Ind vs WI: ಟೀಂ ಇಂಡಿಯಾಗಿಂದು ಸರಣಿ ಜಯದ ಗುರಿ
* ಏಕದಿನ ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ
* ತಂಡ ಕೂಡಿಕೊಂಡ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್
* ಭಾರತ ತಂಡದಲ್ಲಿ ಒಂದು ಬದಲಾವಣೆಯಾಗುವ ಸಾಧ್ಯತೆ
ಅಹಮದಾಬಾದ್(ಫೆ.09): ಪೂರ್ಣಾವಧಿ ನಾಯಕನಾಗಿ ನೇಮಕಗೊಂಡ ಬಳಿಕ ರೋಹಿತ್ ಶರ್ಮಾ (Rohit Sharma) ಮೊದಲ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದು, ವೆಸ್ಟ್‌ಇಂಡೀಸ್ ವಿರುದ್ಧ ಬುಧವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಮೂಲಕ ತಮ್ಮ ಆಸೆ ಈಡೇರಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲೂ ಪ್ರಾಬಲ್ಯ ಮೆರೆದು ತವರಿನಲ್ಲಿ ಸತತ 4ನೇ ಸರಣಿ ಗೆಲುವು ದಾಖಲಿಸಲು ಕಾತರಿಸುತ್ತಿದೆ.
ಉಪನಾಯಕ ಕೆ.ಎಲ್.ರಾಹುಲ್ (KL Rahul) ತಂಡಕ್ಕೆ ವಾಪಸಾಗಿದ್ದು, ಅವರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಕುತೂಹಲವಿದೆ. ರಾಹುಲ್ ಆರಂಭಿಕನಾಗಿ ಆಡಿದರೆ ಇಶಾನ್ ಕಿಶನ್ (Ishan Kishan) ಹೊರಗುಳಿಯಬೇಕಾಗುತ್ತದೆ. ರಾಹುಲ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲು ತಂಡದ ಆಡಳಿತ ನಿರ್ಧರಿಸಿದರೆ, ಆಗ ಆಲ್ರೌಂಡರ್ ದೀಪಕ್ ಹೂಡಾ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಇನ್ನು, ಕಿಶನ್‌ಗೆ ಮತ್ತೊಂದು ಅವಕಾಶ ಸಿಗುತ್ತದೆಯೇ ಇಲ್ಲವೇ ಅವರ ಜಾಗವನ್ನು ಮಯಾಂಕ್ ಅಗರ್‌ವಾಲ್ ಇಲ್ಲವೇ ಶಿಖರ್ ಧವನ್‌ಗೆ ನೀಡಲಾಗುತ್ತಾ ಎನ್ನುವ ಪ್ರಶ್ನೆಗೂ ಟಾಸ್ ವೇಳೆ ಉತ್ತರ ಸಿಗಲಿದೆ.
ದ.ಆಫ್ರಿಕಾ ಪ್ರವಾಸಕ್ಕೆ ಗೈರಾಗಿದ್ದ ರೋಹಿತ್, ಮೊದಲ ಏಕದಿನದಲ್ಲಿ ವಿಂಡೀಸ್ ಬೌಲರ್‌ಗಳನ್ನು ಚೆಂಡಾಡಿದ್ದರು. ಅವರ ಬ್ಯಾಟಿಂಗ್ ಲಯ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಇನ್ನು ಯಜುವೇಂದ್ರ ಚಹಲ್ ಹಾಗೂ ವಾಷಿಂಗ್ಟನ್ ಸುಂದರ್ ತಮ್ಮ ಸ್ಪಿನ್ ಜಾದೂ ಮೂಲಕ ಕೆರಿಬಿಯನ್ನರನ್ನು ಕಟ್ಟಿಹಾಕಿದ್ದರು. ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ.
Ind vs WI: 2ನೇ ಏಕದಿನಕ್ಕೆ ತಂಡ ಕೂಡಿಕೊಂಡ ರಾಹುಲ್, ಮಯಾಂಕ್ ಕಠಿಣ ಅಭ್ಯಾಸ
ಒತ್ತಡದಲ್ಲಿ ವಿಂಡೀಸ್: ಕಳೆದ 16 ಪಂದ್ಯಗಳಲ್ಲಿ 10ರಲ್ಲಿ ಪೂರ್ತಿ 50 ಓವರ್ ಬ್ಯಾಟ್ ಮಾಡಲು ವಿಫಲವಾಗಿರುವ ವಿಂಡೀಸ್, ಬಲಿಷ್ಠ ಪಡೆಯನ್ನು ಹೊಂದಿದ್ದರೂ ಸಂಘಟಿತ ಆಟದ ಕೊರತೆ ಎದುರಿಸುತ್ತಿದೆ. ಮೊಟೇರಾದ ನಿಧಾನಗತಿಯ ಪಿಚ್‌ನಲ್ಲಿ ಕೆರಿಬಿಯನ್ನರು ತಾಳ್ಮೆಯ ಆಟಕ್ಕೆ ಒತ್ತು ನೀಡಿದರೆ ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಸಾಧ್ಯ. 2002ರ ಬಳಿಕ ಭಾರತೀಯ ನೆಲದಲ್ಲಿ ವಿಂಡೀಸ್ ಏಕದಿನ ಸರಣಿ ಗೆದ್ದಿಲ್ಲ. ಸತತ 7 ಸರಣಿಗಳನ್ನು ಸೋತಿರುವ ವಿಂಡೀಸ್, 8ನೇ ಸರಣಿ ಸೋಲನ್ನು ತಪ್ಪಿಸಿಕೊಳ್ಳುವ ಒತ್ತಡದಲ್ಲಿದೆ.
ಧವನ್, ಶ್ರೇಯಸ್ ಅಯ್ಕೆಗೆ ಲಭ್ಯ
ಕೋವಿಡ್‌ನಿಂದ ಚೇತರಿಸಿಕೊಂಡಿರುವ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್‌ರ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಮಂಗಳವಾರ ಅಭ್ಯಾಸ ನಡೆಸಲು ಅನುಮತಿ ಪಡೆದಿದ್ದರು. ಈ ಇಬ್ಬರೂ 2ನೇ ಏಕದಿನಕ್ಕೆ ಆಯ್ಕೆಗೆ ಲಭ್ಯರಿದ್ದಾರೆ. ಋುತುರಾಜ್ ಗಾಯಕ್ವಾಡ್ ಮಾತ್ರ ಇನ್ನೂ ಐಸೋಲೇಷನ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ತವರಿನಲ್ಲಿ ಕೊಹ್ಲಿಗೆ 100ನೇ ಏಕದಿನ!
ವಿಂಡೀಸ್ ವಿರುದ್ಧ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದರೆ, ಅದು ತವರು ನೆಲದಲ್ಲಿ ಅವರ 100ನೇ ಏಕದಿನ ಪಂದ್ಯವಾಗಲಿದೆ. ಈ ಸಾಧನೆ ಮಾಡಲಿರುವ ಭಾರತದ 5ನೇ ಆಟಗಾರ ಎನಿಸಲಿದ್ದಾರೆ. ಸಚಿನ್(164 ಪಂದ್ಯ), ಧೋನಿ(127 ಪಂದ್ಯ), ಅಜರುದ್ದೀನ್(113 ಪಂದ್ಯ) ಹಾಗೂ ಯುವರಾಜ್(108 ಪಂದ್ಯ) ತವರಿನಲ್ಲಿ 100ಕ್ಕಿಂತ ಹೆಚ್ಚು ಏಕದಿನ ಪಂದ್ಯ ಆಡಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಹಲ್, ಪ್ರಸಿದ್ಧ್ ಕೃಷ್ಣ.
ವಿಂಡೀಸ್: ಶಾಯ್ ಹೋಪ್, ಬ್ರೆಂಡನ್ ಕಿಂಗ್, ಡರೆನ್ ಬ್ರಾವೋ, ಸಮರ್ಥ್ ಬ್ರೂಕ್ಸ್, ನಿಕೋಲಸ್ ಪೂರನ್, ಕೀರನ್ ಪೊಲ್ಲಾರ್ಡ್(ನಾಯಕ), ಜೇಸನ್ ಹೋಲ್ಡರ್, ಅಕೆಲ್ ಹೊಸೆನ್, ಫ್ಯಾಬಿನ್ ಆ್ಯಲನ್, ಅಲ್ಜೆರಿ ಜೋಸೆಫ್, ಕೆಮಾರ್ ರೋಚ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್