ಪುಣೆ(ಮಾ.23): ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಸ್ಥಾನ ನಿರ್ಧರಿಸಲು ಟೆಸ್ಟ್‌ ಸರಣಿ ನಡೆದರೆ, ಐಸಿಸಿ ಟಿ20 ವಿಶ್ವಕಪ್‌ನ ಸಿದ್ಧತೆಗಾಗಿ ಟಿ20 ಸರಣಿ ನಡೆಯಿತು. ಎರಡೂ ಸರಣಿಗಳಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಮೇಲುಗೈ ಸಾಧಿಸಿತು. ಇದೀಗ ಎರಡೂ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿಗೆ ಮಂಗಳವಾರ ಚಾಲನೆ ಸಿಗಲಿದೆ. ಈ ಸರಣಿಗೆ ಹೆಚ್ಚಿನ ಮಹತ್ವವಿಲ್ಲದಿದ್ದರೂ ಎರಡು ಶ್ರೇಷ್ಠ ತಂಡಗಳ ನಡುವಿನ ಸೆಣಸಾಟ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ಹಾಲಿ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ಏಕದಿನ ಮಾದರಿಯಲ್ಲಿ ತನ್ನ ಪರಾಕ್ರಮ ಮುಂದುವರಿಸಲು ಎದುರು ನೋಡುತ್ತಿದ್ದರೆ, ಕಳೆದ 2 ಸರಣಿಗಳಲ್ಲಿ ಸೋತಿದ್ದ ಭಾರತ, ಹ್ಯಾಟ್ರಿಕ್‌ ಸರಣಿ ಸೋಲು ತಪ್ಪಿಸಿಕೊಳ್ಳಲು ಹೋರಾಡಲಿದೆ. ಕಳೆದ ವರ್ಷ ನ್ಯೂಜಿಲೆಂಡ್‌ ಹಾಗೂ ಆಸ್ಪ್ರೇಲಿಯಾ ಪ್ರವಾಸಗಳಲ್ಲಿ ಭಾರತ, ಏಕದಿನ ಸರಣಿಗಳಲ್ಲಿ ಪರಾಭವಗೊಂಡಿತ್ತು. ಹೀಗಾಗಿ ಈ ಸರಣಿಯನ್ನು ಗೆಲ್ಲುವುದರ ಜೊತೆ ಟಿ20 ವಿಶ್ವಕಪ್‌ ಸಿದ್ಧತೆ ಕಡೆಗೆ ಗಮನ ಹರಿಸಲಿದೆ.

ರಾಹುಲ್‌ಗೆ ಸಿಗುತ್ತಾ ಸ್ಥಾನ: ಟಿ20 ಸರಣಿಯಲ್ಲಿ ಆಡಿದ ಬಹುತೇಕ ಆಟಗಾರರೇ ಏಕದಿನ ಸರಣಿಗೂ ಆಯ್ಕೆಯಾಗಿದ್ದಾರೆ. ಶಿಖರ್‌ ಧವನ್‌ ಹಾಗೂ ರೋಹಿತ್‌ ಶರ್ಮಾ ಆರಂಭಿಕರಾಗಿ ಆಡಲಿದ್ದಾರೆ ಎಂದು ನಾಯಕ ವಿರಾಟ್‌ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ವಿರಾಟ್‌ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದರೆ, 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಮುಂದುವರಿಯಲಿದ್ದಾರೆ. ಹೀಗಾಗಿ ಸೂರ್ಯಕುಮಾರ್‌ಗೆ ಅವಕಾಶ ಸಿಗುವುದು ಕಷ್ಟ. ವಿಕೆಟ್‌ ಕೀಪರ್‌ ಸ್ಥಾನಕ್ಕೆ ಕೆ.ಎಲ್‌.ರಾಹುಲ್‌ ಹಾಗೂ ರಿಷಭ್‌ ಪಂತ್‌ ನಡುವೆ ಪೈಪೋಟಿ ಇದೆ. ಹಾರ್ದಿಕ್‌ ಪಾಂಡ್ಯ ಟಿ20 ಸರಣಿಯಲ್ಲಿ ಆಲ್ರೌಂಡರ್‌ ಆಗಿ ಗಮನ ಸೆಳೆದಿದ್ದರು. ಆದರೆ ಏಕದಿನ ಪಂದ್ಯದಲ್ಲಿ 10 ಓವರ್‌ ಬೌಲ್‌ ಮಾಡುವಷ್ಟು ಫಿಟ್‌ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

ಕೃನಾಲ್‌ ಪಾಂಡ್ಯ ಇಲ್ಲವೇ ವಾಷಿಂಗ್ಟನ್‌ ಸುಂದರ್‌ ಇಬ್ಬರಲ್ಲಿ ಒಬ್ಬರು ಆಡಬಹುದು. ವೇಗದ ಬೌಲಿಂಗ್‌ ಪಡೆಯನ್ನು ಭುವನೇಶ್ವರ್‌ ಕುಮಾರ್‌ ಮುನ್ನಡೆಸಲಿದ್ದು, ಶಾರ್ದೂಲ್‌ ಠಾಕೂರ್‌ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. 3ನೇ ವೇಗಿಯಾಗಿ ಟಿ.ನಟರಾಜನ್‌ಗೆ ಸ್ಥಾನ ಸಿಗುವ ಸಾಧ್ಯತೆ. ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಯಜುವೇಂದ್ರ ಚಹಲ್‌ ಲಯಕ್ಕೆ ಮರಳಲು ಕಾಯುತ್ತಿದ್ದಾರೆ.

ಏಕದಿನ ಸರಣಿಯಲ್ಲಿ ರೋಹಿತ್ ಜತೆ ಇನಿಂಗ್ಸ್‌ ಆರಂಭಿಸೋದು ಇವರೇ ಅಂತೆ..!

ರೂಟ್‌, ಆರ್ಚರ್‌ ಇಲ್ಲ: ಇಂಗ್ಲೆಂಡ್‌ಗೆ ತನ್ನ ಇಬ್ಬರು ಪ್ರಮುಖ ಆಟಗಾರರಾದ ಜೋ ರೂಟ್‌ ಹಾಗೂ ಜೋಫ್ರಾ ಆರ್ಚರ್‌ ಅನುಪಸ್ಥಿತಿಯೊಂದಿಗೆ ಕಣಕ್ಕಿಳಿಯಲಿದೆ. ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಇಯಾನ್‌ ಮೊರ್ಗನ್‌, ಜಾನಿ ಬೇರ್‌ಸ್ಟೋವ್‌ ಪರಿಣಾಮಕಾರಿ ಆಟವಾಡಬೇಕಿದೆ. ಬೆನ್‌ ಸ್ಟೋಕ್ಸ್‌ ಬ್ಯಾಟಿಂಗ್‌ ಜೊತೆ ಬೌಲಿಂಗ್‌ನಲ್ಲೂ ತಂಡಕ್ಕೆ ನೆರವಾಗಬೇಕು. ಆರ್ಚರ್‌ ಅನುಪಸ್ಥಿತಿಯಲ್ಲಿ ಮಾರ್ಕ್ ವುಡ್‌ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.

ಸರಣಿ ಕ್ಲೀನ್‌ ಸ್ವೀಪ್‌ ಮಾಡಿದ್ರೆ ಭಾರತ ನಂ.1

ಇಂಗ್ಲೆಂಡ್‌ ವಿರುದ್ಧ ಸರಣಿ ಕ್ಲೀನ್‌ ಸ್ವೀಪ್‌ ಮಾಡಿದರೆ ಐಸಿಸಿ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ. ಸದ್ಯ 123 ರೇಟಿಂಗ್‌ ಅಂಕಗಳೊಂದಿಗೆ ಇಂಗ್ಲೆಂಡ್‌ ಅಗ್ರಸ್ಥಾನದಲ್ಲಿದೆ. ಭಾರತ 117 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 3-0 ಅಂತರದಲ್ಲಿ ಸರಣಿ ಗೆದ್ದರೆ ಭಾರತ ರೇಟಿಂಗ್‌ ಅಂಕ 120ಕ್ಕೇರಲಿದ್ದು, ಇಂಗ್ಲೆಂಡ್‌ ಅಂಕ 119ಕ್ಕೆ ಕುಸಿಯಲಿದೆ. ಭಾರತ ಸರಣಿ ಸೋತರೆ 3ನೇ ಸ್ಥಾನಕ್ಕೆ ಕುಸಿಯಲಿದ್ದು, ನ್ಯೂಜಿಲೆಂಡ್‌ 2ನೇ ಸ್ಥಾನಕ್ಕೇರಲಿದೆ.

ಪಿಚ್‌ ರಿಪೋರ್ಟ್‌: ಪುಣೆಯ ಎಂಸಿಎ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲವಾದರೂ, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳ ಪಾತ್ರ ಪ್ರಮುಖವಾಗಲಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡುವ ಸಾಧ್ಯತೆ ಹೆಚ್ಚು. ಇಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 270-280 ಆಗಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಶೇಯಸ್‌ ಅಯ್ಯರ್‌, ರಾಹುಲ್‌/ಪಂತ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌/ವಾಷಿಂಗ್ಟನ್‌, ಶಾರ್ದೂಲ್‌, ಭುವನೇಶ್ವರ್‌, ಚಹಲ್‌, ನಟರಾಜನ್‌/ಪ್ರಸಿದ್‌್ಧ.

ಇಂಗ್ಲೆಂಡ್‌: ಜೇಸನ್‌ ರಾಯ್‌, ಜೋಸ್‌ ಬಟ್ಲರ್‌, ಜಾನಿ ಬೇರ್‌ಸ್ಟೋವ್‌, ಇಯಾನ್‌ ಮೊರ್ಗನ್‌(ನಾಯಕ), ಸ್ಯಾಮ್‌ ಬಿಲ್ಲಿಂಗ್ಸ್‌, ಬೆನ್‌ ಸ್ಟೋಕ್ಸ್‌, ಮೋಯಿನ್‌ ಅಲಿ, ಸ್ಯಾಮ್‌ ಕರ್ರನ್‌, ಆದಿಲ್‌ ರಶೀದ್‌, ಮಾರ್ಕ್ ವುಡ್‌, ರೀಸ್‌ ಟಾಪ್ಲೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್