Asianet Suvarna News Asianet Suvarna News

Ind vs Ban: ಬಾಂಗ್ಲಾದೇಶ ಎದುರು ಸರಣಿ ಉಳಿಸಿಕೊಳ್ಳುತ್ತಾ ಟೀಂ ಇಂಡಿಯಾ..?

ಭಾರತ-ಬಾಂಗ್ಲಾದೇಶ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ
ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಟೀಂ ಇಂಡಿಯಾ
ಈಗಾಗಲೇ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ರೋಹಿತ್ ಶರ್ಮಾ ಪಡೆ

Ind vs Ban Rohit Sharma Led Team India take on Bangladesh in must win Clash kvn
Author
First Published Dec 7, 2022, 10:00 AM IST

ಮೀರ್‌ಪುರ್‌(ಡಿ.07): ಮೊದಲ ಏಕದಿನದಲ್ಲಿ ಹೀನಾಯ ಸೋಲು ಅನುಭವಿಸಿದ ಭಾರತ, ಬಾಂಗ್ಲಾದೇಶ ವಿರುದ್ಧ ಬುಧವಾರ 2ನೇ ಏಕದಿನ ಪಂದ್ಯವನ್ನಾಡಲಿದ್ದು ಸರಣಿ ಸೋಲಿನಿಂದ ಪಾರಾಗಬೇಕಾದ ಒತ್ತಡದಲ್ಲಿದೆ. ಭಾರತ 2015ರಲ್ಲಿ ಕೊನೆ ಬಾರಿ ಪ್ರವಾಸ ಕೈಗೊಂಡಾಗ ಏಕದಿನ ಸರಣಿಯನ್ನು 2-1ರಲ್ಲಿ ಗೆದ್ದಿದ್ದ ಬಾಂಗ್ಲಾ, ತವರಿನಲ್ಲಿ ಭಾರತ ವಿರುದ್ಧ ಸತತ 2ನೇ ಸರಣಿ ಗೆಲುವು ಸಾಧಿಸುವ ತವಕದಲ್ಲಿದೆ.

ಮೊದಲ ಪಂದ್ಯದಲ್ಲಿ ಭಾರತ ನಾಲ್ವರು ಆಲ್ರೌಂಡರ್‌ಗಳೊಂದಿಗೆ ಕಣಕ್ಕಿಳಿದಿತ್ತು. ಬಹುತೇಕರು ಉತ್ತಮ ಬೌಲಿಂಗ್‌ ನಡೆಸಿದ್ದರು. ಬ್ಯಾಟಿಂಗ್‌ನಲ್ಲಿ ಮೂವರೂ ಒಂದಂಕಿ ಮೊತ್ತಕ್ಕೆ ಔಟಾಗಿದ್ದರು. ಒಂದು ಫಲಿತಾಂಶದಿಂದ ತಂಡದ ಸಂಯೋಜನೆಯ ಬಗ್ಗೆ ವಿಶ್ಲೇಷಿಸುವುದು ಕಷ್ಟವಾದರೂ, ಈ ಪಂದ್ಯದಲ್ಲಿ ಭಾರತ ಒಬ್ಬ ಹೆಚ್ಚುವರಿ ಬ್ಯಾಟರ್‌ನೊಂದಿಗೆ ಆಡುವ ಸಾಧ್ಯತೆ ಇದೆ. ಈ ಸ್ಥಾನಕ್ಕೆ ಇಶಾನ್‌ ಕಿಶನ್‌, ರಜತ್‌ ಪಾಟಿದಾರ್‌ ಹಾಗೂ ರಾಹುಲ್‌ ತ್ರಿಪಾಠಿ ನಡುವೆ ಪೈಪೋಟಿ ಇದೆ. ಆರಂಭಿಕ ಬ್ಯಾಟರ್‌ ಶಿಖರ್‌ ಧವನ್‌ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದು ಅವರನ್ನು ಹೊರಗಿಡುವ ಬಗ್ಗೆಯೂ ತಂಡದ ಆಡಳಿತ ಯೋಚಿಸಬಹುದು.

ಟೀಂ ಇಂಡಿಯಾ ಪರ ಕೆ ಎಲ್ ರಾಹುಲ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಶೆಹಬಾಜ್ ಅಹಮ್ಮದ್ ಬದಲಿಗೆ ಇಂದಿನ ಪಂದ್ಯದಲ್ಲಿ ಅಕ್ಷರ್ ಪಟೇಲ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆಯಿದೆ.

ಬಾಂಗ್ಲಾದೇಶ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ನಿರೀಕ್ಷೆ ಇಲ್ಲ. ಈ ಪಂದ್ಯದಲ್ಲೂ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲು ನಿರ್ಧರಿಸುವ ಸಾಧ್ಯತೆ ಹೆಚ್ಚು. ಅನುಭವಿ ಸ್ಪಿನ್ನರ್ ಶಕೀಬ್ ಅಲ್ ಹಸನ್, ಮೊದಲ ಏಕದಿನ ಪಂದ್ಯದಲ್ಲಿ ಪ್ರಮುಖ 5 ವಿಕೆಟ್ ಕಬಳಿಸುವ ಮೂಲಕ ಬಾಂಗ್ಲಾದೇಶ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಇದೀಗ ಶಕೀಬ್ ಮತ್ತೊಮ್ಮೆ ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡುವ ವಿಶ್ವಾಸದಲ್ಲಿದ್ದಾರೆ.

Ind vs Ban ಬಾಂಗ್ಲಾದೇಶ ಎದುರಿನ ಎರಡನೇ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಒಂದು ಮಹತ್ತರ ಬದಲಾವಣೆ..?

ಇನ್ನು ಶಕೀಬ್ ಅಲ್ ಹಸನ್ ಮಾತ್ರವಲ್ಲದೇ ಮೆಹದಿ ಹಸನ್ ಕೂಡಾ ಟೀಂ ಇಂಡಿಯಾ ಪಾಲಿಗೆ ಮೊದಲ ಪಂದ್ಯದಲ್ಲಿ ವಿಲನ್ ಆಗಿ ಕಾಡಿದರು. ಕೊನೆಯ ವಿಕೆಟ್‌ಗೆ ಮುಸ್ತಾಫಿಜುರ್ ರಹಮಾನ್ ಜತೆಗೂಡಿ ಮುರಿಯದ ಅರ್ಧಶತಕದ ಜತೆಯಾಟವಾಡುವ ಮೂಲಕ ಬಾಂಗ್ಲಾದೇಶಕ್ಕೆ ಒಂದು ವಿಕೆಟ್ ರೋಚಕ ಜಯ ತಂದುಕೊಟ್ಟಿದ್ದರು. ಮೆಹದಿಯನ್ನು ಆದಷ್ಟು ಬೇಗ ಕಟ್ಟಿಹಾಕಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ.

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್ ಶರ್ಮಾ(ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮೊಹಮ್ಮದ್ ಶಮಿ, ಕುಲ್ದೀಪ್ ಸೆನ್.

ಬಾಂಗ್ಲಾದೇಶ: ಲಿಟನ್ ದಾಸ್(ನಾಯಕ), ಅನ್ಮೊಲ್ ಹಕ್, ನಜ್ಮುಲ್ ಹೊಸೈನ್ ಶಾಂಟೋ, ಶಕೀಬ್ ಅಲ್ ಹಸನ್, ಮುಷ್ಫಿಕುರ್ ರಹೀಂ(ವಿಕೆಟ್ ಕೀಪರ್), ಮೊಹಮದುಲ್ಲಾ, ಅಫಿಫ್ ಹೊಸೈನ್, ಮೆಹದಿ ಹಸನ್, ಹಸನ್ ಮೆಹಮೂದ್, ಮುಸ್ತಾಫಿಜುರ್ ರೆಹಮಾನ್, ಎಬೊದತ್ ಹೊಸೈನ್

ಪಂದ್ಯ: ಬೆಳಗ್ಗೆ 11.30ಕ್ಕೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್

Follow Us:
Download App:
  • android
  • ios