ಮುಂಬೈನ ವಾಂಖೇಡೆ ಮೈದಾನದಲ್ಲಿಂದು ಮೊದಲ ಏಕದಿನ ಫೈಟ್ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅಲಭ್ಯ, ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಟೀಂ ಇಂಡಿಯಾಗೆ ಆಯ್ಕೆ ಗೊಂದಲ ಎದುರಾಗುವ ಸಾಧ್ಯತೆ
ಮುಂಬೈ(ಮಾ.17): ಮಹತ್ವದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಟೀಂ ಇಂಡಿಯಾಕ್ಕೆ ಶುಕ್ರವಾರದಿಂದ ಆಸ್ಪ್ರೇಲಿಯಾ ವಿರುದ್ಧ ಏಕದಿನ ಚಾಲೆಂಜ್ ಎದುರಾಗಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ ಸಿದ್ಧತೆ ನಡೆಸುತ್ತಿರುವ ಭಾರತಕ್ಕೆ ಈ ಸರಣಿ ಮಹತ್ವದ್ದೆನಿಸಿದ್ದು, ಬಲಿಷ್ಠ ತಂಡ ಸಿದ್ಧಪಡಿಸುವುದರ ಜೊತೆಗೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎದುರು ನೋಡುತ್ತಿದೆ.
3 ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಮುಂಬೈನ ವಾಂಖೇಡೆ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ವಿಶ್ವಕಪ್ ದೃಷ್ಟಿಯಿಂದ ತಂಡ ಸಂಯೋಜನೆಯಲ್ಲಿ ಸಮತೋಲನ ಕಂಡುಕೊಳ್ಳಲು ಎರಡೂ ತಂಡಗಳಿಗೆ ಅವಕಾಶವಿದೆ. ಈ ವರ್ಷ ಈಗಾಗಲೇ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಗೆದ್ದಿರುವ ಭಾರತ ಮತ್ತೊಂದು ಸರಣಿ ಮೇಲೆ ಕಣ್ಣಿಟ್ಟಿದ್ದು, ಆಸೀಸ್ ಕಳೆದ ನವೆಂಬರ್ ಬಳಿಕ ಮೊದಲ ಬಾರಿ ಏಕದಿನ ಸರಣಿಯೊಂದನ್ನು ಆಡಲಿದೆ.
ಮೊದಲ ಪಂದ್ಯಕ್ಕೆ ರೋಹಿತ್ ಅಲಭ್ಯರಾಗಲಿದ್ದು, ಭವಿಷ್ಯದ ನಾಯಕ ಎಂದೇ ಕರೆಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ತಂಡ ಮುನ್ನಡೆಸಲಿದ್ದಾರೆ. ಅಭೂತಪೂರ್ವ ಲಯದಲ್ಲಿರುವ ಶುಭ್‌ಮನ್ ಗಿಲ್, ಇಶಾನ್ ಕಿಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಶ್ರೇಯಸ್ ಅಯ್ಯರ್ ಗೈರಾಗಲಿರುವ ಕಾರಣ ಸೂರ್ಯಕುಮಾರ್ ಅಥವಾ ರಜತ್ ಪಾಟೀದಾರ್ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು. ವಿರಾಟ್ ಕೊಹ್ಲಿ ತಮ್ಮ ಲಯ ಮುಂದುವರಿಸಲು ಎದುರು ನೋಡುತ್ತಿದ್ದರೆ, ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ರಾಹುಲ್ ಏಕದಿನ ತಂಡದಲ್ಲಿ ಗಟ್ಟಿಯಾಗಿ ನೆಲೆಯೂರಲು ಕಾಯುತ್ತಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿ ಸಹ ನಿರ್ವಹಿಸಲಿದ್ದಾರೆ.
ಹಾರ್ದಿಕ್, ವಾಷಿಂಗ್ಟನ್ ಸುಂದರ್ ಹಾಗೂ ದೀರ್ಘ ಕಾಲದ ಬಳಿಕ ಏಕದಿನ ಪಂದ್ಯವಾಡಲಿರುವ ರವೀಂದ್ರ ಜಡೇಜಾ ಆಲ್ರೌಂಡರ್ ವಿಭಾಗದಲ್ಲಿ ತಂಡಕ್ಕೆ ಬಲ ಒದಗಿಸಲಿದ್ದಾರೆ. ಆದರೆ ಸ್ಪಿನ್ ವಿಭಾಗದಲ್ಲಿ ತಂಡಕ್ಕೆ ಆಯ್ಕೆ ಗೊಂದಲ ಎದುರಾಗಲಿದ್ದು, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ಚಹಲ್ ನಡುವೆ ಪೈಪೋಟಿ ಇದೆ. ಮೊಹಮದ್ ಸಿರಾಜ್ ಜೊತೆ ಅನುಭವಿ ಶಮಿ ಅಥವಾ ಉಮ್ರಾನ್ ಮಲಿಕ್ಗೆ ಸ್ಥಾನ ಸಿಗಬಹುದು.
Ind vs Aus ಆಸೀಸ್ ಎದುರಿನ ಮೊದಲ ಏಕದಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ..! ಯಾರಿಗೆಲ್ಲಾ ಸಿಗಲಿದೆ ಸ್ಥಾನ?
ಆಸೀಸ್ಗೆ ಆಲ್ರೌಂಡರ್ಗಳ ಬಲ: ಮತ್ತೊಂದೆಡೆ 2019ರ ಬಳಿಕ ಭಾರತದಲ್ಲಿ ಏಕದಿನ ಸರಣಿ ಗೆಲ್ಲಲು ಕಾಯುತ್ತಿರುವ ಆಸೀಸ್, ಕೆಲ ತಾರಾ ಆಟಗಾರರ ಗೈರಿನ ಹೊರತಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿ ಸರಣಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಪ್ಯಾಟ್ ಕಮಿನ್ಸ್ ಬದಲು ಸ್ಟೀವ್ ಸ್ಮಿತ್ ನಾಯಕತ್ವ ವಹಿಸಲಿದ್ದು, ಡೇವಿಡ್ ವಾರ್ನರ್ ತಂಡಕ್ಕೆ ಮರಳಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೋಯ್ನಿಸ್ ಸೇರಿದಂತೆ ವಿಶ್ವಶ್ರೇಷ್ಠ ಆಲ್ರೌಂಡರ್ಗಳ ಬಲ ತಂಡಕ್ಕಿದ್ದು, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಇಶಾನ್‌ಕಿಶನ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ(ನಾಯಕ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್/ಅಕ್ಷರ್ ಪಟೇಲ್, ಶಾರ್ದೂಲ್ ಶಾರ್ದೂಲ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ/ಉಮ್ರಾನ್ ಮಲಿಕ್.
ಆಸ್ಪ್ರೇಲಿಯಾ: ಡೇವಿಡ್ ವಾರ್ನರ್, ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್(ನಾಯಕ), ಮಾರ್ನಸ್ ಲಬುಶೇನ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕೇರ್ರಿ, ಮಿಚೆಲ್ ಸ್ಟಾರ್ಕ್, ಆ್ಯಡಂ ಜಂಪಾ, ಎಲ್ಲೀಸ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಚ್
ವಾಂಖೇಡೆ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿ ಎನಿಸಿದ್ದು, ದೊಡ್ಡ ಮೊತ್ತ ದಾಖಲಾಗುವ ನಿರೀಕ್ಷೆಯಿದೆ. ಇಲ್ಲಿ ನಡೆದ ಕೊನೆ 5 ಪಂದ್ಯಗಳಲ್ಲಿ 4ರಲ್ಲಿ ಚೇಸಿಂಗ್ ಮಾಡಿದ ತಂಡ ಗೆದ್ದಿದೆ. 2020ರಲ್ಲಿ ಇಲ್ಲಿ ನಡೆದ ಕೊನೆ ಪಂದ್ಯದಲ್ಲಿ ಭಾರತ ವಿರುದ್ಧ ಆಸೀಸ್ 10 ವಿಕೆಟ್ ಜಯಗಳಿಸಿತ್ತು. ಸಂಜೆ ಬಳಿ ಇಬ್ಬನಿ ಬೀಳಲಿದ್ದು, ಬ್ಯಾಟಿಂಗ್ ಸುಲಭವಾಗಲಿದೆ. ಹೀಗಾಗಿ ಟಾಸ್ ಗೆಲ್ಲುವ ತಂಡ ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು.
10 ವರ್ಷದಲ್ಲಿ ಬರೀ 2 ಸರಣಿ ಸೋಲು!
ಭಾರತ ತವರಿನಲ್ಲಿ ಕಳೆದ 10 ವರ್ಷದಲ್ಲಿ ಆಡಿರುವ 20 ಏಕದಿನ ಸರಣಿಗಳಲ್ಲಿ 18ರಲ್ಲಿ ಗೆಲುವು ಸಾಧಿಸಿದೆ. ಈ ಪೈಕಿ 2015-16ರಲ್ಲಿ ದ.ಆಫ್ರಿಕಾ ವಿರುದ್ಧ, 2019ರಲ್ಲಿ ಆಸೀಸ್ ವಿರುದ್ಧ ಸರಣಿ ಸೋಲನುಭವಿಸಿದೆ. 2019ರ ಆಸೀಸ್ ಸರಣಿ ಬಳಿಕ ತವರಿನಲ್ಲಿ ಆಡಿದ ಎಲ್ಲಾ 7 ಸರಣಿಗಳಲ್ಲಿಯೂ ಭಾರತ ಗೆಲುವು ಸಾಧಿಸಿದೆ.
ನಂ.1 ಸ್ಥಾನಕ್ಕೆ ಫೈಟ್
ಏಕದಿನ ಶ್ರೇಯಾಂಕದಲ್ಲಿ ಭಾರತ 114 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಆಸೀಸ್(112 ಅಂಕ) 2ನೇ ಸ್ಥಾನ ಪಡೆದಿದೆ. ಭಾರತ ಅಗ್ರಸ್ಥಾನ ಉಳಿಸಿಕೊಳ್ಳಬೇಕಿದ್ದರೆ ಸರಣಿ ಗೆಲ್ಲಲೇಬೇಕು. ಆಸ್ಪ್ರೇಲಿಯಾ ಸರಣಿ ಜಯಿಸಿದರೆ ಭಾರತವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲಿದೆ. ಭಾರತ 0-3ರಲ್ಲಿ ಸೋತರೆ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿಯಲಿದೆ.
