ಹ್ಯಾಮಿಲ್ಟನ್‌(ಜ.29): ಮೊದಲ 2 ಟಿ20 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಬುಧವಾರ ಇಲ್ಲಿನ ಸೆಡನ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ 3ನೇ ಟಿ20 ಪಂದ್ಯದಲ್ಲೂ ಯಶಸ್ಸು ಗಳಿಸಿ, ಸರಣಿ ಜಯಿಸುವ ವಿಶ್ವಾಸದಲ್ಲಿದೆ. 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಭಾರತ 2-0 ಯಿಂದ ಮುನ್ನಡೆ ಸಾಧಿಸಿದೆ. 3ನೇ ಪಂದ್ಯವನ್ನು ಗೆದ್ದರೇ ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಸಾಧನೆ ಮಾಡಲಿದೆ. ಭಾರತ ಸರಣಿ ಗೆದ್ದರೇ ಟಿ20 ಶ್ರೇಯಾಂಕದಲ್ಲಿ ಭಾರತ 4ನೇ ಸ್ಥಾನಕ್ಕೇರಲಿದೆ.

ಅಂಡರ್‌-19 ವಿಶ್ವಕಪ್‌: ಭಾರತ ಸೆಮಿಫೈನಲ್‌ಗೆ ಪ್ರವೇಶ

ಆತಿಥೇಯ ನ್ಯೂಜಿಲೆಂಡ್‌ ಸರಣಿ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದು, ಪರಿಸ್ಥಿತಿ ಕೈ ಮೀರುವ ಮೊದಲೇ ಪುಟಿದೇಳಲು ಕಾತರಿಸುತ್ತಿದೆ. ಆಕ್ಲೆಂಡ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ರನ್‌ ಹೊಳೆ ಹರಿದಿತ್ತು. ಭಾರತ 6 ವಿಕೆಟ್‌ಗಳಿಂದ ಗೆದ್ದಿತ್ತು. 2 ದಿನಗಳ ಬಳಿಕ ಇದೇ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಬೌಲರ್‌ಗಳು ಮಿಂಚಿದ್ದರು. ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. 3ನೇ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರು ಅಬ್ಬರಿಸಲು ಸಜ್ಜಾಗಿದ್ದಾರೆ.

ಇಲ್ಲಿದೆ ನೋಡಿ ಇಂಡೋ-ಕಿವೀಸ್ 2ನೇ ಟಿ20 ಪಂದ್ಯದ ಹೈಲೈಟ್ಸ್

ಭಾರತ ತಂಡದ ಅಂತಿಮ 11ರ ಬಳಗದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಬ್ಯಾಟಿಂಗ್‌ ಕ್ರಮಾಂಕ ನಿಗದಿಯಾದಂತೆ ಕಾಣುತ್ತಿದೆ. ಕೆ.ಎಲ್‌.ರಾಹುಲ್‌ ಹಾಗೂ ಶ್ರೇಯಸ್‌ ಅಯ್ಯರ್‌ ತಂಡದ ಆಡಳಿತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಜಯದ ಲಯದಲ್ಲಿರುವ ತಂಡವನ್ನು ಬದಲಾವಣೆ ಮಾಡುವುದಿಲ್ಲ. ವೇಗಿಗಳ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ ಹಾಗೂ ಶಾರ್ದೂಲ್‌ ಠಾಕೂರ್‌ ಪರಿಣಾಮಕಾರಿ ಎನಿಸಿದ್ದಾರೆ. ಶಾರ್ದೂಲ್‌ಗೆ 2 ಓವರ್‌ ಕಡಿಮೆ ಮಾಡಿ ಆಲ್ರೌಂಡರ್‌ ಶಿವಂ ದುಬೆ ಅವರನ್ನು ಬಳಸಿಕೊಳ್ಳುವ ಕೊಹ್ಲಿ ತಂತ್ರ ಕೈ ಹಿಡಿದಿದೆ. ಅಷ್ಟೇನು ಕರಾರುವಕ್‌ ಎನಿಸದ ಶಾರ್ದೂಲ್‌ ಬದಲಿಗೆ ಮತ್ತೊಬ್ಬ ವೇಗಿ ನವ್‌ದೀಪ್‌ ಸೈನಿಗೆ ತಂಡದಲ್ಲಿ ಸ್ಥಾನ ಸಿಗಬಹುದು.

ಇನ್ನು ಭಾರತ ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯನ್ನೇ ಮುಂದುವರಿಸುವ ಯೋಜನೆ ಹೊಂದಿದೆ. ರವೀಂದ್ರ ಜಡೇಜಾ ಹಾಗೂ ಯಜುವೇಂದ್ರ ಚಹಲ್‌ ಉತ್ತಮ ಪ್ರದರ್ಶನ ತೋರಿದ್ದಾರೆ. ಮತ್ತೊಬ್ಬ ಸ್ಪಿನ್ನರ್‌ ರೂಪದಲ್ಲಿ ಕುಲ್ದೀಪ್‌ ಯಾದವ್‌ ಅಥವಾ ವಾಷಿಂಗ್ಟನ್‌ ಸುಂದರ್‌ ರನ್ನು ಆಡಿಸಲು ಕೊಹ್ಲಿ ನಿರ್ಧರಿಸುತ್ತಾರಾ ಎನ್ನುವ ಬಗ್ಗೆ ಕುತೂಹಲವಿದೆ.

ಅನುಭವಿ ಬೌಲರ್‌ಗಳಿಲ್ಲ: ಆತಿಥೇಯ ನ್ಯೂಜಿಲೆಂಡ್‌ ತಂಡದಲ್ಲಿ ಅನುಭವಿ ಬೌಲರ್‌ಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಮುಖ ಬೌಲರ್‌ಗಳು ಗಾಯಗೊಂಡು ಹೊರಬಿದ್ದಿರುವ ಕಾರಣ, ಕಿವೀಸ್‌ ತಂಡ ಅನನುಭವಿ ಬೌಲರ್‌ಗಳನ್ನಿಟ್ಟುಕೊಂಡ ಬಲಿಷ್ಠ ಭಾರತ ತಂಡದ ಬ್ಯಾಟ್ಸ್‌ಮನ್‌ಗಳನ್ನು ಎದುರಿಸಲು ಹರಸಾಹಸ ಪಡುತ್ತಿದೆ. ವೇಗಿ ಟಿಮ್‌ ಸೌಥಿ ಒಬ್ಬರೇ ಕಿವೀಸ್‌ ಪಡೆಯಲ್ಲಿ ಅನುಭವಿ ಬೌಲರ್‌ ಎನಿಸಿದ್ದಾರೆ. ಸೌಥಿ ಹಾಗೂ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ 2ನೇ ಟಿ20 ಪಂದ್ಯದಲ್ಲಿ ಪರಿಣಾಮಕಾರಿ ಎನಿಸಿದ್ದರು. ಉಳಿದ ಎಲ್ಲಾ ಬೌಲರ್‌ಗಳು ದುಬಾರಿಯಾಗಿದ್ದರು. ಆತಿಥೇಯರ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದರೆ ಸರಣಿ ಕೈಜಾರಲಿದೆ.

ಪಿಚ್‌ ರಿಪೋರ್ಟ್‌

ಸೆಡನ್‌ ಪಾರ್ಕ್ ಮೈದಾನದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಇಲ್ಲಿನ ಕ್ರೀಡಾಂಗಣದ ಚಿಕ್ಕದಾಗಿರುವ ಕಾರಣ ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಬ್ಯಾಟ್ಸ್‌ಮನ್‌ಗಳ ಸ್ವರ್ಗ ಎನಿಸಿರುವ ಪಿಚ್‌ನಲ್ಲಿ ಮೊದಲು ಬ್ಯಾಟ್‌ ಮಾಡುವ ತಂಡ 200ಕ್ಕೂ ಹೆಚ್ಚಿನ ರನ್‌ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚಿರಲಿದೆ. ಟಾಸ್‌ ಪ್ರಮುಖ ಪಾತ್ರವಹಿಸಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಯಜುವೇಂದ್ರ ಚಹಲ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಕಾಲಿನ್‌ ಮನ್ರೊ, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಿಮ್‌ ಸೀಫರ್ಟ್‌, ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೌಥಿ, ಹ್ಯಾಮಿಶ್‌ ಬೆನ್ನೆಟ್‌, ಬ್ಲೇರ್‌ ಟಿಕ್ನೆರ್‌.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1