T20 World Cup ಒಂದು ವೇಳೆ ಪಾಕ್ ಟಿ20 ವಿಶ್ವಕಪ್ ಗೆದ್ರೆ, 2048ಕ್ಕೆ ಬಾಬರ್ ಅಜಂ ಪಾಕಿಸ್ತಾನ ಪ್ರಧಾನಿ: ಗವಾಸ್ಕರ್ ಭವಿಷ್ಯ
ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್-ಪಾಕಿಸ್ತಾನ ಸೆಣಸಾಟ
ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬರ್ನ್ ಕ್ರಿಕೆಟ್ ಮೈದಾನ ಆತಿಥ್ಯ
ಈ ಬಾರಿ ಪಾಕ್ ಕಪ್ ಗೆದ್ರೆ 2048ಕ್ಕೆ ಬಾಬರ್ ಅಜಂ ಪ್ರಧಾನಿ ಎಂದ ಗವಾಸ್ಕರ್
ಮೆಲ್ಬರ್ನ್(ನ.12): ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, ನವೆಂಬರ್ 13ರಂದು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಇಂಗ್ಲೆಂಡ್ ವಿರುದ್ದ ಸೆಣಸಾಡಲಿದೆ. ಕಾಕತಾಳೀಯ ಎನ್ನುವಂತೆ 1992ರ ಏಕದಿನ ವಿಶ್ವಕಪ್ ಟೂರ್ನಿಗೂ ಹಾಗೂ 2022ರ ಟಿ20 ವಿಶ್ವಕಪ್ ಟೂರ್ನಿಗೂ ಸಾಕಷ್ಟು ಹೋಲಿಕೆಗಳಿವೆ. 1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಅದೇ ರೀತಿ ಈ ಬಾರಿ ಪಾಕಿಸ್ತಾನ ತಂಡವು ಇತಿಹಾಸ ಮರುಸೃಷ್ಟಿಸುವ ಕನವರಿಕೆಯಲ್ಲಿದೆ. ಹೀಗಾಗಿ ಈ ಕುರಿತಂತೆ ಈಗಾಗಲೇ ಹಲವು ಜೋಕ್ಸ್‌ಗಳು ಹಾಗೂ ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಪಾಕ್ ನಾಯಕ ಬಾಬರ್ ಅಜಂ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ವಿಶ್ಲೇಷಣೆ ಮಾಡುವಾಗ, ಪಾಕಿಸ್ತಾನ ತಂಡವು ಒಂದು ವೇಳೆ ಟಿ20 ವಿಶ್ವಕಪ್ ಟ್ರೋಫಿ ಜಯಿಸಿದರೆ, ನಾಯಕ ಬಾಬರ್ ಅಜಂ 2048ರಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
'ಏನು ಗೊತ್ತಾ, ಒಂದು ವೇಳೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಜಯಿಸಿದರೆ, 2048ಕ್ಕೆ ಬಾಬರ್ ಅಜಂ ಪಾಕಿಸ್ತಾನ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಸುನಿಲ್ ಗವಾಸ್ಕರ್, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಈ ರೀತಿ ಭವಿಷ್ಯ ನುಡಿದಿದ್ದಾರೆ.
ಇನ್ನು ಈ ಬಾರಿಯ ಚುಟುಕು ವಿಶ್ವಕಪ್ ಟೂರ್ನಿಯ ಬಗ್ಗೆ ಹೇಳುವುದಾದರೇ, ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ, ಇದಾದ ಬಳಿಕ ಫಿನಿಕ್ಸ್‌ನಂತೆ ಎದ್ದುನಿಂತು ಸತತ 3 ಪಂದ್ಯ ಗೆದ್ದು ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಇನ್ನು ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಇಂಗ್ಲೆಂಡ್ ತಂಡ ಕೂಡಾ ಐರ್ಲೆಂಡ್ ಎದುರು ಆಘಾತಕಾರಿ ಸೋಲಿನ ಬಳಿಕವೂ ಅದ್ಭುತ ಪ್ರದರ್ಶನದ ಮೂಲಕ ಸೆಮೀಸ್‌ಗೆ ಲಗ್ಗೆಯಿಟ್ಟಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಭಾರತ ತಂಡದ ಎದುರು 10 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಎರಡನೇ ಚುಟುಕು ವಿಶ್ವಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದೆ.