* ಇಂಗ್ಲೆಂಡ್ ನೆಲದಲ್ಲಿ ಮೊದಲ ಟೆಸ್ಟ್‌ ಗೆಲುವಿಗೆ 50ರ ಹರೆಯ* 1971ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಮೊದಲ ಸರಣಿ ಗೆದ್ದ ಭಾರತ* ಅಜಿತ್ ವಾಡೇಕರ್ ನೇತೃತ್ವದ ಟೀಂ ಇಂಡಿಯಾದಿಂದ ಐತಿಹಾಸಿಕ ಸಾಧನೆ

ಬೆಂಗಳೂರು(ಆ.24): ಭಾರತೀಯ ಕ್ರಿಕೆಟ್‌ ತಂಡವು ಕಳೆದ ಕೆಲವು ವರ್ಷಗಳಲ್ಲಿ ಇಂಗ್ಲೆಂಡ್‌ನಲ್ಲಿ ಹಲವು ಟೆಸ್ಟ್‌ ಗೆಲುವುಗಳನ್ನು ದಾಖಲಿಸಿದೆ. ಆದರೆ ಇಂಗ್ಲೆಂಡ್‌ ನೆಲದಲ್ಲಿ ಚೊಚ್ಚಲ ಟೆಸ್ಟ್‌ ಗೆಲುವನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 1971ರಲ್ಲಿ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್ ಗೆಲುವು ದಾಖಲಿಸಿತ್ತು. ಆ ಗೆಲುವು ದಾಖಲಿಸಿ ಇಂದಿಗೆ(ಆ.24) 50 ವರ್ಷಗಳ ಸಂಭ್ರಮ.

ಹೌದು, ಮನ್ಸೂರ್ ಅಲಿ ಖಾನ್ ಪಟೌಡಿ ಅವರಿಂದ 1971ರ ಜನವರಿಯಲ್ಲಿ ಅಜಿತ್ ವಾಡೇಕರ್ ಟೀಂ ಇಂಡಿಯಾ ನಾಯಕತ್ವ ಪಡೆದುಕೊಂಡರು. ಇದಾದ ಬಳಿಕ ಒಂದೇ ವರ್ಷದಲ್ಲಿ ಭಾರತ ಎರಡು ಸ್ಮರಣೀಯ ಟೆಸ್ಟ್‌ ಸರಣಿ ಗೆಲುವು ದಾಖಲಿಸಿತ್ತು. ಮೊದಲಿಗೆ ವೆಸ್ಟ್‌ ಇಂಡೀಸ್‌ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ 1-0 ಅಂತರದಲ್ಲಿ ಜಯಿಸಿತ್ತು. ಇದೇ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಟೀಂ ಇಂಡಿಯಾ, ಕ್ರಿಕೆಟ್ ಜನಕರ ನಾಡಾದ ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್‌ ಗೆಲುವು ದಾಖಲಿಸಿ ಬೀಗಿತ್ತು.

Scroll to load tweet…

ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ದಿಗ್ಗಜ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಗುಂಡಪ್ಪ ವಿಶ್ವನಾಥ್, ದಿಲೀಪ್ ಸರ್ದೇಸಾಯಿ, ಬಿಷನ್‌ ಸಿಂಗ್ ಬೇಡಿ, ಎರಪಳ್ಳಿ ಪ್ರಸನ್ನ ಅವರಂತಹ ಆಟಗಾರರು ಇಂಗ್ಲೆಂಡ್‌ನಲ್ಲಿ ಮೊದಲ ಟೆಸ್ಟ್‌ ಗೆಲುವಿಗೆ ಸಾಕ್ಷಿಯಾಗಿದ್ದರು. 

Scroll to load tweet…

ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಆತಿಥೇಯ ಇಂಗ್ಲೆಂಡ್ ಎದುರು ಪ್ರಾಬಲ್ಯ ಮರೆದಿತ್ತು. ಆದರೆ ಕೊನೆಗೆ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಓಲ್ಡ್‌ ಟ್ರಾಫೋರ್ಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಎರಡನೇ ಟೆಸ್ಟ್‌ ಪಂದ್ಯ ಕೂಡಾ ಡ್ರಾನಲ್ಲಿ ಅಂತ್ಯವಾಗಿತ್ತು. ಇನ್ನು ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಓವೆಲ್‌ ಮೈದಾನ ಸಾಕ್ಷಿಯಾಗಿತ್ತು.

Ind vs Eng ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಇಂಗ್ಲೆಂಡ್ ಮಾರಕ ವೇಗಿ..!

ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ತಂಡವನ್ನು 355 ರನ್‌ಗಳಿಗೆ ಆಲೌಟ್ ಮಾಡಿದರು. ಬಿಷನ್ ಸಿಂಗ್ ಬೇಡಿ ಹಾಗೂ ಏಕಾಂತ್ ಸೋಲ್ಕರ್ ಒಟ್ಟಾಗಿ 9 ವಿಕೆಟ್ ಕಬಳಿಸಿದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ 284 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು 71 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಬಿ.ಎಸ್‌. ಚಂದ್ರಶೇಖರ್ ಇನ್ನಿಲ್ಲದಂತೆ ಕಾಡಿದರು. ಚಂದ್ರಶೇಖರ್ 6 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್‌ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 101 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. 

ಕೇವಲ 173 ರನ್‌ಗಳ ಗುರಿ ಪಡೆದ ಭಾರತ ತಂಡವು 4 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿ ಇಂಗ್ಲೆಂಡ್‌ ನೆಲದಲ್ಲಿ ಚಾರಿತ್ರ್ಯಿಕ ಸಾಧನೆ ಮಾಡಿತು. ಇದಷ್ಟೇ ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ 1-0 ಅಂತರದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ದಾಖಲಿಸಿ ಸಂಭ್ರಮಿಸಿತ್ತು.