Ind vs NZ: ಇಂದು ಭಾರತ-ನ್ಯೂಜಿಲೆಂಡ್ ಟಿ20 ಫೈನಲ್..!
* ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ
* ತಲಾ ಒಂದೊಂದು ಪಂದ್ಯ ಜಯಿಸಿರುವ ಉಭಯ ತಂಡಗಳು

ಅಹಮದಾಬಾದ್: ತವರಿನಲ್ಲಿ ಸತತ 12 ಟಿ20 ಸರಣಿಗಳಲ್ಲಿ ಅಜೇಯವಾಗಿರುವ ಭಾರತ ತನ್ನ ದಾಖಲೆಯನ್ನು ಮುಂದುವರಿಸುವ ಗುರಿ ಇಟ್ಟುಕೊಂಡಿದ್ದು, ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯಲಿರುವ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಸದ್ಯ 2 ಪಂದ್ಯಗಳು 1-1ರಿಂದ ಸಮಬಲಗೊಂಡಿದ್ದು, ಈ ಪಂದ್ಯ ಸರಣಿಯ ಫೈನಲ್ ಹಣಾಹಣಿ ಎನಿಸಿಕೊಂಡಿದೆ. ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ರಾಂಚಿಯಲ್ಲಿ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಕಿವೀಸ್‌ನ ಸ್ಪಿನ್ ಬಲೆಗೆ ಬಿದ್ದ ಭಾರತ 21 ರನ್ ಸೋಲು ಅನುಭವಿಸಿತ್ತು. ಟಿ20 ಕ್ರಿಕೆಟ್‌ಗೆ ಯೋಗ್ಯವಲ್ಲದ ರೀತಿಯಲ್ಲಿ ಕಂಡುಬಂದ ಲಖನೌ ಪಿಚ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಹಾರ್ದಿಕ್ ಬಳಗ ತಿಣುಕಾಡಿ ಗೆದ್ದಿತ್ತು. ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದು, ಈ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ತೋರಬೇಕಿದೆ. ಏಕದಿನದಲ್ಲಿ ಕಂಡುಕೊಂಡ ಲಯವನ್ನು ಶುಭ್‌ಮನ್ ಗಿಲ್ ಹಾಗೂ ಇಶಾಣ್ ಕಿಶನ್ ಟಿ20ಯಲ್ಲಿ ಇನ್ನಷ್ಟೇ ಪ್ರದರ್ಶಿಸಬೇಕಿದೆ. ಇವರಿಬ್ಬರ ಪೈಕಿ ಒಬ್ಬರನ್ನು ಹೊರಗಿಟ್ಟು ಪೃಥ್ವಿ ಶಾಗೆ ಅವಕಾಶ ನೀಡಿದರೂ ಅಚ್ಚರಿಯಿಲ್ಲ.
ಆಸ್ಟ್ರೇಲಿಯಾ ಸರಣಿಗೂ ಮುನ್ನ ಪತ್ನಿ ಜೊತೆ ರಿಷಿಕೇಶ ಆಶ್ರಮಕ್ಕೆ ಭೇಟಿ ನೀಡಿದ ವಿರಾಟ್ ಕೊಹ್ಲಿ
ಮತ್ತೊಂದೆಡೆ ರಾಹುಲ್ ತ್ರಿಪಾಠಿ, ದೀಪಕ್ ಹೂಡಾ ಸಹ ಸಿಕ್ಕಿರುವ ಅವಕಾಶ ಬಳಸಿಕೊಳ್ಳುತ್ತಿಲ್ಲ. ಸೂರ್ಯಕುಮಾರ್, ಹಾರ್ದಿಕ್ ಪ್ರದರ್ಶನವನ್ನು ಭಾರತ ಹೆಚ್ಚಾಗಿ ನೆಚ್ಚಿಕೊಂಡಿದ್ದು, ವೇಗದ ಬೌಲಿಂಗ್ ಪಡೆಯೂ ದುರ್ಬಲವಾದಂತೆ ಕಂಡುಬರುತ್ತಿದೆ. ಸ್ಪಿನ್ ವಿಭಾಗದಲ್ಲಿ ಕುಲ್‌ಚಾ ಜೋಡಿ ಎಂದೇ ಖ್ಯಾತರಾಗಿರುವ ಕುಲ್ದೀಪ್ ಯಾದವ್-ಯಜುವೇಂದ್ರ ಚಹಲ್ ಮತ್ತೊಮ್ಮೆ ಕಿವೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ. ಮತ್ತೊಂದೆಡೆ ಸ್ಯಾಂಟ್ನರ್ ನಾಯಕತ್ವದ ಕಿವೀಸ್ ಭಾರತದಲ್ಲಿ ಅವಿಸ್ಮರಣೀಯ ಸರಣಿ ಜಯದ ನಿರೀಕ್ಷೆಯಲ್ಲಿದೆ.
ಸಂಭವನೀಯ ತಂಡ
ಭಾರತ: ಶುಭ್‌ಮನ್ ಗಿಲ್, ಇಶಾನ್ ಕಿಶನ್/ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ವಾಷಿಂಗ್ಟನ್ ಸುಂದರ್, ದೀಪಕ್ ಹೂಡಾ, ಕುಲ್ದೀಪ್ ಯಾದವ್, ಶಿವಂ ಮಾವಿ, ಆರ್ಶದೀಪ್ ಸಿಂಗ್, ಯುಜುವೇಂದ್ರ ಚಹಲ್.
ನ್ಯೂಜಿಲೆಂಡ್: ಆ್ಯಲೆನ್ ಅಲೆನ್, ಡೆವೊನ್ ಕಾನ್‌ವೇ, ಡೇರಲ್ ಮಿಚೆಲ್, ಮಾರ್ಕ್ ಚ್ಯಾಪ್ಮನ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ನಾಯಕ), ಇಶ್ ಸೋಧಿ, ಲಾಕಿ ಫಗ್ರ್ಯೂಸನ್, ಜೇಕಬ್ ಡಫಿ, ಬ್ಲೇರ್ ಟಿಕ್ನೆರ್.
ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ಅಹಮದಾಬಾದ್ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿಕೊಂಡಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಇಲ್ಲಿನ ಮೊದಲ ಇನ್ನಿಂಗ್‌್ಸ ಸರಾಸರಿ ಮೊತ್ತ 174. ಇಲ್ಲಿ ನಡೆದ 6 ಅಂ.ರಾ. ಟಿ20 ಪಂದ್ಯಗಳಲ್ಲಿ ಮೂರರಲ್ಲಿ ಚೇಸ್ ಮಾಡಿದ ತಂಡ ಗೆದ್ದಿದೆ. ರಾತ್ರಿ ವೇಳೆ ಇಬ್ಬನಿ ಬೀಳುವ ಕಾರಣ ಟಾಸ್ ನಿರ್ಣಾಯಕ ಪಾತ್ರ ವಹಿಸಬಹುದು.