Asianet Suvarna News Asianet Suvarna News

Ind vs NZ 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಶುರು: ಹಾರ್ದಿಕ್ ಪಾಂಡ್ಯ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಟಿ20 ಸರಣಿಗೆ ಕ್ಷಣಗಣನೆ
ನವೆಂಬರ್ 18ರಿಂದ ಆರಂಭವಾಗಲಿದೆ 3 ಪಂದ್ಯಗಳ ಟಿ20 ಸರಣಿ
ಈಗಿನಿಂದಲೇ 2024ರ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ದತೆ ಆರಂಭ ಎಂದ ಹಾರ್ದಿಕ್ ಪಾಂಡ್ಯ

India vs New Zealand Road to T20 World Cup 2024 begins Says Hardik Pandya kvn
Author
First Published Nov 17, 2022, 10:42 AM IST

ವೆಲ್ಲಿಂಗ್ಟನ್‌(ನ.17): 2024ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದ್ದೇವೆ, ಮುಂಬುರುವ ನ್ಯೂಜಿಲೆಂಡ್‌ ಪ್ರವಾಸದಿಂದಲೇ ಪ್ರಯೋಗ ಶುರುವಾಗಲಿದೆ ಎಂದು ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್‌ ಪಾಂಡ್ಯ ಬುಧವಾರ ಹೇಳಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ನ.18ರಿಂದ ಆರಂಭಗೊಳ್ಳಲಿದ್ದು, ಬುಧವಾರ ಟೀಂ ಇಂಡಿಯಾದ ನೆಟ್ಸ್‌ ಅಭ್ಯಾಸದ ಬಳಿಕ ಹಾರ್ದಿಕ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಾವು ವಿಶ್ವಕಪ್‌ ಗೆಲ್ಲಲಿಲ್ಲ ಎನ್ನುವ ಬೇಸರ ಎಲ್ಲರಲ್ಲೂ ಇದೆ. ಆದರೆ ನಾವು ವೃತ್ತಿಪರ ಆಟಗಾರರು. ನಿರಾಸೆಗಳನ್ನು ಬದಿಗೊತ್ತಿ ಮುನ್ನಡೆಯಬೇಕಿದೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕಿದೆ. 2024ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭವಾಗುತ್ತಿದೆ. ಹಲವು ಆಟಗಾರರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ನಮ್ಮ ಬಳಿ ಸಮಯವಿದೆ. ಹೀಗಾಗಿ ಕೂತು, ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ’ ಎಂದು ಹಾರ್ದಿಕ್‌ ಹೇಳಿದರು.

ಟಿ20 ಸರಣಿಯಿಂದ ಕೊಹ್ಲಿ, ರೋಹಿತ್‌, ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌, ಆರ್‌.ಅಶ್ವಿನ್‌ ವಿಶ್ರಾಂತಿ ಪಡೆದಿದ್ದು, ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದೆ. ಶುಭ್‌ಮನ್‌ ಗಿಲ್‌, ಉಮ್ರಾನ್‌ ಮಲಿಕ್‌, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌ಗೆ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಅವಕಾಶ ಸಿಗಲಿದೆ. ‘ಪ್ರಮುಖ ಆಟಗಾರರು ತಂಡದಲ್ಲಿಲ್ಲ. ಯುವ ಆಟಗಾರರಿಗೆ ಇದು ಉತ್ತಮ ವೇದಿಕೆ. ಈಗಾಗಲೇ ಕಳೆದ ಒಂದು, ಒಂದೂವರೆ ವರ್ಷದಿಂದ ತಂಡದಲ್ಲಿರುವ ಯುವಕರಿಗೆ ತಂಡದ ಸಂಸ್ಕೃತಿ ಬಗ್ಗೆ ಗೊತ್ತಿದೆ. ಅವರ ಮೇಲಿರುವ ನಿರೀಕ್ಷೆಯ ಬಗ್ಗೆಯೂ ಅರಿವಿದೆ’ ಎಂದು ಹಾರ್ದಿಕ್‌ ಹೇಳಿದರು.

ನಾವು ಮಾಡಿದ ತಪ್ಪನ್ನು ತಿದ್ದಿಕೊಂಡು ಮುನ್ನಡೆಯುತ್ತೇವೆ: ಹಾರ್ದಿಕ್ ಪಾಂಡ್ಯ

ಹಾರ್ದಿಕ್‌ ಮುಂದಿನ ನಾಯಕ?: ಸುಳಿವು 

2024ರ ವಿಶ್ವಕಪ್‌ ದೃಷ್ಟಿಯಿಂದ ಸದ್ಯದಲ್ಲೇ ಹಾರ್ದಿಕ್‌ ಪಾಂಡ್ಯ ಅವರನ್ನು ಭಾರತ ಟಿ20 ತಂಡದ ನಾಯಕನನ್ನಾಗಿ ನೇಮಿಸಬಹುದು ಎನ್ನುವ ಸುದ್ದಿ ಹರಿದಾಡುತ್ತಿರುವ ಸಮಯದಲ್ಲೇ, ಪಾಂಡ್ಯ ಮುಂದಿನ ವಿಶ್ವಕಪ್‌ಗೆ ತಂಡ ಕಟ್ಟುವ ಬಗ್ಗೆ ಮಾತನಾಡಿರುವುದು ಅವರಿಗೆ ನಾಯಕತ್ವ ಸಿಗಲಿದೆ ಎನ್ನುವ ಸುಳಿವು ಎಂದು ವಿಶ್ಲೇಷಿಸಲಾಗಿದೆ. 2023ರ ಐಪಿಎಲ್‌ಗೂ ಮೊದಲೇ ಹಾರ್ದಿಕ್‌ ಭಾರತ ಟಿ20 ತಂಡದ ನಾಯಕರಾಗ ನೇಮಕಗೊಳ್ಳಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟಿ20 ಸರಣಿಯು ನವೆಂಬರ್ 18, 20, 22ರಂದು ನಡೆಯಲಿವೆ. ಇದಾದ ಬಳಿಕ 3 ಪಂದ್ಯಗಳ ಏಕದಿನ ಸರಣಿ 25, 27 ಹಾಗೂ 30ರಂದು ನಡೆಯಲಿವೆ.

ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡ ಹೀಗಿದೆ: 

ಶುಭ್‌ಮನ್ ಗಿಲ್,  ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಿಷಭ್ ಪಂತ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಆರ್ಶದೀಪ್‌ ಸಿಂಗ್, ಉಮ್ರಾನ್ ಮಲಿಕ್. 

ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡ:

ಶಿಖರ್ ಧವನ್(ನಾಯಕ), ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಆರ್ಶದೀಪ್ ಸಿಂಗ್, ದೀಪಕ್ ಚಹರ್, ಉಮ್ರಾನ್ ಮಲಿಕ್, ಕುಲ್ದೀಪ್ ಸೆನ್.

Follow Us:
Download App:
  • android
  • ios