* ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಫೇಲ್* ಎರಡನೇ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ ಟೀಂ ಇಂಡಿಯಾ ವಿಕೆಟ್ ಕೀಪರ್* ರಿಷಭ್ ಪಂತ್ ಬ್ಯಾಟಿಂಗ್ ಮಾಡಿದ ರೀತಿಗೆ ಕಿಡಿಕಾರಿದ ಸುನಿಲ್ ಗವಾಸ್ಕರ್
ಜೋಹಾನ್ಸ್‌ಬರ್ಗ್(ಜ.05): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವು ರೋಚಕಘಟ್ಟ ತಲುಪಿದ್ದು, ಚೇತೇಶ್ವರ್ ಪೂಜಾರ (Cheteshwar Pujara) ಹಾಗೂ ಅಜಿಂಕ್ಯ ರಹಾನೆ (Ajinkya Rahane) ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೇವಲ 3 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದ್ದರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ (Sunil Gavaskar) ಕಿಡಿಕಾರಿದ್ದಾರೆ.
ಇಲ್ಲಿನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ 111 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಒತ್ತಡದ ಪರಿಸ್ಥಿತಿಯಲ್ಲೂ ದಿಟ್ಟ ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಬರೋಬ್ಬರಿ 9 ಟೆಸ್ಟ್ ಬಳಿಕ ಮೊದಲ ಅರ್ಧಶತಕ ಬಾರಿಸಿದರು. ಇನ್ನು ಚೇತೇಶ್ವರ್ ಪೂಜಾರ ಕೂಡಾ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಇಬ್ಬರನ್ನು ಬಲಿ ಪಡೆಯುವಲ್ಲಿ ಹರಿಣಗಳ ವೇಗಿ ಕಗಿಸೋ ರಬಾಡ ಯಶಸ್ವಿಯಾದರು. ಈ ವೇಳೆ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ ಎಲ್ಲರ ಚಿತ್ತ ಹನುಮ ವಿಹಾರಿ (Hanuma Vihari) ಹಾಗೂ ರಿಷಭ್ ಪಂತ್ (Rishabh Pant) ಜತೆಯಾಟದ ಮೇಲೆ ನಿಂತಿತ್ತು.
ಆದರೆ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರುವ ಪ್ರಯತ್ನವನ್ನೇ ಮಾಡಲಿಲ್ಲ. ಕಗಿಸೋ ರಬಾಡ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಯತ್ನ ನಡೆಸಿ ಪಂತ್ ವಿಕೆಟ್ ಕೈಚೆಲ್ಲಿದರು. ರಿಷಭ್ ಪಂತ್ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವಾರು ಬಾರಿ ತಂಡಕ್ಕೆ ಆಸರೆಯಾಗಿದ್ದಾರೆ. ಆದರೆ ಇದೀಗ ಪಂದ್ಯ ಮಹತ್ವದ ಘಟ್ಟದಲ್ಲಿರುವಾಗ ಬೇಜವಾಬ್ದಾರಿ ಬ್ಯಾಟಿಂಗ್ ನಡೆಸಿದ್ದಕ್ಕೆ ರಿಷಭ್ ಪಂತ್ ಮೇಲೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Ind vs SA: ಅರ್ಧಶತಕ ಬಾರಿಸಿದ ಪೂಜಾರ, ರಹಾನೆ, ರೋಚಕಘಟ್ಟದತ್ತ 2ನೇ ಟೆಸ್ಟ್..!
ಇದು ಒಂದು ರೀತಿಯ ಬೇಜವಾಬ್ದಾರಿಯುತ ಶಾಟ್. ಈ ರೀತಿಯ ಶಾಟ್‌ಗೆ ಯಾವುದೇ ಮುಲಾಜಿಲ್ಲ. ಸ್ವಲ್ಪವಾದರೂ ಜವಾಬ್ದಾರಿಯರಿತು ಬ್ಯಾಟಿಂಗ್ ಮಾಡಬೇಕು. ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರ ಪರಿಸ್ಥಿತಿಗನುಗುಣವಾಗಿ ಬ್ಯಾಟಿಂಗ್ ನಡೆಸಿದರು. ಆದರೆ ಅಂತಹ ಪ್ರದರ್ಶನ ರಿಷಭ್ ಪಂತ್ ಅವರಿಂದ ಬರಲಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ(53) ಹಾಗೂ ಅಜಿಂಕ್ಯ ರಹಾನೆ(58) ಸಮಯೋಚಿತ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 188 ರನ್ ಬಾರಿಸಿದ್ದು, ಒಟ್ಟಾರೆ 161 ರನ್‌ಗಳ ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರ್
ಭಾರತ: 202/10
ಕೆ.ಎಲ್. ರಾಹುಲ್: 50
ರವಿಚಂದ್ರನ್ ಅಶ್ವಿನ್: 46
ಮಾರ್ಕೊ ಜಾನ್ಸನ್: 31/4
ದಕ್ಷಿಣ ಆಫ್ರಿಕಾ:229/10
ಕೀಗನ್ ಪೀಟರ್‌ಸನ್: 62
ತೆಂಬ ಬವುಮಾ: 51
ಶಾರ್ದೂಲ್ ಠಾಕೂರ್: 61/7
ಭಾರತ: 188/6
ಅಜಿಂಕ್ಯ ರಹಾನೆ: 58
ಚೇತೇಶ್ವರ್ ಪೂಜಾರ: 53
ಕಗಿಸೋ ರಬಾಡ: 54/3
(* ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ)
