Asianet Suvarna News Asianet Suvarna News

Ind vs WI ಟೀಂ ಇಂಡಿಯಾ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ವಿಂಡೀಸ್ ನಾಯಕ ನಿಕೋಲಸ್ ಪೂರನ್‌..!

* ವೆಸ್ಟ್ ಇಂಡೀಸ್ ವಿರುದ್ದ ಟೀಂ ಇಂಡಿಯಾಗೆ ರೋಚಕ ಗೆಲುವು
* ಮೂರು ಪಂದ್ಯಗಳ ಏಕದಿನ ಸರಣಿ 2-0 ಅಂತರದಲ್ಲಿ ಭಾರತದ ಪಾಲು
* ಎರಡನೇ ಏಕದಿನ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ವಿಂಡೀಸ್ ನಾಯಕ
 

Ind vs WI Lost Game In Last 6 Overs Reckons West Indies Skipper Nicholas Pooran kvn
Author
Bengaluru, First Published Jul 25, 2022, 4:10 PM IST

ಪೋರ್ಟ್ ಆಫ್‌ ಸ್ಪೇನ್‌(ಜು.25): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಇರುವಂತೆಯೇ 2-0 ಅಂತರದಲ್ಲಿ ಏಕದಿನ ಸರಣಿ ಕೈವಶ ಮಾಡಿಕೊಳ್ಳುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ. ಇದೀಗ ಭಾರತ ಎದುರಿನ ಎರಡನೇ ಪಂದ್ಯ ಸೋತಿದ್ದೆಲ್ಲಿ ಎನ್ನುವುದರ ಕುರಿತಂತೆ ವೆಸ್ಟ್ ಇಂಡೀಸ್ ನಾಯಕ ನಿಕೋಲಸ್ ಪೂರನ್ ತುಟಿಬಿಚ್ಚಿದ್ದಾರೆ

ಇಲ್ಲಿನ ಕ್ವೀನ್ಸ್ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ನೀಡಿದ್ದ 312 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯೂ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. ಪಂದ್ಯ ಸೋಲಿನ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್, 'ಖಂಡಿತವಾಗಿಯೂ ಕೊನೆಯ ಕೆಲ ಓವರ್‌ಗಳಲ್ಲಿ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಅದರಲ್ಲೂ ಕೊನೆಯ 6 ಓವರ್‌ಗಳಲ್ಲಿ ನಾವು ಪಂದ್ಯ ಕೈಚೆಲ್ಲಿದೆವು. ಒಂದು ವಿಕೆಟ್ ಉರುಳಿದ್ದರೇ ಪಂದ್ಯ ನಮ್ಮ ಪಾಲಾಗುತ್ತಿತ್ತು. ಆದರೆ ಅಕ್ಷರ್ ಪಟೇಲ್ ನಮ್ಮಿಂದ ಗೆಲುವನ್ನು ಕಸಿದುಕೊಂಡರು ಎಂದು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡವು ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಕಲೆಹಾಕಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಒಂದು ಹಂತದಲ್ಲಿ 79 ರನ್‌ಗಳಿಗೆ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್‌ 99 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಶ್ರೇಯಸ್ ಅಯ್ಯರ್ 63 ರನ್ ಬಾರಿಸಿದರೇ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ 54 ರನ್ ಸಿಡಿಸಿದರು. ಹೀಗಿದ್ದೂ ಕೊನೆಯ 10 ಓವರ್‌ಗಳಲ್ಲಿ ಭಾರತಕ್ಕೆ ಗೆಲ್ಲಲು 100 ರನ್‌ಗಳ ಅಗತ್ಯವಿತ್ತು. ಕೊನೆಯಲ್ಲಿ ದೀಪಕ್ ಹೂಡಾ 33 ರನ್ ಗಳಿಸಿದರೇ, ಆಲ್ರೌಂಡರ್ ಅಕ್ಷರ್ ಪಟೇಲ್ ಅಜೇಯ 64 ರನ್ ಬಾರಿಸುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

WI vs IND: ಅಕ್ಸರ್‌ ಪಟೇಲ್‌ ಅಮೋಘ ಆಟ, ವಿಂಡೀಸ್‌ ವಿರುದ್ಧ 2ನೇ ಪಂದ್ಯ ಗೆದ್ದ ಭಾರತ, ಸರಣಿ ಕೈವಶ

ದೀಪಕ್ ಹೂಡಾ ಹಾಗೂ ಅಕ್ಷರ್ ಪಟೇಲ್ ಜೋಡಿ 31 ಎಸೆತಗಳಲ್ಲಿ 50 ರನ್‌ಗಳ ಜತೆಯಾಟ ನಿಭಾಯಿಸಿದರು. ಹೀಗಾಗಿ ಕೊನೆಯ 6 ಓವರ್‌ಗಳಲ್ಲಿ ಭಾರತ ಗೆಲ್ಲಲು 56 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಕ್ಷರ್ ಪಟೇಲ್‌, ವೆಸ್ಟ್ ಇಂಡೀಸ್ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಅಕ್ಷರ್ ಪಟೇಲ್ ಕೇವಲ 35 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 64 ರನ್ ಚಚ್ಚಿದರು.

Follow Us:
Download App:
  • android
  • ios