ಸೇಡಿನ ಕದನ: ಇಂಡೋ-ಪಾಕ್ ಪಂದ್ಯಕ್ಕೂ ಮುನ್ನ ಫ್ಯಾನ್ಸ್ ನಡುವೆ ಶುರುವಾಯ್ತು 'ಮೀಮ್ಸ್ ವಾರ್'..!
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 27ರಿಂದ ಆರಂಭ
ಆಗಸ್ಟ್ 28ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ
ಸೋಷಿಯಲ್ ಮೀಡಿಯಾದಲ್ಲಿ ಶುರುವಾಯ್ತು ಫ್ಯಾನ್ಸ್‌ಗಳ ವಾರ್
ದುಬೈ(ಆ.26): ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿರುವ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 28ರಂದು ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸಲಿವೆ. ಇದೆಲ್ಲದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಉಭಯ ದೇಶಗಳ ಅಭಿಮಾನಿಗಳು ಮೀಮ್ಸ್ ವಾರ್ ಆರಂಭಿಸಿದ್ದು, ಪಂದ್ಯಕ್ಕೂ ಮುನ್ನ ಕ್ರೇಜ್ ಹೆಚ್ಚಿಸಿದ್ದಾರೆ.
15ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಎರಡನೇ ದಿನ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಒಂದು ವರ್ಷದ ಹಿಂದೆ ಇದೇ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಕಾದಾಡಿದ್ದವು. ಆ ಪಂದ್ಯದಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು 10 ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಮೊಟ್ಟಮೊದಲ ಬಾರಿಗೆ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು.
ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮುಗ್ಗರಿಸಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯಲ್ಲಿ ತಾನು ಸೋತ ನೆಲದಲ್ಲಿಯೇ ಪಾಕಿಸ್ತಾನಕ್ಕೆ ತಿರುಗೇಟು ನೀಡಲು ಸಜ್ಜಾಗಿದೆ. ಎರಡು ತಂಡದಲ್ಲೂ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಹಾಗೂ ಪಾಕಿಸ್ತಾನದ ಶಾಹೀನ್ ಅಫ್ರಿದಿ ಹೊರಬಿದ್ದಿದ್ದು, ಎಲ್ಲರ ಚಿತ್ತ ಉಭಯ ತಂಡಗಳ ಬ್ಯಾಟರ್ ಮೇಲಿದ್ದು, ರನ್ ಮಳೆ ಹರಿಯುವ ಸಾಧ್ಯತೆಯಿದೆ.
Asia Cup 2022 ಬಾಬರ್ ಅಜಂ ಬಳಿಕ ಪಾಕ್ ಲೆಜೆಂಡ್ ಮೊಹಮ್ಮದ್ ಯೂಸುಫ್ ಮಾತಾಡಿಸಿದ ವಿರಾಟ್ ಕೊಹ್ಲಿ..!
ಇನ್ನು ಏಷ್ಯಾಕಪ್ ಟೂರ್ನಿಯು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಲಿಗೆ ಕಮ್‌ಬ್ಯಾಕ್ ಸರಣಿ ಎನಿಸಿದೆ. ಬರೋಬ್ಬರಿ 6 ವಾರಗಳ ವಿಶ್ರಾಂತಿಯ ಬಳಿಕ ವಿರಾಟ್ ಕೊಹ್ಲಿ, ಮೈದಾನಕ್ಕಿಳಿಯಲು ಸಜ್ಜಾಗಿದ್ದು, ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವ ಕುತೂಹಲ ಜೋರಾಗಿದೆ. ಟೀಂ ಇಂಡಿಯಾ ರನ್ ಮಷೀನ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬ್ಯಾಟಿಂದ ಇತ್ತೀಚಿಗಿನ ವರ್ಷಗಳಲ್ಲಿ ದೊಡ್ಡ ಇನಿಂಗ್ಸ್ ಮೂಡಿ ಬರುತ್ತಿಲ್ಲ. ಹೀಗಾಗಿ ಪಾಕ್ ಎದುರು ವಿರಾಟ್ ಕೊಹ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಲಿ ಎನ್ನುವುದು ಅವರ ಅಪಾರ ಅಭಿಮಾನಿಗಳ ಹಾರೈಕೆಯಾಗಿದೆ.