Asianet Suvarna News Asianet Suvarna News

Ind vs SA, Boxing Day Test: 174 ರನ್‌ಗಳಿಗೆ ಟೀಂ ಇಂಡಿಯಾ ಆಲೌಟ್, ಹರಿಣಗಳಿಗೆ ಗೆಲ್ಲಲು 305 ರನ್ ಗುರಿ

* ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 174 ರನ್‌ಗಳಿಗೆ ಆಲೌಟ್

* ದಕ್ಷಿಣ ಆಫ್ರಿಕಾಗೆ ಮೊದಲ ಟೆಸ್ಟ್ ಗೆಲ್ಲಲು 305 ರನ್‌ಗಳ ಕಠಿಣ ಗುರಿ ನೀಡಿದ ಭಾರತ

* ತಲಾ 4 ವಿಕೆಟ್ ಕಬಳಿಸಿ ಮಿಂಚಿದ ರಬಾಡ, ಮಾರ್ಕೊ ಜಾನ್ಸನ್‌

Ind vs SA Boxing Day Test Team India All Out at 174 and Set 305 runs target to South Africa kvn
Author
Bengaluru, First Published Dec 29, 2021, 6:06 PM IST
  • Facebook
  • Twitter
  • Whatsapp

ಸೆಂಚೂರಿಯನ್‌(ಡಿ.29): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 174 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯ ಗೆಲ್ಲಲು ಆತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ (South Africa Cricket Team) 305 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ. ಕಗಿಸೋ ರಬಾಡ (Kagiso Rabada) ಹಾಗೂ ಮಾರ್ಕೊ ಜಾನ್ಸನ್‌ ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು

ಇಲ್ಲಿನ ಸೂಪರ್‌ ಸ್ಪೋರ್ಟ್‌ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ಬೌಲರ್‌ಗಳು ಮಾರಕ ದಾಳಿ ನಡೆಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಒಂದು ವಿಕೆಟ್ ಕಳೆದುಕೊಂಡು 16 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ಆರಂಭದಲ್ಲೇ ನೈಟ್‌ ವಾಚ್‌ಮನ್‌ ಶಾರ್ದೂಲ್ ಠಾಕೂರ್ (Shardul Thakur) ವಿಕೆಟ್ ಕಳೆದುಕೊಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ಕೆ.ಎಲ್. ರಾಹುಲ್(KL Rahul) ಬ್ಯಾಟಿಂಗ್ ಕೇವಲ 23 ರನ್‌ಗಳಿಗೆ ಸೀಮಿತವಾಯಿತು.

ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ: 53 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಚೇತೇಶ್ವರ್ ಪೂಜಾರ (Cheteshwar Pujara) ಕೆಲಕಾಲ ಆಸರೆಯಾಗುವ ಯತ್ನ ನಡೆಸಿದರು. ಆದರೆ ದೊಡ್ಡ ಮೊತ್ತ ಕಲೆಹಾಕಲು ಈ ಇಬ್ಬರಿಗೂ ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ 18 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಈ ಮೂಲಕ 2021ರಲ್ಲೂ ಅಂತಾರಾಷ್ಟ್ರೀಯ ಶತಕ ಬಾರಿಸಲು ಕೊಹ್ಲಿ ವಿಫಲರಾದರು. ವಿರಾಟ್ ಕೊಹ್ಲಿ 2019ರಲ್ಲಿ ಬಾಂಗ್ಲಾದೇಶ ವಿರುದ್ದ ಪಿಂಕ್ ಬಾಲ್ ಟೆಸ್ಟ್‌ ಪಂದ್ಯದಲ್ಲಿ ಕಡೆಯ ಬಾರಿಗೆ ಸೆಂಚುರಿ ಬಾರಿಸಿದ್ದರು. 

ಇನ್ನು ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ನೆಲಕಚ್ಚಿ ಆಡುವ ಯತ್ನ ನಡೆಸಿದರಾದರೂ, ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಪೂಜಾರ, ಎರಡನೇ ಇನಿಂಗ್ಸ್‌ನಲ್ಲಿ 64 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ ಕೇವಲ 16 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು.

Mohammad Shami 200 Wickets Club: ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ..!

ಕೊನೆಯಲ್ಲಿ ಅಜಿಂಕ್ಯ ರಹಾನೆ(Ajinkya Rahane), ರಿಷಭ್ ಪಂತ್(Rishabh Pant) ಹಾಗೂ ರವಿಚಂದ್ರನ್ ಅಶ್ವಿನ್ (Ravichandran Ashwin) ಚುರುಕಾಗಿ ರನ್‌ಗಳಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ರಹಾನೆ 23 ಎಸೆತಗಳಲ್ಲಿ 20 ರನ್ ಬಾರಿಸಿದರೆ, ರಿಷಭ್ ಪಂತ್ 34 ಎಸೆತಗಳಲ್ಲಿ 6 ಬೌಂಡರಿ ಸಹಿತ 34 ರನ್‌ ಬಾರಿಸಿದರು. ಇನ್ನು ಅಶ್ವಿನ್ 14 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು.

ರಬಾಡ-ಮಾರ್ಕೊಗೆ ತಲಾ 4 ವಿಕೆಟ್‌: ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಕಗಿಸೋ ರಬಾಡ ಹಾಗೂ ಟೆಸ್ಟ್‌ಗೆ ಪಾದಾರ್ಪಣೆ ಮಾಡಿರುವ ಮಾರ್ಕೋ ಜಾನ್ಸನ್ ತಲಾ 4 ವಿಕೆಟ್ ಕಬಳಿಸುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಾಡಿದರು. ಇನ್ನು ಮತ್ತೋರ್ವ ವೇಗಿ ಲುಂಗಿ ಎಂಗಿಡಿ 2 ವಿಕೆಟ್ ಕಬಳಿಸಿ ಉತ್ತಮ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್
ಭಾರತ: 327/10 & 174/10

ದಕ್ಷಿಣ ಆಫ್ರಿಕಾ: 197/10
 

Follow Us:
Download App:
  • android
  • ios