ಅಹಮದಾಬಾದ್‌(ಮಾ.05): ಟೀಂ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್ ತಾವೆಷ್ಟು ಉಪಯುಕ್ತ ಬ್ಯಾಟ್ಸ್‌ಮನ್‌ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಟೀಂ ಇಂಡಿಯಾ 5 ವಿಕೆಟ್ ಕಳೆದುಕೊಂಡು 121 ರನ್‌ಗಳಿದ್ದಾಗ ಕ್ರೀಸ್‌ಗಿಳಿದ ಪಂತ್ ಆಕರ್ಷಕ ಶತಕ ಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಅಂತಿಮವಾಗಿ ಪಂತ್ 101 ರನ್‌ ಬಾರಿಸಿ ಜೇಮ್ಸ್‌ ಆ್ಯಂಡರ್‌ಸನ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ. 

ಹೌದು, ರಿಷಭ್‌ ಪಂತ್‌ ಕಳೆದ ನಾಲ್ಕೈದು ಪಂದ್ಯಗಳಲ್ಲಿ ಶತಕ ಸಮೀಪ ಬಂದು ವಿಕೆಟ್‌ ಕೈಚೆಲ್ಲಿ ನಿರಾಸೆ ಅನುಭವಿಸಿದ್ದರು. ಸಿಡ್ನಿಯಲ್ಲಿ 97ರನ್‌ ಬಾರಿಸಿ ಪಂದ್ಯ ಡ್ರಾ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಪಂತ್, ಗಾಬಾದಲ್ಲಿ ಅಜೇಯ 89 ರನ್‌ ಬಾರಿಸಿ ತಂಡ ರೋಚಕ ಗೆಲುವು ಸಾಧಿಸಲು ಕಾರಣೀಕರ್ತರಾಗಿದ್ದರು. ಇನ್ನು ಚೆನ್ನೈನಲ್ಲಿ ಪಂತ್‌ ಕೆಚ್ಚೆದೆಯ 91 ರನ್‌ ಚಚ್ಚಿದ್ದರು. ಇದೀಗ ಕೊನೆಗೂ ಶತಕ ಪೂರೈಸುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ಪಂತ್‌ ವೃತ್ತಿಜೀವನದ ಮೂರನೇ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. 

ಶೂನ್ಯ ಸಂಪಾದನೆಯಲ್ಲಿ ಧೋನಿ ದಾಖಲೆ ಸರಿಗಟ್ಟಿದ ಕ್ಯಾಪ್ಟನ್‌ ಕೊಹ್ಲಿ..!

ಒಟ್ಟು 115 ಎಸೆತಗಳನ್ನು ಎದುರಿಸಿದ ಪಂತ್ ಜೋ ರೂಟ್‌ ಬೌಲಿಂಗ್‌ನಲ್ಲಿ ಮನಮೋಹಕ ಸಿಕ್ಸರ್ ಬಾರಿಸುವ ಮೂಲಕ ಭಾರತದಲ್ಲಿ ಮೊದಲ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಮೊದಲ 82 ಎಸೆತಗಳಲ್ಲಿ 50 ರನ್‌ ಕಲೆಹಾಕಿದ್ದ ಪಂತ್ ಆ ಬಳಿಕ ಕೇವಲ 33 ಎಸೆತಗಳಲ್ಲಿ ಉಳಿದ 50 ರನ್‌ ಪೂರೈಸುವ ಮೂಲಕ ಪ್ರಬುದ್ಧ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ.