ಚೆನ್ನೈ[ಡಿ.15]: ವೆಸ್ಟ್‌ಇಂಡೀಸ್‌ ವಿರುದ್ಧ ಗೆಲುವಿನ ಮೇಲೆ ಗೆಲುವುಗಳನ್ನು ಕಾಣುತ್ತಿರುವ ಭಾರತ, ಭಾನುವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಕೆರಿಬಿಯನ್‌ ತಂಡದ ವಿರುದ್ಧ ಸತತ 10ನೇ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿನ ಸಂಭ್ರಮವನ್ನು ಆಚರಿಸಲು ಕಾಯುತ್ತಿದೆ. ಜತೆಗೆ 2019 ಅನ್ನು ಭರ್ಜರಿಯಾಗಿ ಮುಕ್ತಾಯಗೊಳಿಸುವುದು ಸಹ ತಂಡದ ಗುರಿಯಾಗಿದೆ.

ಭಾನುವಾರ ನಡೆಯಲಿರುವ ಮೊದಲ ಪಂದ್ಯಕ್ಕೆ ಇಲ್ಲಿನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಕಳೆದೆರಡು ದಿನಗಳಿಂದ ಚೆನ್ನೈನಲ್ಲಿ ಮಳೆಯಾಗಿದ್ದು, ಭಾರತ ಹಾಗೂ ವಿಂಡೀಸ್‌ ತಂಡಗಳ ಅಭ್ಯಾಸಕ್ಕೆ ಅಡ್ಡಿಯಾಯಿತು. ಭಾನುವಾರ ಸಹ ಮಳೆ ಬೀಳುವ ಸಾಧ್ಯತೆ ಇದ್ದು, ಪಂದ್ಯದಲ್ಲಿ ಓವರ್‌ಗಳು ಕಡಿತಗೊಳ್ಳಬಹುದು.

ಆತಿಥೇಯ ತಂಡಕ್ಕೆ ವೇಗಿ ಭುವನೇಶ್ವರ್‌ ಕುಮಾರ್‌ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ರ ಸೇವೆ ಲಭ್ಯವಾಗುವುದಿಲ್ಲ. ಮುಂಬೈನ ಶಾರ್ದೂಲ್‌ ಠಾಕೂರ್‌ರನ್ನು ಭುವನೇಶ್ವರ್‌ ಬದಲಿಗೆ ಕರೆಸಿಕೊಳ್ಳಲಾಗಿದ್ದು, ಧವನ್‌ ಬದಲು ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ತಂಡ ಸೇರಿದ್ದಾರೆ. ಮಯಾಂಕ್‌ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುತ್ತಾರೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಮೇಲೆ ಎಲ್ಲರ ಕಣ್ಣಿದೆ. ಧವನ್‌ ಅನುಪಸ್ಥಿತಿಯಲ್ಲಿ ರಾಹುಲ್‌ ಆರಂಭಿಕನಾಗಿ ಆಡುವ ಅವಕಾಶ ಪಡೆಯಲಿದ್ದಾರೆ. ಟಿ20 ಸರಣಿಯಲ್ಲಿ 2 ಅರ್ಧಶತಕ ಸಿಡಿಸಿದ್ದ ರಾಹುಲ್‌, ತಮ್ಮ ಬ್ಯಾಟಿಂಗ್‌ ಲಯವನ್ನು ಮುಂದುವರಿಸಿ ಏಕದಿನ ತಂಡದಲ್ಲೂ ಖಾಯಂ ಸ್ಥಾನ ಗಳಿಸುವ ವಿಶ್ವಾಸದಲ್ಲಿದ್ದಾರೆ.

4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಆಡಲಿದ್ದು, ದೀರ್ಘಾವಧಿಗೆ ಸ್ಥಾನ ಉಳಿಸಿಕೊಳ್ಳಲು ಈ ಸರಣಿ ನೆರವಾಗಲಿದೆ. ರಿಷಭ್‌ ಪಂತ್‌ ಮತ್ತೊಮ್ಮೆ ಒತ್ತಡದಲ್ಲಿದ್ದಾರೆ. ಅವರ ಮೇಲೆ ತಂಡವಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಬೇಕಿದ್ದರೆ ದೊಡ್ಡ ಇನ್ನಿಂಗ್ಸ್‌ ಆಡಬೇಕಿದೆ. ಕೇದಾರ್‌ ಜಾಧವ್‌ಗೆ ಸ್ಥಾನ ನೀಡಿರುವುದನ್ನು ಹಲವರು ಪ್ರಶ್ನಿಸಿದ್ದಾರೆ. ಜಾಧವ್‌ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಒಂದೊಮ್ಮೆ ಅವರು ವೈಫಲ್ಯ ಕಂಡರೆ, ಬಹುಶಃ ಇದು ಅವರ ಕೊನೆ ಸರಣಿ ಆಗಲಿದೆ. ಆಲ್ರೌಂಡರ್‌ ಶಿವಂ ದುಬೆ, ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸ್ಪಿನ್‌ ಜೋಡಿಯಾದ ಯಜುವೇಂದ್ರ ಚಹಲ್‌ ಹಾಗೂ ಕುಲ್ದೀಪ್‌ ಯಾದವ್‌, ವಿಶ್ವಕಪ್‌ ಬಳಿಕ ಒಟ್ಟಿಗೆ ಆಡಿಲ್ಲ. ಚೆಪಾಕ್‌ನ ಪಿಚ್‌ ಸ್ಪಿನ್‌ ಸ್ನೇಹಿಯಾಗಿರುವ ಕಾರಣ, ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಅನುಭವಿ ವೇಗಿ ಮೊಹಮದ್‌ ಶಮಿ ಹಾಗೂ ದೀಪಕ್‌ ಚಹರ್‌ ಕಣಕ್ಕಿಳಿಯುವುದು ಬಹುತೇಕ ಖಚಿತ. ವಿಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಭಾರತೀಯ ಬೌಲರ್‌ಗಳಿಗೆ ಸವಾಲಾಗಿ ಪರಿಣಮಿಸಲಿದೆ.

ಆಡ್ತಾರಾ ಲೆವಿಸ್‌?:

ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಎವಿನ್‌ ಲೆವಿಸ್‌ 3ನೇ ಟಿ20 ವೇಳೆ ಗಾಯಗೊಂಡಿದ್ದರು. ಅವರು ಮೊದಲ ಏಕದಿನದಲ್ಲಿ ಆಡಲು ಫಿಟ್‌ ಆಗಿದ್ದಾರೆಯೇ ಎನ್ನುವ ಮಾಹಿತಿಯನ್ನು ವಿಂಡೀಸ್‌ ತಂಡ ಬಹಿರಂಗಗೊಳಿಸಿಲ್ಲ. ಲೆವಿಸ್‌ ಕಣಕ್ಕಿಳಿದರೆ ವಿಂಡೀಸ್‌ ಬ್ಯಾಟಿಂಗ್‌ ಪಡೆಯ ಬಲ ಹೆಚ್ಚಲಿದೆ. ಶಿಮ್ರನ್‌ ಹೆಟ್ಮೇಯರ್‌, ಶಾಯ್‌ ಹೋಪ್‌, ನಿಕೋಲಸ್‌ ಪೂರನ್‌, ರೋಸ್ಟನ್‌ ಚೇಸ್‌, ಕೀರನ್‌ ಪೊಲ್ಲಾರ್ಡ್‌ರಂತಹ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ವಿಂಡೀಸ್‌ ಹೊಂದಿದೆ.

ಶೆಲ್ಡನ್‌ ಕಾಟ್ರೆಲ್‌ ತಂಡದ ಬೌಲಿಂಗ್‌ ಪಡೆ ಮುನ್ನಡೆಸಲಿದ್ದಾರೆ. ಜೇಸನ್‌ ಹೋಲ್ಡರ್‌, ಸ್ಪಿನ್ನರ್‌ ಹೇಡನ್‌ ವಾಲ್‌್ಶ ವಿರುದ್ಧ ರನ್‌ ಗಳಿಸುವುದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವಾಗಬಹುದು.

ಐಸಿಸಿ ಏಕದಿನ ರಾರ‍ಯಂಕಿಂಗ್‌

ಭಾರತ: 02

ವಿಂಡೀಸ್‌: 09

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕೇದಾರ್‌ ಜಾಧವ್‌, ಶಿವಂ ದುಬೆ, ದೀಪಕ್‌ ಚಹರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಮೊಹಮದ್‌ ಶಮಿ.

ವಿಂಡೀಸ್‌: ಸುನಿಲ್‌ ಆ್ಯಂಬ್ರಿಸ್‌, ಶಾಯ್‌ ಹೋಪ್‌, ರೋಸ್ಟನ್‌ ಚೇಸ್‌, ಹೆಟ್ಮೇಯರ್‌, ನಿಕೋಲಸ್‌ ಪೂರನ್‌, ಪೊಲ್ಲಾರ್ಡ್‌(ನಾಯಕ), ರೊಮಾರಿಯಾ ಶೆಫರ್ಡ್‌, ಖಾರಿ ಪಿಯೆರ್‌, ಹೇಡನ್‌ ವಾಲ್‌್ಶ, ಕೀಮೋ ಪೌಲ್‌, ಶೆಲ್ಡನ್‌ ಕಾಟ್ರೆಲ್‌.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಪಿಚ್‌ ರಿಪೋರ್ಟ್‌

ಚೆಪಾಕ್‌ ಪಿಚ್‌ ಸ್ಪಿನ್ನರ್‌ಗಳಿಗೆ ನೆರವು ನೀಡಲಿದ್ದು, ಭಾರತ ಕುಲ್ದೀಪ್‌ ಹಾಗೂ ಚಹಲ್‌ ಇಬ್ಬರನ್ನೂ ಆಡಿಸುವ ನಿರೀಕ್ಷೆ ಇದೆ. ಕಳೆದೆರಡು ದಿನಗಳಿಂದ ಮಳೆ ಬೀಳುತ್ತಿರುವ ಕಾರಣ, ಪಿಚ್‌ನಲ್ಲಿ ತೇವಾಂಶವಿರಲಿದ್ದು, ಚೆಂಡು ಬ್ಯಾಟ್‌ಗೆ ಸುಲಭವಾಗಿ ತಲುಪುವುದಿಲ್ಲ. ಮೊದಲ ಬ್ಯಾಟ್‌ ಮಾಡುವ ತಂಡ 280ಕ್ಕಿಂತ ಹೆಚ್ಚಿನ ಮೊತ್ತ ದಾಖಲಿಸಿದರೆ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ.