ಇಂಡೋ-ವಿಂಡೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿರುವ 15 ಆಟಗಾರರ ಪೈಕಿ 8ರಿಂದ 10 ಆಟಗಾರರು ಯಾರೆಂಬುದು ಈಗಾಗಲೇ ನಿರ್ಧಾರವಾಗಿದೆ. ಇನ್ನುಳಿದ ಸ್ಥಾನಗಳಿಗೆ ಭಾರೀ ಪೈಪೋಟಿ ಇದೆ.
ಹೈದರಾಬಾದ್[ಡಿ.06]: ಹಾಲಿ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಶುಕ್ರವಾರ ಚಾಲನೆ ಸಿಗಲಿದ್ದು, ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ. 2020ರ ಟಿ20 ವಿಶ್ವಕಪ್ಗೆ ಭಾರತ ತಂಡದ ತಯಾರಿ ಮುಂದುವರಿಯಲಿದ್ದು, ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ರಿಷಭ್ ಪಂತ್ ಸೇರಿದಂತೆ ಇನ್ನೂ ಕೆಲವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ.
ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿರುವ 15 ಆಟಗಾರರ ಪೈಕಿ 8ರಿಂದ 10 ಆಟಗಾರರು ಯಾರೆಂಬುದು ಈಗಾಗಲೇ ನಿರ್ಧಾರವಾಗಿದೆ. ಇನ್ನುಳಿದ ಸ್ಥಾನಗಳಿಗೆ ಭಾರೀ ಪೈಪೋಟಿ ಇದೆ. ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ನಡೆದಿದ್ದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತ, ಈ ಸರಣಿಯಲ್ಲಿ ಕೆಲ ಪ್ರಮುಖ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಎದುರು ನೋಡುತ್ತಿದೆ.
ಇನ್ನೊಂದೇ ಸಿಕ್ಸರ್, ಅಪರೂಪದ ದಾಖಲೆ ಬರೆಯಲು ರೋಹಿತ್ ರೆಡಿ
ತಂಡ ಗುರಿ ಬೆನ್ನತ್ತುವಾಗ ತೋರುವ ಬ್ಯಾಟಿಂಗ್ ಪ್ರದರ್ಶನವನ್ನು, ಮೊದಲು ಬ್ಯಾಟ್ ಮಾಡುವಾಗ ತೋರಲು ಸಾಧ್ಯವಾಗುತ್ತಿಲ್ಲ. ತಂಡದ ಬ್ಯಾಟಿಂಗ್ ಪಡೆಯ ಈ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಸಿಗಬೇಕಿದೆ. ಬಾಂಗ್ಲಾ ವಿರುದ್ಧ ಟಿ20 ಸರಣಿಯನ್ನು ಆಡದ ನಾಯಕ ವಿರಾಟ್ ಕೊಹ್ಲಿ, ಈ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಅವರ ಪುನರಾಗಮನ ಬ್ಯಾಟಿಂಗ್ ಬಲ ಹೆಚ್ಚಿಸಲಿದೆ. ಶಿಖರ್ ಧವನ್ ಗಾಯಗೊಂಡು ಹೊರಬಿದ್ದಿರುವ ಕಾರಣ, ಕೆ.ಎಲ್.ರಾಹುಲ್ಗೆ ಮತ್ತೊಂದು ಉತ್ತಮ ಅವಕಾಶ ದೊರೆತಿದೆ. ರೋಹಿತ್ ಶರ್ಮಾ ಜತೆ ಇನ್ನಿಂಗ್ಸ್ ಆರಂಭಿಸಲಿರುವ ರಾಹುಲ್, ಇತ್ತೀಚೆಗೆ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಭರ್ಜರಿ ಆಟವಾಡಿದ್ದರು. ಅದೇ ಲಯವನ್ನು ವಿಂಡೀಸ್ ವಿರುದ್ಧವೂ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.
ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಸ್ಥಿರತೆ ಕಾಯ್ದುಕೊಳ್ಳುವುದು ಈ ಮೂವರಿಗಿರುವ ಸವಾಲು. ಶಿವಂ ದುಬೆ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ನಡುವೆ 2 ಸ್ಥಾನಗಳಿಗೆ ಪೈಪೋಟಿ ಇದೆ. ಮೊಹಮದ್ ಶಮಿ ತಂಡದಲ್ಲಿದ್ದರೂ, ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಭುವನೇಶ್ವರ್ ಕುಮಾರ್ ಹಾಗೂ ದೀಪಕ್ ಚಹರ್ ವೇಗಿಗಳಾಗಿ ಕಣಕ್ಕಿಳಿಯಲಿದ್ದಾರೆ.
ಟಿ20 ವಿಶ್ವಕಪ್: ಬೌಲಿಂಗ್‌ನಲ್ಲಿ 1 ಸ್ಥಾನ ಮಾತ್ರ ಬಾಕಿ; ತಂಡ ಬಹಿರಂಗ ಪಡಿಸಿದ ಕೊಹ್ಲಿ!
ವಿಂಡೀಸ್‌ಗಿಲ್ಲ ತಾರೆಗಳ ಬಲ: ವೆಸ್ಟ್‌ಇಂಡೀಸ್ ತಂಡಕ್ಕೆ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್‌ವೇಟ್‌ರಂತಹ ಟಿ20 ತಜ್ಞ ಆಟಗಾರರ ಅನುಪಸ್ಥಿತಿ ಕಾಡಲಿದೆ. ವಿಶ್ವಕಪ್ಗೆ ಸಿದ್ಧತೆ ಆರಂಭಿಸಲು ವಿಂಡೀಸ್‌ಗಿದು ಸೂಕ್ತ ಸಮಯವೆನಿಸಿದ್ದು, ಯುವ ಪ್ರತಿಭೆಗಳನ್ನು ಕಣಕ್ಕಿಳಿಸಲಿದೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಮೋಘ ಪ್ರದರ್ಶನ ತೋರಿದ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ.
ಪಿಚ್ ರಿಪೋರ್ಟ್
ರಾಜೀವ್ ಗಾಂಧಿ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ತವರು ಮೈದಾನವಾಗಿರುವ ಇಲ್ಲಿ, ವೇಗಿಗಳು ಯಶಸ್ಸು ಸಾಧಿಸಿದ್ದಾರೆ. ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ದೊರೆಯಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೊಹ್ಲಿ(ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್.
ವಿಂಡೀಸ್: ಎವಿನ್ ಲೆವಿಸ್, ಲೆಂಡ್ಲ್ ಸಿಮನ್ಸ್, ಬ್ರಾಂಡನ್ ಕಿಂಗ್, ಹೆಟ್ಮೇಯರ್, ಪೊಲ್ಲಾರ್ಡ್(ನಾಯಕ), ರಾಮ್‌ದಿನ್, ಜೇಸನ್ ಹೋಲ್ಡರ್, ಖಾರಿ ಪಿಯೇರ್/ಕೀಮೋ ಪೌಲ್, ಫ್ಯಾಬಿಯನ್ ಆ್ಯಲೆನ್, ಹೇಡನ್ ವಾಲ್ಷ್, ಶೆಲ್ಡನ್ ಕಾಟ್ರೆಲ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1