Asianet Suvarna News Asianet Suvarna News

Ind vs SA, Cape Town Test: ರಹಾನೆ-ಪೂಜಾರ ಪರ ಬ್ಯಾಟ್ ಬೀಸಿದ ನಾಯಕ ವಿರಾಟ್ ಕೊಹ್ಲಿ

* ಭಾರತ-ದಕ್ಷಿಣ ಆಫ್ರಿಕಾ ನಡುವಿನ ಕೇಪ್‌ಟೌನ್ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ

* ಜನವರಿ 11ರಿಂದ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭ

* ಪೂಜಾರ ಹಾಗೂ ರಹಾನೆ ಬೆಂಬಲಕ್ಕೆ ನಿಂತ ನಾಯಕ ವಿರಾಟ್ ಕೊಹ್ಲಿ

Ind vs SA Indian Test Cricket Captain Virat Kohli Backs Ajinkya Rahane Cheteshwar Pujara Ahead Of Cape Town kvn
Author
Bengaluru, First Published Jan 10, 2022, 5:23 PM IST

ಕೇಪ್‌ಟೌನ್‌(ಜ.10): ಭಾರತ ಟೆಸ್ಟ್ ತಂಡದ ವಿರಾಟ್ ಕೊಹ್ಲಿ (Virat Kohli) ಅನುಭವಿ ಬ್ಯಾಟರ್‌ಗಳಾದ ಅಜಿಂಕ್ಯ ರಹಾನೆ (Ajinkya Rahane) ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(Cheteshwar Pujara) ಪರ ಬ್ಯಾಟ್ ಬೀಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಆರಂಭವಾಗಲಿರುವ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಕೊಹ್ಲಿ, ವಿದೇಶಿ ಪ್ರವಾಸದಲ್ಲಿ ಈ ಇಬ್ಬರು ಅನುಭವಿ ಆಟಗಾರರು ತಂಡಕ್ಕೆ ಹಲವಾರು ಬಾರಿ ನೆರವಾಗಿದ್ದಾರೆ. ಅವರ ಅನುಭವಕ್ಕೆ ಬೆಲೆಕಟ್ಟಲಾಗದು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕಳೆದ ಕೆಲವು ಟೆಸ್ಟ್ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡುತ್ತಿದ್ದರು. ಆದರೆ ಜೋಹಾನ್ಸ್‌ಬರ್ಗ್‌ ಟೆಸ್ಟ್ (Johannesburg Test) ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಮೂರನೇ ವಿಕೆಟ್‌ಗೆ ಈ ಇಬ್ಬರು ಅನುಭವಿ ಬ್ಯಾಟರ್‌ಗಳು 111 ರನ್‌ಗಳ ಜತೆಯಾಟವಾಡುವ ಮೂಲಕ ತಾವೆಷ್ಟು ಉಪಯುಕ್ತ ಬ್ಯಾಟರ್‌ಗಳು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದರು. ಅಂತಿಮವಾಗಿ ಟೀಂ ಇಂಡಿಯಾ ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ 240 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಡೀನ್ ಎಲ್ಗರ್ (Dean Elgar) ಅವರ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿಟ್ಟುಕೊಂಡಿತ್ತು. ಡೀನ್ ಎಲ್ಗರ್ ಅಜೇಯ 96 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಚೇತೇಶ್ವರ್ ಪೂಜಾರ ಕಳೆದೆರಡು ವರ್ಷಗಳಿಂದ ಶತಕ ಸಿಡಿಸಿಲ್ಲ. ಆದರೆ ವಾಂಡರರ್ಸ್ ಸ್ಟೇಡಿಯಂನಲ್ಲಿ 53 ರನ್ ಬಾರಿಸಿದ್ದರು. ಇನ್ನೊಂದೆಡೆ ಅಜಿಂಕ್ಯ ರಹಾನೆ ಕೂಡಾ ಸ್ಪೋಟಕ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ವಿದೇಶಿ ಪ್ರವಾಸದಲ್ಲಿ ಈ ಇಬ್ಬರು ಆಟಗಾರರ ಅನುಭವಕ್ಕೆ ಬೆಲೆಕಟ್ಟಲಾಗದು ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Ind vs SA: ಕೇಪ್‌ಟೌನ್‌ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ, 2 ಮಹತ್ವದ ಬದಲಾವಣೆ..!

ಕಳೆದ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ ನೋಡಿ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಉತ್ತಮವಾಗಿ ಬ್ಯಾಟಿಂಗ್ ನಡೆಸಿದರು. ಅವರ ಅನುಭವ ನಮಗೆ ಸಾಕಷ್ಟು ವರದಾನವಾಗಿದೆ. ವಿದೇಶಿ ಪ್ರವಾಸದ ಕಠಿಣ ಸಂದರ್ಭಗಳಲ್ಲಿ ಈ ಇಬ್ಬರು ಆಟಗಾರರು ಜವಾಬ್ದಾರಿಯುತ ಪ್ರದರ್ಶನ ತೋರಿದ್ದಾರೆ. ನಾವದನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ನೋಡಿದ್ದೇವೆ. ಹಾಗೆಯೇ ಕಳೆದ ಟೆಸ್ಟ್ ಪಂದ್ಯದಲ್ಲೂ ನೋಡಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಹಲವಾರು ಬಾರಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ. ಅಂತಹ ಇನಿಂಗ್ಸ್‌ಗಳು ಸಾಕಷ್ಟು ಅಮೂಲ್ಯವಾದವು ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಪಡೆಯಲು ಶ್ರೇಯಸ್ ಅಯ್ಯರ್ (Shreyas Iyer) ಹಾಗೂ ಹನುಮ ವಿಹಾರಿ (Hanuma Vihari) ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ವಿರಾಟ್ ಕೊಹ್ಲಿಯವರ ಈ ಹೇಳಿಕೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. 

ಇನ್ನು ಬೆನ್ನು ನೋವಿನಿಂದ ಬಳಲುತ್ತಿದ್ದುದರಿಂದ ವಿರಾಟ್ ಕೊಹ್ಲಿ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ಕೊಹ್ಲಿ ಘೋಷಿಸಿದ್ದಾರೆ. ಇನ್ನು ಇದೇ ವೇಳೆ ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಸ್ನಾಯುಸೆಳೆತಕ್ಕೆ ಒಳಗಾಗಿರುವ ಮೊಹಮ್ಮದ್ ಸಿರಾಜ್ ನಿರ್ಣಾಯಕ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಹೀಗಾಗಿ ನಾಲ್ಕನೇ ವೇಗಿಯ ಸ್ಥಾನಕ್ಕಾಗಿ ಉಮೇಶ್ ಯಾದವ್ ಹಾಗೂ ಇಶಾಂತ್ ಶರ್ಮಾ ನಡುವೆ ಪೈಪೋಟಿ ಏರ್ಪಟ್ಟಂತೆ ಆಗಿದೆ.


 

Follow Us:
Download App:
  • android
  • ios