* ರೋಚಕಘಟ್ಟದತ್ತ ಭಾರತ ಹಾಗೂ ಇಂಗ್ಲೆಂಡ್ ಮೊದಲ ಟೆಸ್ಟ್‌ ಪಂದ್ಯ* ಮೊದಲ ಟೆಸ್ಟ್ ಗೆಲ್ಲಲು 209 ರನ್‌ ಗುರಿ ನೀಡಿದ ಇಂಗ್ಲೆಂಡ್‌* ಕೊನೆಯ ದಿನದಾಟದಲ್ಲಿ ಭಾರತ ಮೊದಲ ಟೆಸ್ಟ್ ಗೆಲ್ಲಲು ಬೇಕಿದೆ 157 ರನ್

ನಾಟಿಂಗ್‌ಹ್ಯಾಮ್(ಆ.08)‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತಕ್ಕೆ ಗೆಲ್ಲಲು 209 ರನ್‌ ಗುರಿ ನಿಗದಿಯಾಗಿದೆ. ನಾಯಕ ಜೋ ರೂಟ್‌ ಅವರ ಅಮೋಘ ಶತಕ (109)ದ ನೆರವಿನಿಂದ ಇಂಗ್ಲೆಂಡ್‌ 2ನೇ ಇನ್ನಿಂಗ್ಸ್‌ನಲ್ಲಿ 303 ರನ್‌ ಗಳಿಸಿ ಆಲೌಟ್‌ ಆಯಿತು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಭಾರತ, 4ನೇ ದಿನದಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 52 ರನ್‌ ಗಳಿಸಿದ್ದು, ಗೆಲ್ಲಲು ಇನ್ನೂ 157 ರನ್‌ ಗಳಿಸಬೇಕಿದೆ. ಭಾನುವಾರ ಅಂತಿಮ ದಿನವಾಗಿದ್ದು ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಉತ್ಸಾಹದಲ್ಲಿದೆ.

3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 25 ರನ್‌ ಗಳಿಸಿದ್ದ ಇಂಗ್ಲೆಂಡ್‌, 4ನೇ ದಿನವಾದ ಶನಿವಾರ ಬಹುಬೇಗನೆ 2 ವಿಕೆಟ್‌ ಕಳೆದುಕೊಂಡಿತು. ರೋರಿ ಬನ್ಸ್‌(18) ಹಾಗೂ ಜ್ಯಾಕ್‌ ಕ್ರಾಲಿ(06) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ 3ನೇ ವಿಕೆಟ್‌ಗೆ ಜೊತೆಯಾದ ಡಾಮ್‌ ಸಿಬ್ಲಿ ಹಾಗೂ ಜೋ ರೂಟ್‌, ಇಂಗ್ಲೆಂಡ್‌ಗೆ ಆಸರೆಯಾದರು. ಇವರಿಬ್ಬರ ನಡುವೆ 89 ರನ್‌ಗಳ ಜೊತೆಯಾಟ ಮೂಡಿಬಂತು. ಸಿಬ್ಲಿ 28 ರನ್‌ ಗಳಿಸಿ ಔಟಾದರು. ಬೇರ್‌ಸ್ಟೋವ್‌, ಲಾರೆನ್ಸ್‌ ಹಾಗೂ ಬಟ್ಲರ್‌ ಜೊತೆ ಉಪಯುಕ್ತ ಜೊತೆಯಾಟವಾಡಿದರು. ಮನಮೋಹಕ ಬ್ಯಾಟಿಂಗ್‌ ನಡೆಸಿದ ರೂಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 21ನೇ ಶತಕ ದಾಖಲಿಸಿದರು.

Scroll to load tweet…

ಗರಿಷ್ಠ ಟೆಸ್ಟ್‌ ವಿಕೆಟ್‌ ಸಾಧನೆ: ಕುಂಬ್ಳೆ ದಾಖಲೆ ಮರಿದ ಆ್ಯಂಡರ್‌ಸನ್‌, ಶಹಬ್ಬಾಶ್ ಎಂದ ಜಂಬೋ

172 ಎಸೆತಗಳನ್ನು ಎದುರಿಸಿದ ರೂಟ್‌, 14 ಬೌಂಡರಿಗಳ ನೆರವಿನಿಂದ 109 ರನ್‌ ಗಳಿಸಿ ಔಟಾದರು. ಸ್ಯಾಮ್‌ ಕರ್ರನ್‌ ಮತ್ತೊಮ್ಮೆ ಭಾರತೀಯರನ್ನು ಕಾಡಿದರು. ಅವರ 32 ರನ್‌ಗಳ ಕೊಡುಗೆ ತಂಡದ ಮುನ್ನಡೆ 200 ರನ್‌ ದಾಟಲು ನೆರವಾಯಿತು.

ಟೀಂ ಇಂಡಿತಾ ಪರ ವೇಗಿ ಬುಮ್ರಾಗೆ 5 ವಿಕೆಟ್‌: ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿದ್ದ ಜಸ್‌ಪ್ರೀತ್‌ ಬುಮ್ರಾ, 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿದರು. ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಬುಮ್ರಾ ದಾಳಿ ಎದುರಿಸಲು ಪರದಾಡಿದರು. ಸಿರಾಜ್‌ ಹಾಗೂ ಶಾರ್ದೂಲ್‌ ತಲಾ 2, ಮೊಹಮದ್‌ ಶಮಿ 1 ವಿಕೆಟ್‌ ಕಿತ್ತರು.

ಸ್ಕೋರ್‌: 
ಇಂಗ್ಲೆಂಡ್‌ 183 ಹಾಗೂ 303(ರೂಟ್‌ 109, ಕರ್ರನ್‌ 32, ಬೂಮ್ರಾ 5-64) 
ಭಾರತ 278 ಹಾಗೂ 52/1 (4ನೇ ದಿನದಂತ್ಯಕ್ಕೆ)