Asianet Suvarna News Asianet Suvarna News

Ind vs NZ: ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ , ಪಾದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್

* ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ

* ಕಿವೀಸ್-ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯಕ್ಕೆ ಜೈಪುರ ಆತಿಥ್ಯ

* ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್

Ind vs NZ Team India Won the toss and Elected to Bowl first against New Zealand in Jaipur kvn
Author
Bengaluru, First Published Nov 17, 2021, 6:37 PM IST
  • Facebook
  • Twitter
  • Whatsapp

ಜೈಪುರ(ನ.17): ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ನಿರೀಕ್ಷೆಯಂತೆಯೇ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ವೆಂಕಟೇಶ್ ಅಯ್ಯರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಇಲ್ಲಿನ ಸವಾಯಿ ಮಾನ್‌ಸಿಂಗ್‌ ಮೈದಾನದಲ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳಿದೆ. ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಂಡಿದ್ದಾರೆ.

India Vs New Zealand: ಇಂದಿನಿಂದ ದ್ರಾವಿಡ್‌-ರೋಹಿತ್‌ ಯುಗ ಆರಂಭ!

ಈ ಸರಣಿಯಲ್ಲಿ ಟೀಂ ಇಂಡಿಯಾ ನಿರೀಕ್ಷೆಯಂತೆಯೇ ಕೆಲವು ಪ್ರಯೋಗಗಳಿಗೆ ಕೈಹಾಕಲಿದೆ. ಯುಎಇನಲ್ಲಿ ನಿರಾಸೆ ಮೂಡಿಸಿದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು (Hardik Pandya) ತಂಡದಿಂದ ಹೊರಗಿಟ್ಟಿರುವ ಭಾರತ, ಅವರ ಜಾಗದಲ್ಲಿ ವೆಂಕಟೇಶ್‌ ಅಯ್ಯರ್‌ರನ್ನು (Venkatesh Iyer) ಪರೀಕ್ಷಿಸಲು ಮುಂದಾಗಿದೆ. ಐಪಿಎಲ್‌ನಲ್ಲಿ ಕೆಕೆಆರ್‌ ತಂಡದಲ್ಲಿ ಮಿಂಚಿದ್ದ ವೆಂಕಿ ಅಯ್ಯರ್‌, ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲೂ ಮಧ್ಯಪ್ರದೇಶ ಪರ ಉತ್ತಮ ಆಟವಾಡಿದ್ದರು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡವು ಫೈನಲ್‌ಗೇರುವಲ್ಲಿ ವೆಂಕಟೇಶ್ ಅಯ್ಯರ್ ಮಹತ್ವದ ಪಾತ್ರ ನಿಭಾಯಿಸಿದ್ದರು. ಕೆಕೆಆರ್ ಪರ ಆರಂಭಿಕನಾಗಿ ಯಶಸ್ವಿಯಾಗಿದ್ದ ವೆಂಕಟೇಶ್ ಅಯ್ಯರ್, ಇದೀಗ ಟೀಂ ಇಂಡಿಯಾದಲ್ಲಿ ಫಿನಿಶರ್ ಪಾತ್ರ ನಿಭಾಯಿಸುವ ಸಾಧ್ಯತೆಯಿದೆ.

ಹರ್ಷಲ್ ಪಟೇಲ್, ಚಹಲ್‌ಗಿಲ್ಲ ಸ್ಥಾನ: ಮೊದಲ ಪಂದ್ಯದಲ್ಲೇ ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಕೂಡಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಹರ್ಷಲ್‌ ಪಟೇಲ್‌ಗೆ ನಿರಾಸೆ ಎದುರಾಗಿದೆ. ಅದೇ ರೀತಿ ಐಪಿಎಲ್‌ನಲ್ಲಿ ಮಿಂಚಿದ್ದರೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್‌ಗೆ ನಿರಾಸೆ ಎದುರಾಗಿದೆ. ಇದೇ ವೇಳೆ ಅಕ್ಷರ್ ಪಟೇಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಮಣೆಹಾಕಲಾಗಿದೆ.

ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖವಾಗಿ 4 ಬದಲಾವಣೆಗಳನ್ನು ಮಾಡಲಾಗಿದ್ದು, ಜೇಮ್ಸ್‌ ನೀಶಮ್‌, ಇಶ್ ಸೋಧಿ ಹಾಗೂ ಆಡಂ ಮಿಲ್ನೆಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ವಿಶ್ವಕಪ್ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಕೇನ್ ವಿಲಿಯಮ್ಸನ್‌ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಲಾಕಿ ಪರ್ಗ್ಯೂಸನ್‌, ಮಾರ್ಕ್‌ ಚಾಂಪ್ಮನ್, ಟೋಡ್ ಆಶ್ಲೆ ಹಾಗೂ ರಚಿನ್ ರವಿಂದ್ರ ತಂಡ ಕೂಡಿಕೊಂಡಿದ್ದಾರೆ.

ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ನ್ಯೂಜಿಲೆಂಡ್ ತಂಡವು ಮತ್ತೊಮ್ಮೆ ಟೀಂ ಇಂಡಿಯಾ ಮೇಲೆ ಸವಾರಿ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ತಂಡಗಳು ಹೀಗಿವೆ:

ಭಾರತ: ಕೆ.ಎಲ್‌.ರಾಹುಲ್‌, ರೋಹಿತ್ ಶರ್ಮಾ(ನಾಯಕ)‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌, ರಿಷಭ್‌ ಪಂತ್‌‌, ವೆಂಕಟೇಶ್‌ ಅಯ್ಯರ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಮೊಹಮದ್‌ ಸಿರಾಜ್‌.

ನ್ಯೂಜಿಲೆಂಡ್: ಮಾರ್ಟಿನ್‌ ಗಪ್ಟಿಲ್‌, ಡ್ಯಾರೆಲ್‌ ಮಿಚೆಲ್‌, ಮಾರ್ಕ್ ಚಾಪ್ಮನ್, ಗ್ಲೆನ್‌ ಫಿಲಿಫ್ಸ್‌, ಟಿಮ್‌ ಸೀಫರ್ಟ್‌(ವಿಕೆಟ್ ಕೀಪರ್), ರಚಿನ್ ರವಿಂದ್ರ‌, ಟಿಮ್‌ ಸೌಥಿ(ನಾಯಕ), ಮಿಚೆಲ್‌ ಸ್ಯಾಂಟ್ನರ್‌, ಟಾಡ್‌ ಆ್ಯಶ್ಲೆ‌, ಲಾಕಿ ಫಗ್ರ್ಯೂಸನ್‌, ಟ್ರೆಂಟ್ ಬೌಲ್ಟ್.


 

Follow Us:
Download App:
  • android
  • ios