Ind vs Eng: ರೋಹಿತ್ ದಿಟ್ಟ ಬ್ಯಾಟಿಂಗ್, ಟೀಂ ಇಂಡಿಯಾಗೆ ಅಲ್ಪ ಮುನ್ನಡೆ
* ಟೀಂ ಇಂಡಿಯಾಗೆ ಎರಡನೇ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ
* ರೋಹಿತ್ ಶರ್ಮಾ ದಿಟ್ಟ ಬ್ಯಾಟಿಂಗ್
* ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 108 ರನ್
ಲಂಡನ್(ಸೆ.04): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ(47*) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಓವಲ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಮೂರನೇ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 108 ರನ್ ಬಾರಿಸಿದ್ದು, ಒಟ್ಟಾರೆ 9 ರನ್‌ಗಳ ಮುನ್ನಡೆ ಸಾಧಿಸಿದೆ.
ಬರೋಬ್ಬರಿ 99 ರನ್‌ಗಳ ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 43 ರನ್ ಬಾರಿಸಿತ್ತು. ಇನ್ನು ಮೂರನೇ ದಿನದಾಟವನ್ನು ಟೀಂ ಇಂಡಿಯಾ ಎಚ್ಚರಿಕೆಯಿಂದ ಆರಂಭಿಸಿತು. ಮೊದಲ ವಿಕೆಟ್‌ಗೆ ರಾಹುಲ್-ರೋಹಿತ್ ಶರ್ಮಾ ಜೋಡಿ 83 ರನ್‌ಗಳ ಜತೆಯಾಟ ನಿಭಾಯಿಸಿದರು. ಉತ್ತಮವಾಗಿ ಆಡುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್ 101 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಬಾರಿಸಿ ಆಂಡರ್‌ಸನ್ ಬೌಲಿಂಗ್‌ನಲ್ಲಿ ಬೇರ್‌ಸ್ಟೋವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ರೋಹಿತ್ ದಿಟ್ಟ ಬ್ಯಾಟಿಂಗ್: ಒಂದು ಕಡೆ ರಾಹುಲ್ ಉತ್ತಮ ಬ್ಯಾಟಿಂಗ್ ನಡೆಸಿದರೆ, ಮತ್ತೊಂದು ತುದಿಯಿಂದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಪರಿಸ್ಥಿತಿಗನುಗುಣವಾಗಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ದಾರೆ. 131 ಎಸೆತಗಳನ್ನು ಎದುರಿಸಿರುವ ರೋಹಿತ್ 5 ಬೌಂಡರಿ ಸಹಿತ ಅಜೇಯ 47 ರನ್ ಬಾರಿಸಿದ್ದು, ಬೃಹತ್ ಮೊತ್ತ ಕಲೆಹಾಕುವ ಮುನ್ಸೂಚನೆ ನೀಡಿದ್ದಾರೆ. ಪೂಜಾರ 21 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ ಅಜೇಯ 14 ರನ್ ಬಾರಿಸಿ ರೋಹಿತ್‌ಗೆ ಉತ್ತಮ ಸಾಥ್ ನೀಡಿದ್ದಾರೆ.