ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟಿಂಗ್ ಮಾಡಲು ಸಿದ್ದ: ರೋಹಿತ್ ಶರ್ಮಾ
ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡ ಬಯಸಿದರೆ ತಾವು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟಿಂಗ್ ಮಾಡಲು ಸಿದ್ದವೆಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬೆಂಗಳೂರು(ನ.22): ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಆಡಳಿತ ಮಂಡಳಿ ಬಯಸಿದರೆ ತಾವು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟಿಂಗ್ ಮಾಡಲು ಸಿದ್ದವೆಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಆಸೀಸ್ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ್ ಪೂಜಾರಗಳ ಜತೆ ಮಹತ್ವದ ಪಾತ್ರ ನಿಭಾಯಿಸಬೇಕಿದೆ. ನಾನು ಯಾವಾಗಲೂ ಹೇಳುತ್ತೇನೆ. ನಾನು ಯಾವುದೇ ಕ್ರಮಾಂಕದಲ್ಲಿ ಬೇಕಿದ್ದರೂ ಬ್ಯಾಟ್ ಮಾಡಲು ರೆಡಿ. ಆದರೆ ನನ್ನ ಓಪನ್ನರ್ ಪಾತ್ರವನ್ನು ಬದಲು ಮಾಡುತ್ತಾರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ತವರಿಗೆ ಮರಳಿದ ಬಳಿಕ ಯಾವ ಆಟಗಾರರು ಯಾವೆಲ್ಲಾ ಪಾತ್ರವನ್ನು ನಿಭಾಯಿಸಬೇಕು ಎಂದು ಆಡಳಿತ ಮಂಡಳಿ ಈಗಿನಿಂದಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಯಾರು ಟೆಸ್ಟ್ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಬೇಕು. ಮತ್ತೆ ಯಾರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎನ್ನುವುದರ ಬಗ್ಗೆ ಪ್ಲಾನ್ ರೂಪಿಸಿರುತ್ತಾರೆ ಎಂದು ರೋಹಿತ್ ತಿಳಿಸಿದ್ದಾರೆ.
ಆಸೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾ ಕೈಬಿಡಲು ಕಾರಣವೇನು? ಮೌನ ಮುರಿದ ಆರಂಭಿಕ!
ನಾನು ಆಸ್ಟ್ರೇಲಿಯಾ ತಲುಪಿದ ಮೇಲೆ ನನಗೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ. ಆದರೆ ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ದನಿದ್ದೇನೆ ಎಂದು ಹಿಟ್‌ಮ್ಯಾನ್ ಹೇಳಿದ್ದಾರೆ.
ಸದ್ಯ ಫಿಟ್ನೆಸ್ ಸಮಸ್ಯೆಗೆ ಒಳಗಾಗಿರುವ ರೋಹಿತ್ ರಾಷ್ಟ್ರೀಯ ಕ್ರಿಕೆಟ್ ಅಕಡಮಿ(ಎನ್‌ಸಿಎ)ದಲ್ಲಿ ಫಿಟ್ನೆಸ್ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಅಡಿಲೇಡ್ ಟೆಸ್ಟ್ ಬಳಿಕ ತವರಿಗೆ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸೀಸ್‌ನ ಕಠಿಣ ಸವಾಲನ್ನು ಎದುರಿಸಲಿದೆ.