ಹ್ಯಾಮಿಲ್ಟನ್(ಜ.29): ಇಂಡೋ-ಕಿವೀಸ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಕ್ಲೆಂಡ್‌ನಲ್ಲಿ ನಡೆದ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, ಹ್ಯಾಮಿಲ್ಟನ್‌ನಲ್ಲಿ ನಡೆಯಲಿರುವ ಪಂದ್ಯವನ್ನು ಜಯಿಸಿ ಸರಣಿ ಗೆಲ್ಲುವ ಲೆಕ್ಕಾಚಾರದಲ್ಲಿದೆ.

ಇನ್ನು ತವರಿನಲ್ಲೇ ಸತತ ಎರಡು ಪಂದ್ಯದಲ್ಲಿ ಮುಗ್ಗರಿಸಿರುವ ಆತಿಥೇಯ ನ್ಯೂಜಿಲೆಂಡ್ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗಿದೆ. ಹೀಗಾಗಿ ಸೆಡನ್ ಪಾರ್ಕ್‌ನಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಸರಣಿ ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದ ಗೆಲುವು ಕಿವೀಸ್ ಪಾಲಿಗೆ ಅನಿವಾರ್ಯ ಎನಿಸಿದೆ.

ಟೀಂ ಇಂಡಿಯಾ ಇದುವರೆಗೂ ಕಿವೀಸ್ ನೆಲದಲ್ಲಿ ಟಿ20 ಸರಣಿ ಜಯಿಸಿಲ್ಲ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಐತಿಹಾಸಿಕ ಗೆಲುವಿನ ಕನವರಿಕೆಯಲ್ಲಿದೆ. ಮೊದಲೆರಡು ಪಂದ್ಯದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಹುತೇಕ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಹೌದು, ಬ್ಯಾಟಿಂಗ್ ಕ್ರಮಾಂಕದಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಇನ್ನು ಆಲ್ರೌಂಡರ್ ವಿಭಾಗದಲ್ಲು ಜಡೇಜಾ ಹಾಗೂ ಶಿವಂ ದುಬೆ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ. ಆದರೆ ಬೌಲಿಂಗ್ ವಿಭಾಗದಲ್ಲಿ ಒಂದು ಬದಲಾವಣೆ ಮಾಡುವ ಸಾಧ್ಯತೆಯಿದ್ದು, ಮೊದಲೆರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ನವದೀಪ್ ಸೈನಿ ಇಲ್ಲವೇ ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ಮೊದಲ ಪಂದ್ಯದಲ್ಲಿ ಕೇವಲ 3 ಓವರ್ ಬೌಲಿಂಗ್ ಮಾಡಿದ್ದ ಠಾಕೂರ್ 14ರ ಸರಾಸರಿಯಲ್ಲಿ 44 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇನ್ನು ಎರಡನೇ ಪಂದ್ಯದಲ್ಲಿ ಬರೀ 2 ಓವರ್ ಬೌಲಿಂಗ್ ಮಾಡಿ 10ರ ಸರಾಸರಿಯಲ್ಲಿ 21 ರನ್ ನೀಡಿ ಒಂದು ವಿಕೆಟ್ ಮಾತ್ರ ಪಡೆಯಲು ಶಕ್ತರಾಗಿದ್ದರು.

ಮೂರನೇ ಟಿ20 ಪಂದ್ಯದಲ್ಲಿ ಸುವರ್ಣ ನ್ಯೂಸ್.ಕಾಂ ಆಯ್ಕೆ ಮಾಡಿದ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ ನೋಡಿ...
ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ನವದೀಪ್ ಸೈನಿ/ಕುಲ್ದೀಪ್ ಯಾದವ್, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಯಜುವೇಂದ್ರ ಚಹಲ್‌.