ನವದೆಹಲಿ(ಜ.04): ಭಾರತದ ತಾರಾ ಮಹಿಳಾ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್‌, ವೇದಾ ಕೃಷ್ಣಮೂರ್ತಿ ಮತ್ತು ದೀಪ್ತಿ ಶರ್ಮಾ, ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಕ್ಲಬ್‌ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ. 

1971ರಲ್ಲಿ ಆರಂಭವಾದ ಫಾಲ್ಕನ್‌ ಸ್ಪೋರ್ಟ್ಸ್ ಕ್ಲಬ್‌ 50 ವರ್ಷ ಪೂರ್ಣಗೊಳಿಸಿದೆ. ಈ ಸುವರ್ಣ ಮಹೋತ್ಸವದ ಅಂಗವಾಗಿ ಜ.4 ರಿಂದ 12 ರವರೆಗೆ ಟಿ20 ಕ್ರಿಕೆಟ್‌ ಟೂರ್ನಿ ಆಯೋಜಿಸಲಾಗಿದೆ. ಥಣಿಸಂದ್ರ ಬಳಿ ಇರುವ ಸಂಪ್ರಸಿದ್ಧಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ. ಟೂರ್ನಿಯಲ್ಲಿ ಫಾಲ್ಕನ್‌ ಹೆರಾನ್ಸ್‌ ಸ್ಪೋರ್ಟ್ಸ್‍, ಫಾಲ್ಕನ್‌ ಶೀನ್‌ ಸ್ಪೋರ್ಟ್ಸ್‌‍, ಫಾಲ್ಕನ್‌ ಕಿನಿ ಆರ್‌ಆರ್‌ ಸ್ಪೋರ್ಟ್ಸ್‌ ಹಾಗೂ ಅಮೆಯಾ ಸ್ಪೋರ್ಟ್ಸ್‌ ಎಂಬ 4 ತಂಡಗಳು ಪಾಲ್ಗೊಳ್ಳಲಿವೆ ಎಂದು ಭಾರತ ಮಹಿಳಾ ಕ್ರಿಕೆಟ್‌ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಹೇಳಿದರು.

16 ರಿಂದ 19 ವರ್ಷದೊಳಗಿನ ಆಟಗಾರ್ತಿಯರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ಜೊತೆಗೆ ಹಿರಿಯ ಆಟಗಾರ್ತಿಯರಾದ ರಾಜೇಶ್ವರಿ ಗಾಯಕ್ವಾಡ್‌, ಪೂನಮ್‌ ರಾವತ್‌, ರಾಧಾ ಯಾದವ್‌, ವನಿತಾ ವಿ.ಆರ್‌, ನುಜತ್‌ ಪವೀರ್ನ್‌‌, ಅನುಜಾ ಪಾಟೀಲ್‌ ಮತ್ತು ತಿರುಷ್‌ ಕಾಮಿನಿ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಮಟ್ಟ, ದಕ್ಷಿಣ ವಲಯ, ಮತ್ತು ಕರ್ನಾಟಕ ರಾಜ್ಯ ಹೀಗೆ 3 ಗುಂಪಿನಿಂದ ತಲಾ 4 ಆಟಗಾರ್ತಿಯರನ್ನು ಆಯ್ಕೆ ಮಾಡಿ 4 ತಂಡಗಳಾಗಿ ವಿಂಗಡಿಸಲಾಗಿದೆ.

ನಿಯಮ ಪಾಲಿಸಲು ಆಗಲ್ಲ ಅಂದ್ರೆ ಇಲ್ಲಿಗೆ ಬರಬೇಡಿ; ಟೀಂ ಇಂಡಿಯಾ ಆಟಗಾರರಿಗೆ ಖಡಕ್ ವಾರ್ನಿಂಗ್

ತಂಡಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪವರ್‌ಪ್ಲೇನಲ್ಲಿ 45ಕ್ಕೂ ಹೆಚ್ಚು ರನ್‌ ಅಥವಾ 3 ವಿಕೆಟ್‌ ಪಡೆಯುವ ತಂಡಕ್ಕೆ 1 ಬೋನಸ್‌ ಅಂಕ ನೀಡಲಾಗುವುದು. ಪ್ರತಿ ತಂಡದಲ್ಲಿ ಅಂಡರ್‌ 19 ಆಟಗಾರ್ತಿಯರನ್ನು ಸೇರಿಸಿಕೊಳ್ಳವುದು ಕಡ್ಡಾಯವಾಗಿದೆ.

ಸೀಮಿತ ಪ್ರೇಕ್ಷಕರಿಗೆ ಅವಕಾಶ:

ಕೆಎಸ್‌ಸಿಎ ನಿಗದಿಪಡಿಸಿರುವ ಎಸ್‌ಒಪಿ ಅಡಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತಿದ್ದು, ಸೀಮಿತ ಪ್ರೇಕ್ಷಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶವಿದೆ. ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ, ಹೊರರಾಜ್ಯ ಆಟಗಾರ್ತಿಯರಿಗೆ ಕಡ್ಡಾಯ ಕೋವಿಡ್‌ ಪರೀಕ್ಷಾ ವರದಿಯೊಂದಿಗೆ ಆಗಮಿಸಲು ಸೂಚಿಸಲಾಗಿದೆ.