Asianet Suvarna News Asianet Suvarna News

Ind vs SA: ಹರಿಣಗಳೆದುರು ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ರೆಡಿಯಾದ ಟೀಂ ಇಂಡಿಯಾ

* ಜೋಹಾನ್ಸ್‌ಬರ್ಗ್‌ನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ

* ಟೆಸ್ಟ್ ಸರಣಿ ಗೆಲುವಿನ ಕನವರಿಕೆಯಲ್ಲಿದೆ ಟೀಂ ಇಂಡಿಯಾ

* ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡ ವಿರಾಟ್ ಕೊಹ್ಲಿ ಪಡೆ

 

Ind vs SA Team India eyes on Historical Test Series win Against South Africa kvn
Author
Bengaluru, First Published Jan 3, 2022, 8:10 AM IST

ಜೋಹಾನ್ಸ್‌ಬರ್ಗ್(ಜ.03)‌: ದಕ್ಷಿಣ ಆಫ್ರಿಕಾದ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಸೆಂಚೂರಿಯನ್‌ನ ಸೂಪರ್‌ ಸ್ಪೋರ್ಟ್‌ನಲ್ಲಿ ಗೆದ್ದು ಬೀಗಿರುವ ಭಾರತ, ಇದೀಗ ಮೊತ್ತೊಂದು ಇತಿಹಾಸ ಸೃಷ್ಟಿಸುವ ವಿಶ್ವಾಸದಲ್ಲಿದೆ. ಸೋಮವಾರದಿಂದ(ಜ.3) ಟೀಂ ಇಂಡಿಯಾದ (Team India) ನೆಚ್ಚಿನ ತಾಣವಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಕ್ರೀಡಾಂಗಣದಲ್ಲಿ 2ನೇ ಟೆಸ್ಟ್‌ ಆರಂಭವಾಗಲಿದ್ದು, ಭಾರತದ ಪಾಲಿಗೆ ಅತ್ಯಂತ ಮಹತ್ವದಾಗಿದ್ದೆ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ಒಂದೇ ಒಂದು ಟೆಸ್ಟ್‌ ಸರಣಿ ಗೆಲ್ಲದ ಭಾರತ, ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಇತಿಹಾಸ ನಿರ್ಮಾಣವಾಗಲಿದೆ.

ಇನ್ನು ವಾಂಡರರ್ಸ್‌ ಕ್ರೀಡಾಂಗಣ ಭಾರತದ ಭದ್ರಕೋಟೆ ಎನಿಸಿಕೊಂಡಿದ್ದು, ಇದುವರೆಗೂ ಈ ಅಂಗಳದಲ್ಲಿ ಸೋಲ ಅನುಭವಿಸಿಯೇ ಇಲ್ಲ. ವಾಂಡರರ್ಸ್‌ನಲ್ಲಿ 1992ರಿಂದ 2018ರ ವರೆಗೂ ಭಾರತ 5 ಟೆಸ್ಟ್‌ ಆಡಿದ್ದು, 3 ಡ್ರಾ, 2 ಗೆಲುವು ಕಂಡಿದೆ. 2006ರಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ 123 ರನ್‌ಗಳಿಂದ ಗೆದ್ದಿದ್ದ ಭಾರತ, 2018ರಲ್ಲಿ ನಡೆದಿದ್ದ ಪಂದ್ಯವನ್ನು 63 ರನ್‌ಗಳಿಂದ ಗೆದ್ದುಕೊಂಡಿತ್ತು.

2 ವರ್ಷದಿಂದ ಶತಕದ ಬರ ಎದುರಿಸುತ್ತಿರುವ ನಾಯಕ ವಿರಾಟ್‌ ಕೊಹ್ಲಿ (Virat Kohli) ಪಾಲಿಗೂ ವಾಂಡರರ್ಸ್‌ ನೆಚ್ಚಿನ ತಾಣವಾಗಿದೆ. ಇಲ್ಲಿ ಆಡಿರುವ 2 ಟೆಸ್ಟ್‌ ಪಂದ್ಯಗಳಲ್ಲಿ ಒಂದು ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ. ಜತೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದವರ ಸಾಲಿನಲ್ಲಿ ವಿರಾಟ್‌(310) 2ನೇ ಸ್ಥಾನದಲ್ಲಿದ್ದಾರೆ. 316 ರನ್‌ ಗಳಿಸಿರುವ ನ್ಯೂಜಿಲೆಂಡ್‌ನ ಜಾನ್‌ ರೈಡ್‌ ಮೊದಲ ಸ್ಥಾನದಲ್ಲಿದ್ದಾರೆ. ಇವರ ದಾಖಲೆ ಮುರಿಯಲು ವಿರಾಟ್‌ಗೆ ಇನ್ನು 7 ರನ್‌ ಬೇಕಿದೆ. ನಾಯಕನಾಗಿ ವಿರಾಟ್‌ 41 ಶತಕ ಸಿಡಿಸಿದ್ದು, ಮತ್ತೊಂದು ಶತಕ ಸಿಡಿಸಿದರೆ ರಿಕಿ ಪಾಂಟಿಂಗ್‌ ದಾಖಲೆಯನ್ನು ಪುಡಿಗಟ್ಟಲಿದ್ದಾರೆ. ಹೀಗಾಗಿ ಶತಕದ ಮೂಲಕ ವಿರಾಟ್‌ ಹೊಸ ವರ್ಷವನ್ನು ಸ್ವಾಗತಿಸುವ ತವಕದಲ್ಲಿದ್ದಾರೆ.

ಇನ್ನು ಮೊದಲ ಟೆಸ್ಟ್‌ ಪಂದ್ಯದಲ್ಲಿ ಉಪ ನಾಯಕ ಕೆ.ಎಲ್‌.ರಾಹುಲ್‌(KL Rahul), ಮಯಾಂಕ್‌ ಅಗರ್‌ವಾಲ್‌(Mayank Agarwal) ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ್ದ ರಾಹುಲ್‌ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಇದೇ ಕಾರಣದಿಂದ ಭಾರತ 2ನೇ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್‌ ಆದರೂ, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 305 ರನ್‌ಗಳ ಕಠಿಣ ಗುರಿ ನೀಡಿತ್ತು. ದಕ್ಷಿಣ ಆಫ್ರಿಕಾದ ಹೆಡಮುರಿ ಕಟ್ಟಿದ ಭಾರತೀಯ ಬೌಲರ್‌ಗಳು 113 ರನ್‌ಗಳ ಭರ್ಜರಿ ಜಯಕ್ಕೆ ಕಾರಣರಾಗಿದ್ದರು. 2ನೇ ಟೆಸ್ಟ್‌ನಲ್ಲೂ ರಾಹುಲ್‌ ಮತ್ತು ಮಯಾಂಕ್‌ರಿಂದ ಮತ್ತೊಂದು ಆಕರ್ಷಕ ಇನ್ಸಿಂಗ್ಸ್‌ ನಿರೀಕ್ಷಿಸಲಾಗಿದೆ. ಆದರೆ, ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯ ರಹಾನೆ (Ajinkya Rahane) ಫಾರ್ಮ್‌ಗೆ  ಮರಳಲೇಬೇಕಾದ ಒತ್ತಡದಲ್ಲಿದ್ದಾರೆ.

Ind vs SA: ಬಾಕ್ಸಿಂಗ್ ಡೇ ಟೆಸ್ಟ್ ಗೆಲುವಿನ ಬಳಿಕ ಕುಣಿದು ಸಂಭ್ರಮಿಸಿದ ಕೊಹ್ಲಿ, ದ್ರಾವಿಡ್‌

ಮೊದಲ ಟೆಸ್ಟ್‌ನಲ್ಲಿ 18 ವಿಕೆಟ್‌ ಕಬಳಿಸಿದ್ದ ಭಾರತ ವೇಗಿಗಳ ಪಡೆ, ಉತ್ತಮ ಲಯದಲ್ಲಿದ್ದು 2ನೇ ಟೆಸ್ಟ್‌ನಲ್ಲೂ ಮತ್ತದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ಮೊಹಮ್ಮದ್‌ ಶಮಿ, ಜಸ್ಟ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ಭಾರತದ ಪ್ರಮುಖ ಅಸ್ತ್ರವಾಗಿದ್ದಾರೆ. ರವಿಚಂದ್ರನ್‌ ಅಶ್ವಿನ್‌ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ನಲ್ಲೂ ಉತ್ತಮ ಲಯ ಕಾಯ್ದುಕೊಂಡಿದ್ದು, ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ ಮೇಲೆ ಮತ್ತಷ್ಟು ನಿರೀಕ್ಷೆಯಿದೆ.

ಅತ್ತ ಮೊದಲ ಟೆಸ್ಟ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ಗೆ ಕ್ವಿಂಟನ್‌ ಡಿ ಕಾಕ್‌ ನಿವೃತ್ತಿ ಘೋಷಿಸಿದ್ದು, ಹರಿಣಗಳ ಪಾಲಿಗೆ ಬಿಸಿ ತುಪ್ಪವಾಗಿದೆ. ಡಿ ಕಾಕ್‌ ಬದಲಿಗೆ ರಯಾನ್‌ ರಿಕೆಲ್ವನ್‌ ಸ್ಥಾನ ಪಡೆಯುವ ಸಾಧ್ಯತೆ ಇದೆ. ನಾಯಕ ಡೀನ್‌ ಎಲ್ಗರ್‌, ತೆಂಬಾ ಬವುಮಾ, ಮುಲ್ಡರ್‌ ಜವಾಬ್ದಾರಿಯುತ ಆಟ ಆಡಬೇಕಿದೆ. ದಕ್ಷಿಣ ಆಫ್ರಿಕಾದ ಬೌಲಿಂಗ್‌ ಪಡೆಯೂ ಬಲಿಷ್ಠವಾಗಿದ್ದು ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸೆನ್‌ ಉತ್ತಮ ಲಯದಲ್ಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ:

ಕೆ.ಎಲ್ ರಾಹುಲ್‌, ಮಯಾಂಕ್ ಅಗರ್‌ವಾಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್‌, ರವಿಚಂದ್ರನ್‌ ಅಶ್ವಿನ್‌, ಶಾರ್ದೂಲ್‌/ಉಮೇಶ್‌, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌

ದಕ್ಷಿಣ ಆಫ್ರಿಕಾ:

ಡೀನ್‌ ಎಲ್ಗರ್‌(ನಾಯಕ), ಮಾರ್ಕ್ರಮ್‌, ಪೀಟರ್‌ಸನ್‌, ರಾಸ್ಸಿ, ಬವುಮಾ, ರಯಾನ್‌, ಮುಲ್ಡರ್‌, ಮಹಾರಾಜ್‌, ರಬಾಡ, ಎನ್‌ಗಿಡಿ, ಓಲಿವರ್‌

ಪಿಚ್‌ ರಿಪೋರ್ಟ್‌

ವಾಂಡರರ್ಸ್‌ ಪಿಚ್‌ ಬೌಲರ್‌ಗಳಿಗೆ ಹೆಚ್ಚು ನೆರವು ನೀಡಲಿದೆ. ಬ್ಯಾಟ್ಸ್‌ಮನ್‌ಗಳು ದೊಡ್ಡ ಇನ್ನಿಂಗ್ಸ್‌ ಕಟ್ಟುವುದು ದೊಡ್ಡ ಸವಾಲಾಗಿದೆ. ಅದರಲ್ಲೂ ಮೊದಲ ದಿನ, ಹೊಸ ಚೆಂಡಿನೊಂದಿಗೆ ಬ್ಯಾಟ್‌ ಮಾಡುವುದು ಕಷ್ಟಕರವಾಗಿದೆ. ಸ್ಪಿನ್ನರ್‌ಗಳಿಗೂ ಪಿಚ್‌ ನೆರವು ನೀಡಲಿದ್ದು, ಕೊನೆಯ 2 ದಿನ ಹೆಚ್ಚು ಸ್ವಿಂಗ್‌ ಆಗಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 1

Follow Us:
Download App:
  • android
  • ios