Ind vs WI: ಇಂದಿನಿಂದ ಟೀಂ ಇಂಡಿಯಾಗೆ ವೆಸ್ಟ್ ಇಂಡೀಸ್ 'ಟೆಸ್ಟ್'..!

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
ಗೆಲುವಿನೊಂದಿಗೆ ಶುಭಾರಂಭ ಮಾಡುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಕುಗ್ಗಿರುವ ವಿಂಡೀಸ್‌ಗೆ ತವರಿನಲ್ಲಿ ಪುಟಿದೇಳುವ ಗುರಿ

Ind vs WI Rohit Sharma led Team India West Indies Challenge in 1st Test kvn

ರೋಸೀ(ಜು.12): ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನ ಸೋಲಿನ ಆಘಾತದಿಂದ ಹೊರಬರುವುದರ ಜೊತೆಗೆ, 2023-25ರ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಆರಂಭ ಪಡೆಯಲು ಎದುರು ನೋಡುತ್ತಿರುವ ಟೀಂ ಇಂಡಿಯಾ, ಬುಧವಾರದಿಂದ ವೆಸ್ಟ್‌ ಇಂಡೀಸ್‌ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಮೊದಲ ಪಂದ್ಯಕ್ಕೆ ಇಲ್ಲಿನ ವಿಂಡ್ಸರ್‌ ಪಾರ್ಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಭಾರತ ಟೆಸ್ಟ್‌ ವಿಶ್ವಕಪ್‌ ಬಳಿಕ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದು, ಆಟಗಾರರು ಸುಮಾರು 1 ತಿಂಗಳ ವಿಶ್ರಾಂತಿ ಬಳಿಕ ಮತ್ತೆ ಅಂಗಳಕ್ಕೆ ಮರಳಲಿದ್ದಾರೆ. ಆದರೆ ವಿಂಡೀಸ್‌ ತಂಡದ ಹಲವು ಆಟಗಾರರು ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಆಡಿದ್ದು, ದಿನಗಳ ಹಿಂದಷ್ಟೇ ತವರಿಗೆ ಮರಳಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ, ಸರಣಿಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ವಿಂಡೀಸ್‌ಗೆ ಸದ್ಯ ತವರಿನಲ್ಲಿ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ.

ODI World Cup 2023: ಈಡನ್‌ ಗಾರ್ಡನ್ಸ್‌ ಪಂದ್ಯಗಳ ಟಿಕೆಟ್‌ ಬೆಲೆ ಪ್ರಕಟ..! IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್

ಜೈಸ್ವಾಲ್‌ಗೆ ಸಿಗುತ್ತಾ ಚಾನ್ಸ್‌?: ಹಿರಿಯರಾದ ಚೇತೇಶ್ವರ್‌ ಪೂಜಾರ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದ್ದು, ದೇಸಿ ಟೂರ್ನಿಗಳಲ್ಲಿ ಮಿಂಚಿದ್ದ ಯುವ ಬ್ಯಾಟರ್‌ಗಳಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಸರಣಿಯಲ್ಲಿ ಯುವ ಮುಖಗಳ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಯಶಸ್ವಿ ಜೈಸ್ವಾಲ್‌ ಅವರು ರೋಹಿತ್‌ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಹೀಗಾದರೆ ಶುಭ್‌ಮನ್‌ ಗಿಲ್‌ 3ನೇ ಕ್ರಮಾಂಕದಲ್ಲಿ ಆಡಬೇಕಾಗಬಹುದು. ಉಳಿದಂತೆ ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ ತಂಡದಲ್ಲಿದ್ದು, ಲಯ ಕಂಡುಕೊಳ್ಳುವ ಕಾತರದಲ್ಲಿದ್ದಾರೆ. ಕೀಪಿಂಗ್‌ ಕೌಶಲ್ಯದಿಂದ ಗಮನ ಸೆಳೆಯುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿರುವ ಕೆ.ಎಸ್‌.ಭರತ್‌ಗೆ ಮತ್ತೊಂದು ಅವಕಾಶ ನೀಡಲಾಗುತ್ತದೆಯೋ ಅಥವಾ ಇಶಾನ್‌ ಕಿಶನ್‌ಗೆ ಮಣೆ ಹಾಕಲಿದೆಯೋ ಎಂಬ ಕುತೂಹಲವಿದೆ. ಇನ್ನು, ರವೀಂದ್ರ ಜಡೇಜಾ ಜೊತೆ ಆರ್‌.ಅಶ್ವಿನ್‌ ಆಲ್ರೌಂಡ್‌ ಹೊಣೆ ನಿಭಾಯಿಸಲು ಎದುರು ನೋಡುತ್ತಿದ್ದಾರೆ.

ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್ ಬುಮ್ರಾ ಕಮ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್..!

ಆದರೆ ಬೌಲಿಂಗ್‌ ಪಡೆಯಲ್ಲಿ ಅನುಭವಿಗಳ ಕೊರತೆ ಎದ್ದು ಕಾಣುತ್ತಿದ್ದು, ಮೊಹಮದ್‌ ಸಿರಾಜ್‌, ಜಯ್‌ದೇವ್‌ ಉನಾದ್ಕತ್‌ ಆಡುವುದು ಬಹುತೇಕ ಖಚಿತ. ಉಳಿದ ಸ್ಥಾನಕ್ಕೆ ನವ್‌ದೀಪ್‌ ಸೈನಿ, ಮುಕೇಶ್‌ ಕುಮಾರ್‌ ನಡುವೆ ಪೈಪೋಟಿ ಇದೆ. ಶಾರ್ದೂಲ್‌ ಠಾಕೂರ್‌ ಕೂಡಾ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಇದೇ ವೇಳೆ ಕ್ರೇಗ್‌ ಬ್ರಾಥ್‌ವೇಟ್‌ ನಾಯಕತ್ವದ ವಿಂಡೀಸ್‌ ತಂಡದಲ್ಲಿ ಅನುಭವಿಗಳ ಜೊತೆ ಹೊಸ ಮುಖಗಳೂ ಇವೆ. ಎಡಗೈ ಬ್ಯಾಟರ್‌ ಕಿರ್ಕ್ ಮೆಕೆಂಜಿ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ರಖೀಮ್ ಕಾರ್ನ್‌ವಾಲ್ ಕೂಡಾ ತಂಡದಲ್ಲಿದ್ದಾರೆ. ಕೇಮಾರ್‌ ರೋಚ್‌, ಅಲ್ಜಾರಿ ಜೋಸೆಫ್‌, ಜೇಸನ್‌ ಹೋಲ್ಡರ್‌, ಶಾನೊನ್‌ ಗ್ಯಾಬ್ರಿಯಲ್‌ ಅವನ್ನೊಳಗೊಂಡ ಬೌಲಿಂಗ್‌ ಪಡೆ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದೆ.

21 ವರ್ಷದಲ್ಲಿ ವಿಂಡೀಸ್‌ ವಿರುದ್ಧ ಸೋತಿಲ್ಲ ಭಾರತ!

ಭಾರತ ತಂಡ ವಿಂಡಿಸ್‌ ವಿರುದ್ಧ ಕಳೆದ 21 ವರ್ಷಗಳಲ್ಲಿ ಯಾವುದೇ ಟೆಸ್ಟ್‌ ಪಂದ್ಯ ಸೋತಿಲ್ಲ. 2002ರಲ್ಲಿ ವಿಂಡೀಸ್‌ನಲ್ಲಿ ನಡೆದಿದ್ದ ಸರಣಿಯಲ್ಲಿ ಕೊನೆ ಬಾರಿ ಭಾರತ ಸೋತಿತ್ತು. ಆ ಬಳಿಕ ವಿಂಡೀಸ್‌ನಲ್ಲಿ 4 ಬಾರಿ ಸರಣಿ ಆಡಿರುವ ಭಾರತ ಎಲ್ಲಾ ಬಾರಿಯೂ ಸರಣಿ ಜಯಿಸಿದೆ. ಅಲ್ಲದೇ ಈವರೆಗೆ ವಿಂಡೀಸ್‌ನಲ್ಲಿ ಭಾರತ 12 ಬಾರಿ ಟೆಸ್ಟ್‌ ಸರಣಿ ಆಡಿದ್ದು, ಈ ಪೈಕಿ 7 ಸರಣಿಯಲ್ಲಿ ವಿಂಡೀಸ್‌ ಗೆದ್ದಿದ್ದರೆ, 5 ಸರಣಿಯನ್ನು ಭಾರತ ಕೈವಶಪಡಿಸಿಕೊಂಡಿದೆ.

ಸಂಭವನೀಯ ಆಟಗಾರರು

ಭಾರತ: ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಸ್‌ ಭರತ್‌/ಇಶಾನ್‌ ಕಿಶನ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್‌, ಶಾರ್ದೂಲ್‌ ಠಾಕೂರ್, ಮೊಹಮ್ಮದ್ ಸಿರಾಜ್‌, ಜಯದೇವ್ ಉನಾದ್ಕತ್‌.

ವಿಂಡೀಸ್‌: ಕಾರ್ಲೋಸ್ ಬ್ರಾಥ್‌ವೇಟ್‌(ನಾಯಕ), ತೇಜ್‌ನಾರಯಣ್‌ ಚಂದ್ರಪಾಲ್‌, ರೀಫರ್‌, ಬ್ಲಾಕ್‌ವುಡ್‌, ಕಾರ್ನ್‌ವೆಲ್‌, ಮೆಕೆಂಜೀ, ಡಿ ಸಿಲ್ವ, ಹೋಲ್ಡರ್‌, ಜೋಸೆಫ್‌, ರೋಚ್‌, ವ್ಯಾರಿಕನ್‌,

ಮುಖಾಮುಖಿ: 98

ಭಾರತ 22

ವಿಂಡೀಸ್‌ 30

ಡ್ರಾ 46

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರಪ್ರಸಾರ: ಜಿಯೋ ಸಿನಿಮಾ, ಫ್ಯಾನ್‌ಕೋಡ್‌ ಆ್ಯಪ್‌.

Latest Videos
Follow Us:
Download App:
  • android
  • ios