Asianet Suvarna News Asianet Suvarna News

Ind vs SL: ರಿಷಭ್‌ ಪಂತ್‌ಗೆ ಕೊಕ್‌ ನೀಡಿ ಸಂಜು ಸ್ಯಾಮ್ಸನ್‌ಗೆ ಚಾನ್ಸ್‌?

ಭಾರತ-ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ
ಜನವರಿ 03ರಿಂದ ಆರಂಭವಾಗಲಿರುವ 3 ಪಂದ್ಯಗಳ ಟಿ20 ಸರಣಿ
ರಿಷಭ್ ಪಂತ್‌ ಅವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಮಣೆ ಹಾಕುವ ಸಾಧ್ಯತೆ

Ind vs SL Rishabh Pant likely to be rested Sanju Samson and Ishan Kishan to get nod for T20I series say reports kvn
Author
First Published Dec 27, 2022, 7:25 AM IST

ನವದೆಹಲಿ(ಡಿ.27): ಮುಂದಿನ ವಾರ ಆರಂಭಗೊಳ್ಳಲಿರುವ ಶ್ರೀಲಂಕಾ ವಿರುದ್ಧದ ತವರಿನ ಟಿ20, ಏಕದಿನ ಸರಣಿಗೆ ಮಂಗಳವಾರ ಭಾರತ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದ್ದು, ಹಲವು ಬದಲಾವಣೆಗಳಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 

ಅನೇಕ ಅವಕಾಶಗಳ ಹೊರತಾಗಿಯೂ ಸೀಮಿತ ಓವರ್‌ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿರುವ ರಿಷಭ್‌ ಪಂತ್‌ ಟಿ20 ತಂಡದಿಂದ ಹೊರಗುಳಿಯಲಿದ್ದು, ವಿಕೆಟ್‌ ಕೀಪರ್‌ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್‌ ಹಾಗೂ ಇಶಾನ್‌ ಕಿಶನ್‌ಗೆ ಟಿ20 ಜೊತೆ ಏಕದಿನ ತಂಡದಲ್ಲೂ ಅವಕಾಶ ಸಿಗುವ ನಿರೀಕ್ಷೆ ಇದೆ. ರೋಹಿತ್‌ ಶರ್ಮಾ ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ಕಾರಣ ಟಿ20ಗೆ ಹಾರ್ದಿಕ್‌ ಪಾಂಡ್ಯ ನಾಯಕರಾಗುವುದು ಬಹುತೇಕ ಖಚಿತ ಎಂದು ತಿಳಿದುಬಂದಿದೆ.

ಶ್ರೀಲಂಕಾ ಟಿ20 ಸರಣಿಗೆ ಕೆ.ಎಲ್‌.ರಾಹುಲ್‌ಗೆ ಕೊಕ್‌?

ನವದೆಹಲಿ: ಸತತ ವೈಫಲ್ಯ ಅನುಭವಿಸುತ್ತಿರುವ ಕೆ.ಎಲ್‌.ರಾಹುಲ್‌ಗೆ ಜನವರಿ 3ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕೊಕ್‌ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈಗಾಗಲೇ ವಜಾಗೊಂಡಿದ್ದ ಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಈ ಸರಣಿಗೆ ಮಂಗಳವಾರ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆಯಿದ್ದು, ರಾಹುಲ್‌ ಕೈಬಿಟ್ಟು ದೇಸಿ ಟೂರ್ನಿಗಳಲ್ಲಿ ಮಿಂಚುತ್ತಿರುವ ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. 

ಇತ್ತೀಚೆಗಷ್ಟೇ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಕೆ ಎಲ್ ರಾಹುಲ್ ಮೊದಲ ಟೆಸ್ಟ್‌ ಪಂದ್ಯದಲ್ಲಿ 22 ಹಾಗೂ  23 ರನ್ ಬಾರಿಸಿದ್ದರು. ಇನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ 10 ಹಾಗೂ 02ರನ್ ಬಾರಿಸಿದ್ದರು. ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ರಾಹುಲ್ ದೊಡ್ಡ ಇನಿಂಗ್ಸ್ ಆಡಲು ವಿಫಲವಾಗುತ್ತಿದ್ದಾರೆ. ಹೀಗಾಗಿ ಕೆ ಎಲ್ ರಾಹುಲ್‌ಗೆ ವಿಶ್ರಾಂತಿ ದೊರೆಯುವ ಸಾಧ್ಯತೆಯಿದೆ.

10 ತಿಂಗಳ ಹಿಂದಷ್ಟೇ ಲೆದರ್‌ಬಾಲ್‌ನಲ್ಲಿ ಬೌಲಿಂಗ್‌ ಆರಂಭಿಸಿದ್ದ ಅವಿನಾಶ್ ಸಿಂಗ್, RCB ಸರ್ಪ್ರೈಸ್ ಪ್ಯಾಕೇಜ್..!

ಇದೇ ವೇಳೆ ಸರಣಿಗೆ ವಿರಾಟ್‌ ಕೊಹ್ಲಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇನ್ನೂ ಗಾಯದಿಂದ ಚೇತರಿಸಿಕೊಳ್ಳದ ರೋಹಿತ್‌ ಶರ್ಮಾ ಬದಲು ಹಾರ್ದಿಕ್‌ ಪಾಂಡ್ಯ ತಂಡದ ನಾಯಕತ್ವ ವಹಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸರಣಿಯ 3 ಪಂದ್ಯಗಳು ಜನವರಿ 3, 5, 7ಕ್ಕೆ ಕ್ರಮವಾಗಿ ಮುಂಬೈ, ಪುಣೆ, ರಾಜ್‌ಕೋಟ್‌ನಲ್ಲಿ ನಡೆಯಲಿವೆ.

ಐಸಿಸಿ ವೇಳಾಪಟ್ಟಿ ಬಗ್ಗೆ ಬೆನ್‌ ಸ್ಟೋಕ್ಸ್‌ ಆಕ್ರೋಶ

ಲಂಡನ್‌: ಟೆಸ್ಟ್‌ ಕ್ರಿಕೆಟ್‌ಗೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಐಸಿಸಿ ನೀಡುತ್ತಿಲ್ಲ ಎಂದು ಸಿಟ್ಟು ಹೊರಹಾಕಿರುವ ಇಂಗ್ಲೆಂಡ್‌ ಟೆಸ್ಟ್‌ ನಾಯಕ ಬೆನ್‌ ಸ್ಟೋಕ್ಸ್‌, ಟಿ20 ಲೀಗ್‌ಗಳಿಂದ ಟೆಸ್ಟ್‌ ಕ್ರಿಕೆಟ್‌ ಮೌಲ್ಯ ಕಳೆದುಕೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಅಂತಾರಾಷ್ಟ್ರೀಯ ಕ್ರಿಕೆಟ್‌ ವೇಳಾಪಟ್ಟಿಗೆ ಸಿಗಬೇಕಾದ ಪ್ರಾಮುಖ್ಯತೆ ಸಿಗುತ್ತಿಲ್ಲ. ಫ್ರಾಂಚೈಸಿ ಕ್ರಿಕೆಟ್‌ನಿಂದಾಗಿ ಟೆಸ್ಟ್‌ ಮೌಲ್ಯ ಕಳೆದುಕೊಳ್ಳುತ್ತಿದೆ. ಟೆಸ್ಟ್‌ ಹೊರತಾಗಿಯೂ ಆಟಗಾರರಿಗೆ ಬೇರೆ ಅವಕಾಶಗಳಿವೆ. ಆದರೆ ಟೆಸ್ಟ್‌ ಕ್ರಿಕೆಟ್‌ ನಮಗೆ ಅಗತ್ಯವಿದೆ’ ಎಂದಿದ್ದಾರೆ. 

ಇದೇ ವೇಳೆ ಟೆಸ್ಟ್‌ ಆಡುವ ದೇಶಗಳು ಅಭಿಮಾನಿಗಳನ್ನು ಆಕರ್ಷಿಸಲು ಇಂಗ್ಲೆಂಡ್‌ನ ‘ಬಾಜ್‌ಬಾಲ್‌’ ರೀತಿ ಆಕ್ರಮಣಕಾರಿ ಶೈಲಿಗೆ ಬದಲಾಗಬೇಕು ಎಂದು ಸ್ಟೋಕ್ಸ್‌ ಪರೋಕ್ಷವಾಗಿ ಅಭಿಪ್ರಾಯಿಸಿದ್ದಾರೆ.

ಏನಿದು ಬಾಜ್‌ಬಾಲ್‌ ಶೈಲಿ?

‘ಬಾಜ್‌’ ಎಂದು ಕರೆಸಿಕೊಳ್ಳುವ ನ್ಯೂಜಿಲೆಂಡ್‌ ಮಾಜಿ ಕ್ರಿಕೆಟಿಗ ಬ್ರೆಂಡನ್‌ ಮೆಕ್ಕಲಂ ಪ್ರಧಾನ ಕೋಚ್‌ ಆಗಿ ನೇಮಕಗೊಂಡ ಬಳಿಕ ಇಂಗ್ಲೆಂಡ್‌ ಆಕ್ರಮಣಕಾರಿ ಆಟಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪರಿಸ್ಥಿತಿ ಎಂತದ್ದೇ ಇರಲಿ, ತಂಡ ಆಕ್ರಮಣಕಾರಿ ಆಟವಾಡುವುದನ್ನು ನಿಲ್ಲಿಸುವುದಿಲ್ಲ. ಈ ರೀತಿಯ ಶೈಲಿ ಆಟದಿಂದಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವುಗಳನ್ನು ದಾಖಲಿಸುತ್ತಾ ಮುನ್ನುಗ್ಗುತ್ತಿದೆ. ಟೆಸ್ಟ್ ಕ್ರಿಕೆಟ್ ಮತ್ತಷ್ಟು ಜನಪ್ರಿಯವಾಗಿಸಲು ಎಲ್ಲಾ ತಂಡಗಳೂ ಈ ಶೈಲಿ ಅಳವಡಿಸಿಕೊಂಡರೆ ಒಳಿತು ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

Follow Us:
Download App:
  • android
  • ios