ಲಿಟ್ಲ್ ಮಾಸ್ಟರ್ ಸುನಿಲ್ ಗವಾಸ್ಕರ್‌ಗೆ 74ನೇ ಜನ್ಮದಿನದ ಸಂಭ್ರಮ; ಸನ್ನಿಗೆ ಶುಭ ಕೋರಿದ ಕ್ರಿಕೆಟ್ ಜಗತ್ತು..!
74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್
ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ಐತಿಹಾಸಿಕ ದಾಖಲೆ ನಿರ್ಮಿಸಿದ್ದ ಸನ್ನಿ
ಲಿಟ್ಲ್ ಮಾಸ್ಟರ್ ಹುಟ್ಟುಹಬ್ಬಕ್ಕೆ ಹರಿದು ಬಂತು ಶುಭಾಶಯಗಳ ಮಹಾಪೂರ
ನವದೆಹಲಿ(ಜು.10): ಭಾರತ ಕ್ರಿಕೆಟ್ ತಂಡದ ದಿಗ್ಗಜ ಕ್ರಿಕೆಟಿಗ, ಲಿಟ್ಲ್ ಮಾಸ್ಟರ್ ಖ್ಯಾತಿಯ ಸುನಿಲ್ ಗವಾಸ್ಕರ್ 74ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಸುನಿಲ್ ಗವಾಸ್ಕರ್ ಅವರ ಹುಟ್ಟುಹಬ್ಬಕ್ಕೆ ಕ್ರಿಕೆಟ್ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.
80ರ ದಶಕದಲ್ಲಿ ಮಾರಕ ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುವ ಮೂಲಕ ಹಲವಾರು ಬ್ಯಾಟಿಂಗ್ ದಾಖಲೆಗಳನ್ನು ನಿರ್ಮಿಸಿದ್ದ ಸುನಿಲ್ ಗವಾಸ್ಕರ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಸನ್ನಿ', ಲಿಟ್ಲ್ ಮಾಸ್ಟರ್ ಎಂದೆಲ್ಲಾ ಕರೆಯುತ್ತಾರೆ. 1971ರಿಂದ 1987ರ ವರೆಗೆ ಸುನಿಲ್ ಗವಾಸ್ಕರ್, ಭಾರತ ತಂಡದ ಪರ ಹಲವಾರು ಅವಿಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಸ್ಪರ್ಧಾತ್ಮಕ ಪಿಚ್‌ಗಳಲ್ಲಿಯೂ ಅವಿಸ್ಮರಣೀಯ ಇನಿಂಗ್ಸ್ ಆಡುವ ಮೂಲಕ ಸುನಿಲ್ ಗವಾಸ್ಕರ್ ದಿಗ್ಗಜ ಕ್ರಿಕೆಟಿಗರಾಗಿ ಬೆಳೆದು ನಿಂತಿದ್ದರು.
ಮುಂಬೈನ ಧೂಳು ಮಿಶ್ರಿತ ಪಿಚ್‌ನಲ್ಲಿ ಕ್ರಿಕೆಟ್ ಆಡುವುದನ್ನು ಶುರ ಮಾಡಿದ ಸುನಿಲ್ ಗವಾಸ್ಕರ್, ವೆಸ್ಟ್ ಇಂಡೀಸ್‌ನ ಬೌನ್ಸಿ ಪಿಚ್‌ನಿಂದ ಹಿಡಿದು ಭಾರತದ ಟರ್ನಿಂಗ್ ಪಿಚ್‌ನಲ್ಲೂ ಆಕರ್ಷಕ ಶತಕ ಸಿಡಿಸುವ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಜಗತ್ತಿನ ಮೊದಲ ಕ್ರಿಕೆಟಿಗ, ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ಹೆಗ್ಗಳಿಕೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. ಗವಾಸ್ಕರ್, ವೆಸ್ಟ್ ಇಂಡೀಸ್ ಎದುರಿನ ಪಾದಾರ್ಪಣೆ ಪಂದ್ಯದಲ್ಲಿ 774 ರನ್ ಬಾರಿಸಿದ್ದರು.
ಒನ್ ಡೇ ವಿಶ್ವಕಪ್ ಬಗ್ಗೆ ಮತ್ತೆ ಪಾಕಿಸ್ತಾನ ಕಿರಿಕ್..! ಪಾಕಿಸ್ತಾನದ ಕ್ರೀಡಾ ಸಚಿವ ತಕರಾರು..!
ಭಾರತ ತಂಡವು 1983ರ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ಸುನಿಲ್ ಗವಾಸ್ಕರ್, ಭಾರತ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಸುನಿಲ್ ಗವಾಸ್ಕರ್, ಸಾಕಷ್ಟು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆಯನ್ನು ಹೊಂದಿದ್ದರು. ಸುನಿಲ್ ಗವಾಸ್ಕರ್, ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕ ಹಾಗೂ 45 ಅರ್ಧಶತಕ ಸಿಡಿಸಿ ಮಿಂಚಿದ್ದರು. ಇಂದಿಗೂ ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಕೆಲವು ದಾಖಲೆಗಳು ಅಚ್ಚಳಿಯದೇ ಉಳಿದಿವೆ.
1987ರ ಮಾರ್ಚ್‌ನಲ್ಲಿ ಸುನಿಲ್ ಗವಾಸ್ಕರ್, ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಇತಿಹಾಸ ನಿರ್ಮಿಸಿದ್ದರು. ಆ ಕಾಲದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸುವುದು ಕಲ್ಪನೆ ಮಾಡಿಕೊಳ್ಳುವುದು ಕಷ್ಟ ಎನಿಸಿತ್ತು. ಅಂತಿಮವಾಗಿ ಸುನಿಲ್ ಗವಾಸ್ಕರ್, 125 ಟೆಸ್ಟ್ ಪಂದ್ಯಗಳನ್ನಾಡಿ 51.1ರ ಬ್ಯಾಟಿಂಗ್ ಸರಾಸರಿಯಲ್ಲಿ 34 ಶತಕ ಹಾಗೂ 45 ಅರ್ಧಶತಕ ಸಹಿತ 10,122 ರನ್ ಬಾರಿಸಿದ್ದರು. ಇನ್ನು ಸುನಿಲ್ ಗವಾಸ್ಕರ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಿಕ್ಕಷ್ಟು ಯಶಸ್ಸು ಏಕದಿನ ಕ್ರಿಕೆಟ್‌ನಲ್ಲಿ ಸಿಗಲಿಲ್ಲ. ಗವಾಸ್ಕರ್, ಭಾರತ ಪರ 108 ಏಕದಿನ ಪಂದ್ಯಗಳನ್ನಾಡಿ 1 ಶತಕ ಹಾಗೂ 27 ಅರ್ಧಶತಕ ಸಹಿತ 3,092 ರನ್ ಬಾರಿಸಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ(34) ಬ್ರೇಕ್ ಮಾಡುವುದು ಅಸಾಧ್ಯ ಎನ್ನುವಂತೆ ಬಿಂಬಿತವಾಗಿತ್ತು. ಆದರೆ 2005ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಈ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು. 1970 ಹಾಗೂ 80ರ ದಶಕಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಜೋಯೆಲ್ ಗಾರ್ನರ್, ಮೈಕೆಲ್ ಹೋಲ್ಡಿಂಗ್ಸ್, ಮಾಲ್ಕಮ್ ಮಾರ್ಷಲ್ ಅವರಂತಹ ಮಾರಕ ವೇಗಿಗಳನ್ನು ಹೊಂದಿತ್ತು. ಅಂತಹ ವೆಸ್ಟ್ ಇಂಡೀಸ್ ಎದುರು ಸುನಿಲ್ ಗವಾಸ್ಕರ್ 27 ಟೆಸ್ಟ್ ಪಂದ್ಯಗಳನ್ನಾಡಿ 13 ಶತಕ ಸಿಡಿಸಿದ್ದರು. ವಿಂಡೀಸ್ ವೇಗಿಗಳೆದುರು ಎದುರಾಳಿ ತಂಡದ ಬ್ಯಾಟರ್‌ಗಳು ಬ್ಯಾಟ್ ಮಾಡಲು ಹೆದರುತ್ತಿದ್ದ ಕಾಲದಲ್ಲಿ ಗವಾಸ್ಕರ್ ಕೆಚ್ಚೆದೆಯ ಬ್ಯಾಟಿಂಗ್ ಮೂಲಕ ಮಿಂಚಿದ್ದರು.
ಇನ್ನು ಸುನಿಲ್ ಗವಾಸ್ಕರ್ ಹುಟ್ಟುಹಬ್ಬಕ್ಕೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಹಲವು ಮಂದಿ ಶುಭ ಹಾರೈಸಿದ್ದಾರೆ.