Asianet Suvarna News Asianet Suvarna News

Rahul Dravid Good Gesture: ಕಾನ್ಪುರ ಪಿಚ್ ಮಾಡಿದ ಸಿಬ್ಬಂದಿಗೆ ದ್ರಾವಿಡ್ 35K ಗಿಫ್ಟ್‌..!

* ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

* ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ

* ಸ್ಪರ್ಧಾತ್ಮಕ ಪಿಚ್ ರೆಡಿ ಮಾಡಿದ ಗ್ರೌಂಡ್‌ ಸಿಬ್ಬಂದಿಗೆ ಡ್ರಾವಿಡ್ ಭರ್ಜರಿ ಗಿಫ್ಟ್

Ind vs NZ Test Team India Head Coach Rahul Dravid gives Rs 35000 to Kanpur groundsmen for preparing Sporting pitch kvn
Author
Bengaluru, First Published Nov 30, 2021, 10:02 AM IST

ಕಾನ್ಪುರ(ನ.30): ಇಲ್ಲಿನ ಗ್ರೀನ್‌ ಪಾರ್ಕ್ ಕ್ರೀಡಾಂಗಣದಲ್ಲಿ (Green Park Stadium) ನಡೆದ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌ ಸಿದ್ಧಪಡಿಸಿದ್ದಕ್ಕಾಗಿ ಟೀಂ ಇಂಡಿಯಾದ (Team India) ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid), ಮೈದಾನ ಸಿಬ್ಬಂದಿಗೆ ವೈಯಕ್ತಿಕವಾಗಿ 35,000 ರುಪಾಯಿ ಉಡುಗೊರೆ ನೀಡಿದ್ದಾರೆ. ಈ ವಿಷಯವನ್ನು ಉತ್ತರ ಪ್ರದೇಶ ಕ್ರಿಕೆಟ್‌ ಸಂಸ್ಥೆ ಖಚಿತಪಡಿಸಿದೆ.

ಭಾರತದ ಪಿಚ್‌ಗಳೆಂದರೆ ಅದು ಹೆಚ್ಚಾಗಿ ಸ್ಪಿನ್‌ ಪಿಚ್‌ ಗಳಾಗಿರುತ್ತವೆ. ಅದರಲ್ಲೂ ಕೊನೆಯ ದಿನದಾಟದಲ್ಲಿ ಸ್ಪಿನ್ನರ್‌ಗಳೆದುರು ಬ್ಯಾಟ್ ಬೀಸಲು ಬ್ಯಾಟರ್‌ಗಳು ಪರದಾಡುತ್ತಾರೆ ಎನ್ನುವ ಅಪವಾದವಿದೆ. ಇದೆಲ್ಲದರ ಹೊರತಾಗಿಯೂ ಕಿವೀಸ್‌ನ 10ನೇ ಕ್ರಮಾಂಕದ ಬ್ಯಾಟರ್‌ಗಳು ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು. ಈ ರೀತಿಯ ಸ್ಪರ್ಧಾತ್ಮಕ ಪಿಚ್‌ ರೆಡಿ ಮಾಡಿದ ಮೈದಾನದ ಸಿಬ್ಬಂದಿಗಳ ಬಗ್ಗೆ ದ್ರಾವಿಡ್ ಇದೀಗ ಪ್ರೋತ್ಸಾಹದಾಯಕವಾಗಿ ಉಡುಗೊರೆ ನೀಡಿದ್ದಾರೆ.

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟೆಸ್ಟ್‌ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ (Shreyas Iyer) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 345 ರನ್ ಬಾರಿಸಿ ಸರ್ವಪತನ ಕಂಡಿತ್ತು. ಇನ್ನು ಇದಕ್ಕುತ್ತರವಾಗಿ ನ್ಯೂಜಿಲೆಂಡ್, ಅಕ್ಷರ್ ಪಟೇಲ್ (Axar Patel) ಮಾರಕ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ ಕೇವಲ 296 ರನ್‌ಗಳಿಗೆ ಆಲೌಟ್ ಆಯಿತು. ಇದಾದ ಬಳಿಕ 49 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, ಆರಂಭಿಕ ಆಘಾತದ ಹೊರತಾಗಿಯೂ, ಶ್ರೇಯಸ್ ಅಯ್ಯರ್, ವೃದ್ದಿಮಾನ್ ಸಾಹ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ 234/7 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗೆಲ್ಲಲು 284 ರನ್‌ಗಳ ಕಠಿಣ ಗುರಿ ಪಡೆದ ನ್ಯೂಜಿಲೆಂಡ್ ಕೊನೆಯ ದಿನದಾಟದಂತ್ಯದ ವೇಳೆಗೆ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸುವ ಮೂಲಕ ರೋಚಕವಾಗಿ ಡ್ರಾ ಮಾಡಿಕೊಂಡಿತು.

ದ್ರಾವಿಡ್‌ ಅಭಿಮಾನಿ ಮಗನಿಂದ ದ್ರಾವಿಡ್‌ ಶುಭಾರಂಭ ಕನಸಿಗೆ ಅಡ್ಡಿ!

ರಚಿನ್‌ ರವೀಂದ್ರ (Rachin Ravindra) ಅವರ ತಂದೆ ರವಿ ಕೃಷ್ಣಮೂರ್ತಿ, ರಾಹುಲ್‌ ದ್ರಾವಿಡ್‌ ಹಾಗೂ ಸಚಿನ್‌ ತೆಂಡುಲ್ಕರ್‌ರ (Sachin Tendulkar) ದೊಡ್ಡ ಅಭಿಮಾನಿಯಂತೆ. ಇದೇ ಕಾರಣಕ್ಕೆ ತಮ್ಮ ಪುತ್ರನಿಗೆ ರಚಿನ್‌ ಎಂದು ನಾಮಕರಣ ಮಾಡಿದ್ದರು ಎನ್ನಲಾಗಿದೆ. ದ್ರಾವಿಡ್‌ ಅಭಿಮಾನಿಯ ಪುತ್ರ ಕೋಚ್‌ ರಾಹುಲ್‌ ದ್ರಾವಿಡ್‌ರ ಶುಭಾರಂಭದ ಕನಸಿಗೆ ಅಡ್ಡಿಯಾಗಿದ್ದು ವಿಪರ್ಯಾಸ. ಪ್ರಧಾನ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ದ್ರಾವಿಡ್‌ಗಿದು ಮೊದಲ ಟೆಸ್ಟ್‌ ಆಗಿತ್ತು.

ಭಾರತ, ಕಿವೀಸ್‌ಗೆ ತಲಾ 4 ಅಂಕಗಳು

2021-2023ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ (ICC World Test Championship) ಭಾರತ ಒಟ್ಟು 30 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಾನ್ಪುರ ಪಂದ್ಯ ಡ್ರಾಗೊಂಡಿದ್ದರಿಂದ ಭಾರತ ಹಾಗೂ ನ್ಯೂಜಿಲೆಂಡ್‌ಗೆ ತಲಾ 4 ಅಂಕ ದೊರೆಯಿತು. 

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

ಭಾರತ 5 ಪಂದ್ಯಗಳಲ್ಲಿ ಒಟ್ಟು 60 ಅಂಕಗಳಿಗೆ ಸ್ಪರ್ಧಿಸಿ 30 ಅಂಕ ಕಲೆಹಾಕಿದ್ದು, ಶೇ.50ರಷ್ಟುಅಂಕ ಪ್ರತಿಶತ ಹೊಂದಿದೆ. 5ರಲ್ಲಿ 2 ಗೆಲುವು (ತಲಾ 12 ಅಂಕ), 2 ಡ್ರಾ (ತಲಾ 4 ಅಂಕ) ಹಾಗೂ 1 ಸೋಲು ಕಂಡಿದೆ. ಒಟ್ಟು 32 ಅಂಕ ಗಳಿಸಿದರೂ, ಇಂಗ್ಲೆಂಡ್‌ ವಿರುದ್ಧ ನಿಧಾನಗತಿ ಬೌಲಿಂಗ್‌ಗಾಗಿ 2 ಅಂಕ ಕಳೆದುಕೊಂಡಿತ್ತು. ಇನ್ನು ನ್ಯೂಜಿಲೆಂಡ್‌ಗಿದು ಈ ಅವಧಿಯಲ್ಲಿ ಮೊದಲ ಪಂದ್ಯವಾಗಿತ್ತು. ಪಂದ್ಯದಲ್ಲಿ 12 ಅಂಕಕ್ಕೆ ಸ್ಪರ್ಧಿಸಿದ್ದ ಕಿವೀಸ್‌, ಡ್ರಾ ಸಾಧಿಸಿ 4 ಅಂಕ ಗಳಿಸಿದೆ. ತಂಡ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.

ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯಶ್ರೇಷ್ಠ: ಶ್ರೇಯಸ್‌ ಭಾರತದ 7ನೇ ಆಟಗಾರ

ಪಂದ್ಯದಲ್ಲಿ ಶತಕ ಹಾಗೂ ಅರ್ಧಶತಕ ಬಾರಿಸಿದ ಶ್ರೇಯಸ್‌ ಅಯ್ಯರ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದರು. ಚೊಚ್ಚಲ ಟೆಸ್ಟ್‌ನಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತದ 7ನೇ ಆಟಗಾರ ಎನ್ನುವ ಹಿರಿಮೆಗೆ ಶ್ರೇಯಸ್‌ ಪಾತ್ರರಾದರು. ಅವರಿಗೂ ಮುನ್ನ ಪೃಥ್ವಿ ಶಾ, ರೋಹಿತ್‌ ಶರ್ಮಾ, ಶಿಖರ್‌ ಧವನ್‌, ಆರ್‌.ಅಶ್ವಿನ್‌, ಆರ್‌.ಪಿ.ಸಿಂಗ್‌ ಹಾಗೂ ಪ್ರವೀಣ್‌ ಆಮ್ರೆ ಈ ಗೌರವಕ್ಕೆ ಪಾತ್ರರಾಗಿದ್ದರು.

Follow Us:
Download App:
  • android
  • ios