Asianet Suvarna News Asianet Suvarna News

ICC Women's World Cup: ನಿರ್ಣಾಯಕ ಪಂದ್ಯದಲ್ಲಿ ಹರಿಣಗಳಿಗೆ ಸವಾಲಿನ ಗುರಿ ನೀಡಿದ ಭಾರತ

* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾಗೆ 275 ರನ್‌ಗಳ ಗುರಿ ನೀಡಿದ ಮಿಥಾಲಿ ಪಡೆ

* ಆಕರ್ಷಕ ಅರ್ಧಶತಕ ಬಾರಿಸಿದ ಮಿಥಾಲಿ ರಾಜ್, ಸ್ಮೃತಿ ಮಂಧನಾ, ಶಫಾಲಿ ವರ್ಮಾ

* ಭಾರತ ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ

ICC Womens World Cup India set 275 runs target to South Africa kvn
Author
Bengaluru, First Published Mar 27, 2022, 10:04 AM IST

ಕ್ರೈಸ್ಟ್‌ಚರ್ಚ್‌(ಮಾ.27): ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ(Shafali Verma), ಸ್ಮೃತಿ ಮಂಧನಾ (Smriti Mandhana) ಹಾಗೂ ನಾಯಕಿ ಮಿಥಾಲಿ ರಾಜ್ (Mithali Raj) ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ (ICC Women's World Cup) ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ 7 ವಿಕೆಟ್ ಕಳೆದದುಕೊಂಡು 274 ರನ್ ಬಾರಿಸಿದ್ದು, ಬಲಿಷ್ಠ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಭಾರತ ಸೆಮೀಸ್‌ಗೇರಬೇಕಿದ್ದರೆ, ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ

ಇಲ್ಲಿನ ಹೇಗ್ಲೆ ಓವಲ್‌ ಮೈದಾನದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟಿಂಗ್ ಮಾಡುವಲ್ಲಿ ಆರಂಭಿಕ ಬ್ಯಾಟರ್‌ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಯಶಸ್ವಿಯಾದರು. ಮಹತ್ವದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 91 ಎಸೆತಗಳಲ್ಲಿ 91 ರನ್‌ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭ ಒದಗಿಸಿಕೊಟ್ಟರು. ಇದು 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್‌ಗೆ ಭಾರತ ಪರ ದಾಖಲಾದ ಗರಿಷ್ಠ ರನ್‌ ಜತೆಯಾಟ ಎನಿಸಿತು.

ಚುರುಕಿನ ಬ್ಯಾಟಿಂಗ್ ನಡೆಸಿದ ಶಫಾಲಿ ವರ್ಮಾ ಕೇವಲ 46 ಎಸೆತಗಳಲ್ಲಿ 8 ಬೌಂಡರಿ ಸಹಿತ 53 ರನ್‌ ಗಳಿಸಿ ರನೌಟ್‌ ಆಗಿ ಪೆವಿಲಿಯನ್‌ ಸೇರಿದರು. ಶಫಾಲಿ ವರ್ಮಾ (18 ವರ್ಷ 58 ದಿನ) ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಎರಡನೇ ಕಿರಿಯ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾದರು. ಈ ಮೊದಲು ಮಿಥಾಲಿ ರಾಜ್ (17 ವರ್ಷ 363 ದಿನ) ಭಾರತ ಪರ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಧಶತಕ ಬಾರಿಸಿದ ಆಟಗಾರ್ತಿ ಎನಿಸಿದ್ದಾರೆ.

ಆಕರ್ಷಕ ಅರ್ಧಶತಕ ಚಚ್ಚಿದ ಮಂಧನಾ-ಮಿಥಾಲಿ ರಾಜ್: ಶಫಾಲಿ ವರ್ಮಾ ವಿಕೆಟ್ ಪತನವಾಗುತ್ತಿದ್ದಂತೆಯೇ ಕ್ರೀಸ್‌ಗಿಳಿದ ಯಾಶ್ತಿಕಾ ಭಾಟಿಯಾ ಕೇವಲ 2 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೇವಲ 5 ರನ್‌ಗಳ ಅಂತರದಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಗಿದ್ದ ಭಾರತ ತಂಡಕ್ಕೆ ನಾಯಕಿ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂಧನಾ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 80 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 175 ರನ್‌ಗಳ ಗಡಿ ದಾಟಿಸಿದರು. ಅದ್ಭುತ ಫಾರ್ಮ್‌ನಲ್ಲಿರು ಸ್ಮೃತಿ ಮಂಧನಾ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿದರು. ಎಡಗೈ ಬ್ಯಾಟರ್ ಮಂಧನಾ 84 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 71 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. 

ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕಿ ಮಿಥಾಲಿ ರಾಜ್ ಕೂಡಾ ಆಕರ್ಷಕ ಅರ್ಧಶತಕ ಚಚ್ಚಿದರು. ಇದು ಮಿಥಾಲಿ ರಾಜ್ ಬಾರಿಸಿದ 51ನೇ ಏಕದಿನ ಅರ್ಧಶತಕ ಎನಿಸಿತು. ಮಿಥಾಲಿ ರಾಜ್ ಒಟ್ಟು 84 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 68 ರನ್‌ ಬಾರಿಸಿ ಕ್ಲಾಸ್‌ಗೆ ವಿಕೆಟ್‌ ಒಪ್ಪಿಸಿದರು.  

ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್ ಕೌರ್ ನಾಲ್ಕನೇ ವಿಕೆಟ್‌ಗೆ 56 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಪೂಜಾ ವಸ್ತ್ರಾಕರ್(3) ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ರಿಚಾ ಘೋಷ್(8) ಹೆಚ್ಚು ಕಮಾಲ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಒಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ಹರ್ಮನ್‌ಪ್ರೀತ್ ಕೌರ್ 48 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. 

Follow Us:
Download App:
  • android
  • ios