* ಆಸ್ಟ್ರೇಲಿಯಾ ಎದುರು ಏಕದಿನ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ* ಕ್ಯಾಲೆಂಡರ್‌ ವರ್ಷದಲ್ಲಿ ಅತಿಹೆಚ್ಚು ಗೆಲುವು ದಾಖಲಿಸಿದ ಭಾರತ ಕ್ರಿಕೆಟ್ ತಂಡ* ಪಾಕಿಸ್ತಾನ ತಂಡದ ಹೆಸರಿನಲ್ಲಿದ್ದ ದಾಖಲೆ ಅಳಿಸಿಹಾಕಿದ ಟೀಂ ಇಂಡಿಯಾ

ಹೈದರಾಬಾದ್‌(ಸೆ.26): ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಟಿ20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 187 ರನ್‌ಗಳ ಸವಾಲಿನ ಗುರಿಯನ್ನು ಟೀಂ ಇಂಡಿಯಾ, ಒಂದು ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ನೂತನ ದಾಖಲೆ ನಿರ್ಮಿಸಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡದ ದಾಖಲೆ ಧೂಳೀಪಟವಾಗಿದೆ.

ಹೌದು, ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಚಕ ಜಯ ಸಾಧಿಸುವುದರ ಮೂಲಕ ಟೀಂ ಇಂಡಿಯಾ, ಕ್ಯಾಲೆಂಡರ್‌ ವರ್ಷವೊಂದರಲ್ಲಿ 21 ಗೆಲುವುಗಳೊಂದಿಗೆ ಅತಿಹೆಚ್ಚು ಟಿ20 ಗೆಲುವು ಸಾಧಿಸಿದ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಿದೆ. 2021ರ ಕ್ಯಾಲೆಂಡರ್‌ ವರ್ಷದಲ್ಲಿ 20 ಪಂದ್ಯಗಳನ್ನು ಜಯಿಸಿತ್ತು. ಇದೀಗ ಆ ದಾಖಲೆಯನ್ನು ರೋಹಿತ್ ಶರ್ಮಾ ಪಡೆ ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತ ಕ್ರಿಕೆಟ್ ತಂಡವು 2022ರಲ್ಲಿ ಇದುವರೆಗೂ 29 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 21 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೇರಲು ವಿಫಲವಾಗುವ ಮೂಲಕ ನಿರಾಸೆ ಅನುಭವಿಸಿದ್ದ ಟೀಂ ಇಂಡಿಯಾ, ಇದೀಗ ಟಿ20 ವಿಶ್ವಚಾಂಪಿಯನ್‌ ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ತನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. 

ಆಸ್ಟ್ರೇಲಿಯಾ ಎದುರು ಸರಣಿ ಜಯಿಸುವ ಮೂಲಕ, ರೋಹಿತ್ ಶರ್ಮಾ ಟೀಂ ಇಂಡಿಯಾ ಪೂರ್ಣಾವಧಿ ನಾಯಕರಾದ ಬಳಿಕ ದ್ವಿಪಕ್ಷೀಯ ಟಿ20 ಸರಣಿ ಗೆಲ್ಲುವ ಅಜೇಯ ನಾಗಾಲೋಟ ಮುಂದುವರೆದಿದೆ. 

IND vs AUS ಅಂತಿಮ ಪಂದ್ಯದಲ್ಲೂ ಆಸ್ಟ್ರೇಲಿಯಾ ಶಾಕ್, ಟಿ20 ಸರಣಿ ವಶಪಡಿಸಿದ ಭಾರತ

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಪ್ಟೆಂಬರ್ 28ರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇದು ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಕಟ್ಟಕಡೆಯ ಟಿ20 ಸರಣಿ ಇದಾಗಲಿದೆ. 

Scroll to load tweet…

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ರನ್ ಮಷೀನ್ ವಿರಾಟ್ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇದರ ಜತೆಗೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್‌ ಭರ್ಜರಿ ಫಾರ್ಮ್‌ ಹೊಂದಿದ್ದಾರೆ. ಆದರೆ ತಂಡದ ಬೌಲರ್‌ಗಳು ದುಬಾರಿಯಾಗುತ್ತಿರುವುದು ನಾಯಕ ರೋಹಿತ್ ಶರ್ಮಾ ತಲೆನೋವು ಹೆಚ್ಚಾಗುವಂತೆ ಮಾಡಿದೆ. ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಸಾಕಷ್ಟು ದುಬಾರಿಯಾಗಿದ್ದರು. ಆದರೆ ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್‌ ಶಿಸ್ತುಬದ್ದ ದಾಳಿಯ ಮೂಲಕ ಗಮನ ಸೆಳೆದರು.