್ಯಾಟ್‌ ಮಾಡಲು ಕ್ರೀಸ್‌ಗಿಳಿದ 39 ವರ್ಷದ ಜೂಲನ್‌ಗೆ ಇಂಗ್ಲೆಂಡ್‌ ಆಟಗಾರ್ತಿಯರು ಗಾರ್ಡ್‌ ಆಫ್‌ ಆನರ್‌ ನೀಡಿದರು. ಮಹಿಳಾ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಬೌಲರ್‌ ಎನ್ನುವ ದಾಖಲೆಯೊಂದಿಗೆ ಜೂಲನ್‌ ವಿದಾಯ ಹೇಳಿದರು.

ಪಂದ್ಯಕ್ಕೂ ಮೊದಲು ಭಾರತ ತಂಡ ಜೂಲನ್‌ಗೆ ಗೌರವ ಸಲ್ಲಿಸಿತು. ಈ ವೇಳೆ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೂಲನ್‌ರನ್ನು ತಬ್ಬಿಕೊಂಡು ಕಣ್ಣೀರಿಡುತ್ತಾ ಅವರ ಸಾಧನೆಗಳನ್ನು ಕೊಂಡಾಡಿದರು. ಟಾಸ್‌ ವೇಳೆ ಹರ್ಮನ್‌ಪ್ರೀತ್‌ ಜೊತೆ ಜೂಲನ್‌ ಸಹ ಇದ್ದಿದ್ದು ವಿಶೇಷ. ಅವರು ಭಾರತ ಪರ 12 ಟೆಸ್ಟ್‌, 204 ಏಕದಿನ, 68 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಭಾರತ 3-0 ಸರಣಿ ಕ್ಲೀನ್‌ಸ್ವೀಪ್‌

ಲಂಡನ್‌: ಇಂಗ್ಲೆಂಡ್‌ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ 16 ರನ್‌ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ 3 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದೆ. 23 ವರ್ಷಗಳ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ಸರಣಿ ಗೆದ್ದ ಸಾಧನೆಗೈದಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತಕ್ಕೆ ದೀಪ್ತಿ ಶರ್ಮಾ(ಔಟಾಗದೆ 68) ಹಾಗೂ ಸ್ಮೃತಿ ಮಂಧನಾ(50) ಅವರ ಅರ್ಧಶತಕಗಳು ಆಸರೆಯಾದವು. ಇವರಿಬ್ಬರ ಹೋರಾಟದ ಹೊರತಾಗಿಯೂ ಭಾರತ 45.4 ಓವರಲ್ಲಿ 169 ರನ್‌ಗೆ ಆಲೌಟ್‌ ಆಯಿತು. ಇಂಗ್ಲೆಂಡ್‌ ಪರ ಕೇಟ್‌ ಕ್ರಾಸ್‌ 26 ರನ್‌ಗೆ 4 ವಿಕೆಟ್‌ ಕಿತ್ತರು. ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ನಿರಂತರವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು.

ಹರ್ಮನ್‌ಪ್ರೀತ್ ಕೌರ್ ಸ್ಪೋಟಕ ಶತಕ; 23 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಏಕದಿನ ಸರಣಿ ಗೆದ್ದ ಭಾರತ..!

118 ರನ್‌ಗೆ 9 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಕೊನೆಯಲ್ಲಿ ಚಾರ್ಲಿ ಡೀನ್‌ರ ಆಟ ಗೆಲುವಿನ ಆಸೆಯನ್ನು ಕೈಬಿಡದಂತೆ ಮಾಡಿತು. ರೇಣುಕಾ ಸಿಂಗ್‌ 29 ರನ್‌ಗೆ 4 ವಿಕೆಟ್‌ ಕಿತ್ತರೆ, ಜೂಲನ್‌ 10 ಓವರಲ್ಲಿ 3 ಮೇಡನ್‌ ಸಹಿತ 30 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು.

Follow Us:
Download App:
  • android
  • ios