* ದಕ್ಷಿಣ ಆಫ್ರಿಕಾ ಎದುರು ಟಿ20 ಸರಣಿ ಗೆದ್ದ ಟೀಂ ಇಂಡಿಯಾ* ಆಕರ್ಷಕ ಅರ್ಧಶತಕದ ಮೂಲಕ ಗಮನ ಸೆಳೆದ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್* ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕೆ ಎಲ್ ರಾಹುಲ್

ಗುವಾಹಟಿ(ಅ.03): ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 16 ರನ್‌ಗಳ ರೋಚಕ ಜಯ ಸಾಧಿಸುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಟಿ20 ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಸ್ಪೋಟಕ ಆರಂಭ ಒದಗಿಸಿಕೊಟ್ಟಿದ್ದ ಕೆ ಎಲ್ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್‌ಗೆ ಈ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಬರ್ಸಾಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಕ್ಷರಶಃ ರನ್‌ ಮಳೆಯೇ ಹರಿಯಿತು. ಹೊಡಿಬಡಿಯಾಟದಲ್ಲಿ ಬರೋಬ್ಬರಿ 450 ಕ್ಕೂ ಅಧಿಕ ರನ್‌ಗಳು ದಾಖಲಾದವು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡಲಿಳಿದ ಸೂರ್ಯಕುಮಾರ್ ಯಾದವ್‌, ಕೇವಲ 22 ಎಸೆತಗಳಲ್ಲಿ ಆಕರ್ಷಕ 61 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು

ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಾಕಷ್ಟು ರಕ್ಷಣಾತ್ಮಕ ಬ್ಯಾಟಿಂಗ್ ಮೂಲಕ ಅಜೇಯ 51 ರನ್ ಬಾರಿಸಿದ್ದ ಕೆ ಎಲ್ ರಾಹುಲ್, ಎರಡನೇ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕೇವಲ 27 ಎಸೆತಗಳಲ್ಲಿ 58 ರನ್ ಸಿಡಿಸಿ ಮಿಂಚಿದ್ದರು. ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ದಕ್ಷಿಣ ಎದುರು ರಾಹುಲ್ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು.

Scroll to load tweet…

ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೋಡಿ 96 ರನ್‌ಗಳ ಜತೆಯಾಟ ನಿಭಾಯಿಸಿತು. ಇದಾದ ಬಳಿಕ ಕ್ರೀಸ್‌ಗಿಳಿದ ಸೂರ್ಯಕುಮಾರ್, ಹರಿಣಗಳ ಬೌಲಿಂಗ್ ಪಡೆಯನ್ನು ಮನಬಂದಂತೆ ದಂಡಿಸಿದರು. ಸೂರ್ಯಕುಮಾರ್ ಯಾದವ್ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳಿಂದಲೇ 50 ರನ್(5 ಬೌಂಡರಿ ಹಾಗೂ 5 ಸಿಕ್ಸರ್) ಪೂರೈಸಿದರು. ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಜತೆಗೂಡಿ ಸೂರ್ಯಕುಮಾರ್ ಯಾದವ್ 100+ ರನ್‌ ಜತೆಯಾಟ ನಿಭಾಯಿಸಿದರು. ಪರಿಣಾಮ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 237 ರನ್ ಕಲೆಹಾಕಲು ಸಾಧ್ಯವಾಯಿತು.

Ind vs SA: ಅಸ್ಸಾಂನಲ್ಲಿ ಫೆಂಟಾಸ್ಟಿಕ್‌ ಫೋರ್‌ ವೈಲೆಂಟ್‌, ಇಂಡಿಯಾ ಆಟಕ್ಕೆ ಹರಿಣಗಳು ಸೈಲೆಂಟ್‌!

ಇನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ ಎಲ್ ರಾಹುಲ್, ನನಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿ ಮೂಡಿಸಿತು. ಸೂರ್ಯಕುಮಾರ್ ಯಾದವ್‌ಗೆ ಇದು ಸಿಗಬೇಕಿತ್ತು. ಅವರು ಪಂದ್ಯದ ದಿಕ್ಕನ್ನೇ ಬದಲಿಸಿದರು. ಇನಿಂಗ್ಸ್‌ನ ಮಧ್ಯದ ಓವರ್‌ಗಳಲ್ಲಿ ರನ್‌ಗಳಿಸುವುದು ಎಷ್ಟು ಕಷ್ಟ ಎನ್ನುವುದರ ಅರಿವು ನನಗಿದೆ. ದಿನೇಶ್ ಕಾರ್ತಿಕ್‌ಗೆ ಕೊನೆಯಲ್ಲಿ ಹೆಚ್ಚು ಚೆಂಡನ್ನು ಎದುರಿಸಲು ಅವಕಾಶ ಸಿಗಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಕೆ ಎಲ್ ರಾಹುಲ್ ಅತ್ಯುತ್ತಮ ಬ್ಯಾಟಿಂಗ್ ನಡೆಸದರು ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ.

ಈ ಗೆಲುವಿನೊಂದಿಗೆ ಭಾರತ ಕ್ರಿಕೆಟ್ ತಂಡವು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ದ ತವರಿನಲ್ಲಿ ಟಿ20 ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವು ಅಕ್ಟೋಬರ್ 04ರಂದು ನಡೆಯಲಿದೆ.