Asianet Suvarna News Asianet Suvarna News

ಭಾರತ ಕ್ರಿಕೆಟ್ ಆಡೋದು ನಿಲ್ಲಿಸಿದರೆ ನಿಮ್ಮ ಪಾಡೇನು? ಟ್ರೋಲ್ ಮಾಡಲೆತ್ನಿಸಿದ ಪತ್ರಕರ್ತನಿಗೆ ಅಶ್ವಿನ್ ಛಾಟಿ ಏಟು!

* ಬಾಂಗ್ಲಾದೇಶ ಎದುರು ಎರಡನೇ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ
* ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ರವಿಚಂದ್ರನ್ ಅಶ್ವಿನ್
* ಅಶ್ವಿನ್ ಅವರನ್ನು ಟ್ರೋಲ್ ಮಾಡಲು ಹೋಗಿ ತಾವೇ ಟ್ರೋಲ್ ಆದ ಲಂಕಾ ಪತ್ರಕರ್ತ

Imagine what you both would do if India dint play cricket Ravichandran Ashwin befitting replay goes viral kvn
Author
First Published Dec 27, 2022, 12:16 PM IST

ಬೆಂಗಳೂರು(ಡಿ.27): ಟೀಂ ಇಂಡಿಯಾ ಅನುಭವಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ತಾವೊಬ್ಬರ ದಿಗ್ಗಜ ಬೌಲರ್‌ ಮಾತ್ರವಲ್ಲ, ಉಪಯುಕ್ತ ಸಂದರ್ಭದಲ್ಲಿ ತಂಡದ ಭರವಸೆಯ ಬ್ಯಾಟರ್ ಎನ್ನುವದನ್ನು ಆಗಾಗ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲೂ ತಾವೊಬ್ಬ ಅಮೂಲ್ಯ ಆಲ್ರೌಂಡರ್ ಎನ್ನುವುದನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದ್ದಾರೆ.

ರವಿಚಂದ್ರನ್ ಅಶ್ವಿನ್‌, ಮೈದಾನಕ್ಕಿಳಿಯುವ ಮುಂಚೆಯೇ ಯಾವ ರೀತಿ ಬೌಲಿಂಗ್ ಮಾಡಬೇಕು ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೇಗೆ ಬ್ಯಾಟ್ ಮಾಡಬೇಕು ಎನ್ನುವುದನ್ನು ಲೆಕ್ಕಚಾರ ಮಾಡಿಯೇ ಕಣಕ್ಕಿಳಿಯುತ್ತಾರೆ. ಅದೇ ರೀತಿ ತಮ್ಮನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಬಂದವರಿಗೆ ಹೇಗೆ ಉತ್ತರ ನೀಡಿ ಬಾಯಿ ಮುಚ್ಚಿಸಬೇಕು ಎನ್ನುವುದನ್ನು ತಮಿಳುನಾಡು ಮೂಲದ ಅಶ್ವಿನ್‌ ಕರಗತ ಮಾಡಿಕೊಂಡಿದ್ದಾರೆ.

ಬಾಂಗ್ಲಾದೇಶ ಎದುರಿನ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ತಮ್ಮ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಟೀಂ ಇಂಡಿಯಾ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸುವಲ್ಲಿ ರವಿಚಂದ್ರನ್ ಅಶ್ವಿನ್‌ ಮಹತ್ತರ ಪಾತ್ರ ವಹಿಸಿದ್ದರು. ಬೌಲಿಂಗ್‌ನಲ್ಲಿ 6 ವಿಕೆಟ್ ಕಬಳಿಸಿದ್ದ ಅಶ್ವಿನ್‌, ಬ್ಯಾಟಿಂಗ್‌ನಲ್ಲಿ ಎರಡನೇ ಇನಿಂಗ್ಸ್‌ನಲ್ಲಿ ಅಜೇಯ 42 ರನ್ ಬಾರಿಸಿ ತಂಡ ರೋಚಕ ಗೆಲುವು ಸಾಧಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಹೀಗಾಗಿ ಅಶ್ವಿನ್ ಎರಡನೇ ಟೆಸ್ಟ್‌ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರವಾಗಿದ್ದರು. ಇನ್ನು ಅಶ್ವಿನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರ ಬಗ್ಗೆ ಲಂಕಾದ ಪತ್ರಕರ್ತರೊಬ್ಬರು ಟ್ರೋಲ್ ಮಾಡಲು ಹೋಗಿ ಸ್ವತಃ ತಾವೇ ಅಶ್ವಿನ್ ಅವರಿಂದ ಟ್ರೋಲ್ ಆಗಿದ್ದಾರೆ.

ನಿಬ್ರಾಝ್ ರಂಜಾನ್ ಎನ್ನುವ ಲಂಕಾದ ಪತ್ರಕರ್ತನೊಬ್ಬ, ನಿಮ್ಮ ಸುಲಭ ಕ್ಯಾಚ್ ಕೈಚೆಲ್ಲಿದ ಮೊಮಿನುಲ್ ಹಕ್ ಅವರಿಗೆ ನಿಮಗೆ ಸಿಕ್ಕ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬೇಕು. ಒಂದು ವೇಳೆ ಅವರು ಆ ಕ್ಯಾಚ್ ಹಿಡಿದಿದ್ದರೇ, ಖಂಡಿತ ಟೀಂ ಇಂಡಿಯಾ 89 ರನ್‌ಗಳಿಗೆ ಸರ್ವಪತನವಾಗುತ್ತಿತ್ತು ಎಂದು ರವಿಚಂದ್ರನ್ ಅಶ್ವಿನ್ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

ಅಶ್ವಿನ್‌, ಶ್ರೇಯಸ್ ಬ್ಯಾಟಿಂಗ್ ಅಬ್ಬರ: ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ 3 ವಿಕೆಟ್‌ಗಳ ಗೆಲುವು; ಸರಣಿ ಕ್ಲೀನ್‌ಸ್ವೀಪ್

ಇದಕ್ಕೆ ಮುಟ್ಟಿ ನೋಡಿಕೊಳ್ಳುವಂತ ತಿರುಗೇಟು ನೀಡಿದ ಅಶ್ವಿನ್, "ಓಹ್ ಹೋ! ನಾನು ನಿಮ್ಮನ್ನು ಬ್ಲಾಕ್‌ ಮಾಡಿದ್ದೆ ಅಂದುಕೊಂಡೆ. ಓಹ್, ಅದು ನೀವಲ್ಲ. ನಾನು ಬ್ಲಾಕ್ ಮಾಡಿದ್ದು ಡೇನಿಯಲ್‌ ಅಲೆಕ್ಸಾಂಡರ್ ಅವರನ್ನು. ಒಂದು ವೇಳೆ ಭಾರತ ಕ್ರಿಕೆಟ್ ಆಡದೇ ಹೋಗಿದ್ದರೇ ನಿಮ್ಮ ಪಾಡೇನಾಗುತ್ತಿತ್ತು ಎಂದು ಯೋಚಿಸಿ" ಎಂದು ಅಶ್ವಿನ್ ಟ್ವೀಟ್‌ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.   

ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ್ದ 145 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೀಂ ಇಂಡಿಯಾ, 74 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಕೊಂಚ ಆತಂಕಕ್ಕೆ ಒಳಗಾಗಿತ್ತು. ಆದರೆ 8ನೇ ವಿಕೆಟ್‌ಗೆ ರವಿಚಂದ್ರನ್ ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ ಮುರಿಯದ 71 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದರು.

Follow Us:
Download App:
  • android
  • ios