Ind vs SL: ಮೂರನೇ ಕ್ರಮಾಂಕ ನನಗೆ ಸೂಕ್ತವೆಂದ ಶ್ರೇಯಸ್ ಅಯ್ಯರ್..!
* ಲಂಕಾ ಎದುರಿನ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದ ಶ್ರೇಯಸ್ ಅಯ್ಯರ್
* ಲಂಕಾ ಎದುರಿನ ಮೂರು ಪಂದ್ಯಗಳಲ್ಲೂ ಆಕರ್ಷಕ ಅಜೇಯ ಅರ್ಧಶತಕ ಬಾರಿಸಿದ್ದ ಅಯ್ಯರ್
* ನನಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಸೂಕ್ತವೆಂದ ಶ್ರೇಯಸ್ ಅಯ್ಯರ್
ಧರ್ಮಶಾಲಾ(ಮಾ.01): ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್ (Shreyas Iyer), 3ನೇ ಕ್ರಮಾಂಕವು ತಮ್ಮ ಆಟದ ಶೈಲಿಗೆ ಸರಿಹೊಂದಲಿದೆ ಎಂದಿದ್ದಾರೆ. 3ನೇ ಕ್ರಮಾಂಕದಲ್ಲಿ ಕಾಯಂ ಆಗಿ ಆಡುವ ವಿರಾಟ್ ಕೊಹ್ಲಿ (Virat Kohli) ವಿಶ್ರಾಂತಿ ಪಡೆದಿದ್ದರಿಂದ ಲಂಕಾ ವಿರುದ್ಧ ಕಣಕ್ಕಿಳಿಯಲು ಶ್ರೇಯಸ್‌ಗೆ ಅವಕಾಶ ಸಿಕ್ಕಿತ್ತು.
ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಿದ್ದರು. ಆದರೆ ಲಂಕಾ ಎದುರಿನ ಸರಣಿಯಲ್ಲಿ ಈ ಇಬ್ಬರು ಆಟಗಾರರು ಹೊರಗುಳಿದಿದ್ದರಿಂದ ಶ್ರೇಯಸ್ ಅಯ್ಯರ್‌ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಒದಗಿ ಬಂದಿತ್ತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಶ್ರೇಯಸ್ ಅಯ್ಯರ್, ಮೂರೂ ಇನಿಂಗ್ಸ್‌ಗಳಲ್ಲೂ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.
ಭಾನುವಾರ ಪಂದ್ಯದ ಬಳಿಕ ಮಾತನಾಡಿದ ಅವರು, ‘ನಾನು ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ನಮ್ಮ ತಂಡದಲ್ಲಿ ಪೈಪೋಟಿ ಎಷ್ಟಿದೆ ಎನ್ನುವುದು ಗೊತ್ತಿರುವ ವಿಷಯ. ಪ್ರತಿಯೊಬ್ಬರೂ ಪಂದ್ಯಗಳನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ವೈಯಕ್ತಿಕವಾಗಿ ನಾನು ಸಿಗುವ ಪ್ರತಿ ಅವಕಾಶವನ್ನು ಆನಂದಿಸಬೇಕು ಎನ್ನುವುದಷ್ಟೇ ನನ್ನ ಗುರಿ’ ಎಂದಿದ್ದಾರೆ.
3 ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್ ಗರಿಷ್ಠ ರನ್ ಬಾರಿಸಿದ ಭಾರತೀಯ
ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಲಂಕಾ ಎದುರಿನ 3 ಪಂದ್ಯಗಳ ಟಿ20 ಸರಣಿಯ ಮೂರು ಪಂದ್ಯಗಳಲ್ಲೂ ಅಜೇಯ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇದಷ್ಟೇ ಅಲ್ಲದೇ ಒಟ್ಟಾರೆ 204 ರನ್ ಬಾರಿಸುವ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನ್ನುವ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು 2016ರಲ್ಲಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಎದುರಿನ 3 ಪಂದ್ಯಗಳ ಸರಣಿಯಲ್ಲಿ 199 ರನ್ ಬಾರಿಸಿದ್ದರು.
Vishnu Solanki ಬರೋಡಾ ಕ್ರಿಕೆಟಿಗ ವಿಷ್ಣು ಸೋಲಂಕಿಗೆ ಡಬಲ್ ಶಾಕ್..!
ಕೆಲ ದಿನಗಳ ಹಿಂದಷ್ಟೇ ನವಜಾತ ಶಿಶುವನ್ನು ಕಳೆದುಕೊಂಡಿದ್ದ ಬರೋಡಾ ತಂಡದ ಬ್ಯಾಟರ್ ವಿಷ್ಣು ಸೋಲಂಕಿ (Vishnu Solanki) ಭಾನುವಾರ ಬೆಳಗ್ಗೆ ತಮ್ಮ ತಂದೆಯನ್ನೂ ಕಳೆದುಕೊಂಡಿದ್ದಾರೆ. ಹೃದಯ ವಿದ್ರಾವಕ ಸುದ್ದಿಯ ನಡುವೆಯೂ ರಣಜಿ ಟ್ರೋಫಿಯ (Ranji Trophy) ಚಂಡೀಗಢ ವಿರುದ್ಧದ ಆಟ ಮುಂದುವರಿಸಲು ನಿರ್ಧರಿಸಿದ ಸೋಲಂಕಿ, ಪಂದ್ಯದ ಬಳಿಕ ಮನೆಗೆ ಬರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ.
29 ವರ್ಷದ ವಿಷ್ಣು ಸೋಲಂಕಿ, ಫೆಬ್ರವರ 10ರಂದು ತಂದೆಯಾಗಿದ್ದರು. ಆದರೆ ಮರುದಿನವೇ ಅಂದರೆ ಫೆಬ್ರವರಿ 11ರಂದು ಸೋಲಂಕಿಯವರ ಮಗು ಕೊನೆಯುಸಿರೆಳೆದಿತ್ತು. ಹೀಗಾಗಿ ಮಗುವಿನ ಅಂತ್ಯಕ್ರಿಯೆ ಮುಗಿಸಿ ರಣಜಿ ಟ್ರೋಫಿ ಟೂರ್ನಿಗೆ ಬರೋಡಾ ತಂಡ ಕೂಡಿಕೊಂಡಿದ್ದ ಅವರು, ದುಃಖದ ನಡುವೆಯೂ ಶತಕ ಬಾರಿಸಿದ್ದರು. ಚಂಡೀಗಢ ವಿರುದ್ದದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ವಿಷ್ಣು ಸೋಲಂಕಿ ಆಕರ್ಷಕ 104 ರನ್ ಬಾರಿಸಿದ್ದರು. ಇದೀಗ ಚಂಡಿಗಢ ವಿರುದ್ದದ ಕೊನೆಯ ದಿನದಾಟದ ವೇಳೆ ಸೋಲಂಕಿಯವರ ತಂದೆ ತೀರಿಹೋದ ಸುದ್ದಿ ಬಂದಿದೆ. ಇದರ ಹೊರತಾಗಿಯೂ ಸೋಲಂಕಿ ಪಂದ್ಯ ಮುಕ್ತಾಯದ ಬಳಿಕ ಮನೆಗೆ ತೆರಳಲು ತೀರ್ಮಾನಿಸಿದ್ದಾರೆ.
Vishnu Solanki: ಮಗಳ ಸಾವು, ಅಪ್ಪನ ಸಾವುಗಳ ನಡುವೆಯೂ ಶತಕ ಸಿಡಿಸಿದ ಕ್ರಿಕೆಟ್ ಆಟಗಾರ!
ಬರೋಡಾ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬರೋಡಾ ಹಾಗೂ ಹೈದರಾಬಾದ್ ನಡುವಿನ ಎಲೈಟ್ 'ಬಿ' ಗುಂಪಿನ ಪಂದ್ಯವು ಭುವನೇಶ್ವರ್‌ನಲ್ಲಿರುವ ವಿಕಾಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.