ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ನಾಳೆ ಆರಂಭವಾಗಲಿದೆ. ಈಗಾಗಲೇ ಇಂಜುರಿ ಪಟ್ಟಿ ದೊಡ್ಡದಾಗಿದೆ. ಇದೀಗ ನಾಯಕ ಕೆಎಲ್ ರಾಹುಲ್ ಕೂಡ ಗಾಯಗೊಂಡಿದ್ದರೆ.  

ಡಾಕಾ(ಡಿ.21) ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಒಂದು ದಿನ ಬಾಕಿ. ಡಿಸೆಂಬರ್ 22ರಿಂದ ಪಂದ್ಯ ಆರಂಭಗೊಳ್ಳಲಿದೆ. ಈಗಾಗಲೇ ನಾಯಕ ರೋಹಿತ್ ಶರ್ಮಾ ಹಾಗೂ ವೇಗಿ ನವದೀಪ್ ಸೈನಿ ತಂಡದಿಂದ ಹೊರಬಿದ್ದಿದ್ದಾರೆ. ಗಾಯಗೊಂಡ ಕಾರಣ ತಂಡದ ನಾಯಕತ್ವ ವಹಿಸಿಕೊಂಡ ಕೆಎಲ್ ರಾಹುಲ್ ಇದೀಗ 2ನೇ ಪಂದ್ಯದ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ. ಬ್ಯಾಟಿಂಗ್ ಅಭ್ಯಾಸದ ವೇಳೆ ಕೆಎಲ್ ರಾಹುಲ್ ಕೈಗೆ ಗಾಯವಾಗಿದೆ. ಅಭ್ಯಾಸದಿಂದ ಹೊರನಡೆದ ಕೆಎಲ್ ರಾಹುಲ್‌ ಗಾಯದ ಕುರಿತು ಬಿಸಿಸಿಐ ವೈದ್ಯಕೀಯ ತಂಡ ತಪಾಸಣೆ ನಡೆಸುತ್ತಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಮತ್ತೆ ಆತಂಕ ಮನೆ ಮಾಡಿದೆ. 

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಭಾರತ ಇದೀಗ 2ನೇ ಪಂದ್ಯ ಗೆದ್ದು ವೈಟ್ ವಾಶ್ ವಿಶ್ವಾಸದಲ್ಲಿದೆ. ಆದರೆ ಇದಕ್ಕಾಗಿ ತಯಾರಿ ಮಾಡುತ್ತಿರುವ ಭಾರತಕ್ಕೆ ಇಂಜುರಿ ಸಮಸ್ಯೆ ಬಿಟ್ಟು ಬಿಡದೇ ಕಾಡುತ್ತಿದೆ. ರಾಹುಲ್ ಗಾಯದ ಕುರಿತು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಯ ಗಂಭೀರವಾದಂತೆ ಕಾಣಿಸುತ್ತಿಲ್ಲ. ಸದ್ಯ ಬಿಸಿಸಿಐ ವೈದ್ಯಕೀಯ ತಂಡ ತಪಾಸಣೆ ಮಾಡುತ್ತಿದೆ. ಗಾಯದಿಂದ ಚೇತರಿಸಿಕೊಂಡು ನಾಳೆ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ರಾಥೋಡ್ ಹೇಳಿದ್ದಾರೆ.

ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್‌ನಿಂದ ರೋಹಿತ್ ಶರ್ಮಾ, ನವದೀಪ್ ಸೈನಿ ಔಟ್..!

ಕೆಎಲ್ ರಾಹುಲ್ ಗಾಯ ಗಂಭೀರವಾಗಿದ್ದರೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹೀಗಾದಲ್ಲಿ ತಂಡದ ಉಪನಾಯಕ ಚೇತೇಶ್ವರ್ ಪೂಜಾರ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. ಇತ್ತ ರೋಹಿತ್ ಶರ್ಮಾ ಗಾಯದಿಂದ ಹೊರಗುಳಿದ ಬೆನ್ನಲ್ಲೇ ತಂಡಕ್ಕ ಆಯ್ಕೆಯಾಗಿರುವ ಅಭಿಮನ್ಯು ಈಶ್ವರನ್ ತಂಡ ಸೇರಿಕೊಳ್ಳಲಿದ್ದಾರೆ.

ಚೇತರಿಸಿಕೊಳ್ಳುತ್ತಿರುವ ರೋಹಿತ್ ಶರ್ಮಾ
ಕೈಬೆರಳಿನ ಗಾಯದಿಂದ ಇನ್ನಷ್ಟೇ ಚೇತರಿಸಿಕೊಳ್ಳುತ್ತಿರುವ ರೋಹಿತ್‌ ಶರ್ಮಾ ಗುರುವಾರದಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್‌ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ. ಏಕದಿನ ಸರಣಿಯ 2ನೇ ಪಂದ್ಯದ ವೇಳೆ ರೋಹಿತ್‌ರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಚಿಕಿತ್ಸೆಗಾಗಿ ಮುಂಬೈಗೆ ಮರಳಿದ್ದ ಅವರು 3ನೇ ಏಕದಿನ, ಮೊದಲ ಟೆಸ್ಟ್‌ ಪಂದ್ಯಕ್ಕೆ ಗೈರಾಗಿದ್ದರು. ಮುಂದಿನ ವಾರ ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ.

ಭಾರತ ಎದುರಿನ ಎರಡನೆ ಟೆಸ್ಟ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡ ಪ್ರಕಟ

ಮೊದಲ ಪಂದ್ಯದಲ್ಲಿ ಭಾರತಕ್ಕೆ 188 ರನ್ ಗೆಲುವು
ಕುಲ್ದೀಪ್‌ ಯಾದವ್‌ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ 188 ರನ್‌ ಭರ್ಜರಿ ಗೆಲುವು ಸಾಧಿಸಿತ್ತು. ಇದರೊಂದಿಗೆ 2 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದಿದೆ.
513 ರನ್‌ ಗುರಿ ಬೆನ್ನತ್ತಿ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 272 ರನ್‌ ಕಲೆ ಹಾಕಿದ್ದ ಬಾಂಗ್ಲಾ, ಭಾನುವಾರ 241 ರನ್‌ ಗಳಿಸಬೇಕಿತ್ತು. ಆದರೆ ತಂಡ ಮೊದಲ ಅವಧಿಯಲ್ಲೇ 324ಕ್ಕೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಭಾರತೀಯ ಬೌಲರ್‌ಗಳು ಕೊನೆ ದಿನ ಕೇವಲ 11.2 ಓವರಲ್ಲಿ ಆತಿಥೇಯ ಬ್ಯಾಟರ್‌ಗಳನ್ನು ಆಲೌಟ್‌ ಮಾಡಿದರು.