ICC Women's World Cup Final: ಇಂಗ್ಲೆಂಡ್ ಎದುರು ಆಸ್ಟ್ರೇಲಿಯಾ ಭರ್ಜರಿ ಆರಂಭ
* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ದಿಟ್ಟ ಆರಂಭ
* ಆಸ್ಟ್ರೇಲಿಯಾದ ಆರಂಭಿಕರಿಬ್ಬರು ಆಕರ್ಷಕ ಅರ್ಧಶತಕ
* 26 ಓವರ್ ಅಂತ್ಯದ ವೇಳೆಗೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 141 ರನ್
ಕ್ರೈಸ್ಟ್‌ಚರ್ಚ್(ಏ.03): 12ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭವನ್ನು ಪಡೆದುಕೊಂಡಿದ್ದು, ಮೊದಲ 26 ಓವರ್ ಅಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 142 ರನ್ ಬಾರಿಸಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಆರಂಭಿಕ ಬ್ಯಾಟರ್‌ಗಳಾದ ರಚೆಲ್ ಹೇನ್ಸ್ ಹಾಗೂ ಅಲಿಸಾ ಹೀಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ದಾರೆ.
ಇಲ್ಲಿನ ಹೇಗ್ಲೇ ಓವಲ್ ಮೈದಾನದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರು ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭವನ್ನೇ ಪಡೆದಿದೆ. ಪ್ರಸಕ್ತ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿರುವ ಆಸ್ಟ್ರೇಲಿಯಾ ತಂಡವು ಇದೀಗ ಏಳನೇ ಟ್ರೋಫಿ ಗೆಲ್ಲುವತ್ತ ದಿಟ್ಟ ಹೆಜ್ಜೆಯನ್ನು ಇಡಲಾರಂಭಿಸಿದೆ. ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್ ರಚೆನ್ ಹೇನ್ಸ್ 69 ಎಸೆತಗಳನ್ನು ಎದುರಿಸಿ ಮತ್ತೊಂದು ಆಕರ್ಷಕ ಅರ್ಧಶತಕ ಬಾರಿಸಿದರು. ದಕ್ಷಿಣ ಆಫ್ರಿಕಾ ವಿರುದ್ದದ ಸೆಮಿಫೈನಲ್‌ನಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ಹೇನ್ಸ್ ಇದೀಗ ಫೈನಲ್‌ನಲ್ಲೂ ತಮ್ಮ ಖದರ್ ಮುಂದುವರೆಸಿದ್ದಾರೆ. ರಚೆಲ್ ಹೇನ್ಸ್ ಈಗಾಗಲೇ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ
ಇನ್ನೊಂದೆಡೆ ರಚೆಲ್ ಹೇನ್ಸ್‌ಗೆ ಉತ್ತಮ ಸಾಥ್ ನೀಡಿರುವ ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ಕೂಡಾ ಭರ್ಜರಿ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುತ್ತಾ ಬಂದಿರುವ ಹೀಲಿ ಮತ್ತೊಂದು ಸೊಗಸಾದ ಇನಿಂಗ್ಸ್ ಕಟ್ಟಿದ್ದಾರೆ. ಒಟ್ಟು 62 ಎಸೆತಗಳನ್ನು ಎದುರಿಸಿ ಹೀಲಿ ಅರ್ಧಶತಕ ಪೂರೈಸಿದ್ದಾರೆ.
ಟೂರ್ನಿಯ ಆರಂಭದಲ್ಲಿ ಹ್ಯಾಟ್ರಿಕ್ ಸೋಲಿನೊಂದಿಗೆ ನಿರಾಸೆ ಮೂಡಿಸಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಬಳಿಕ ನಾಲ್ಕು ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು. ಸೆಮೀಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿ 8ನೇ ಬಾರಿ ಫೈನಲ್ ಟಿಕೆಟ್ ಪಡೆದಿತ್ತು. ಅತ್ತ ಆಸೀಸ್ ಟೂರ್ನಿಯ ಲೀಗ್ ಹಂತದ ಎಲ್ಲಾ 7 ಪಂದ್ಯಗಳನ್ನು ಗೆದ್ದಿದ್ದು, ಸೆಮೀಸ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಸೋಲುಣಿಸಿ ದಾಖಲೆಯ 9ನೇ ಬಾರಿ ಫೈನಲ್ ಪ್ರವೇಶಿಸಿತ್ತು. ಈ ಮೊದಲು 4 ಬಾರಿ ಉಭಯ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, 3 ಬಾರಿ ಆಸೀಸ್ ಪ್ರಶಸ್ತಿ ಗೆದ್ದುಕೊಂಡಿದೆ. ಕೊನೆಯ ಬಾರಿ 1988ರಲ್ಲಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.
9.94 ಕೋಟಿ ರು.ಬಹುಮಾನ
ಈ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ಕಳೆದ ಬಾರಿಗಿಂತ ದುಪ್ಪಟ್ಟು ಎಂದರೆ 1.32 ಮಿಲಿಯನ್ ಅಮೆರಿಕನ್ ಡಾಲರ್(ಸುಮಾರು 9.94 ಕೋಟಿ ರು.) ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡ 4.51 ಕೋಟಿ ರು. ಬಹುಮಾನ ಪಡೆಯಲಿದೆ.
ಭಾರತದ ಲಕ್ಷ್ಮೇ ಮಹಿಳಾ ವಿಶ್ವಕಪ್ ಫೈನಲ್‌ಗೆ ರೆಫ್ರಿ
ಕ್ರೈಸ್ಟ್‌ಚಚ್‌ರ್: ಪುರುಷರ ಅಂತಾರಾಷ್ಟ್ರೀಯ ಏಕದಿನದಲ್ಲಿ ರೆಫ್ರಿಯಾಗಿ ಕಾರ‍್ಯನಿರ್ವಹಿಸಿದ್ದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿರುವ ಭಾರತದ ಜಿ.ಎಸ್.ಲಕ್ಷ್ಮೇ ಅವರು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ರೆಫ್ರಿಯಾಗಿದ್ದಾರೆ. ಇಂದು ನಡೆಯುತ್ತಿರುವ ಇಂಗ್ಲೆಂಡ್-ಆಸ್ಪ್ರೇಲಿಯಾ ನಡುವಿನ ಪಂದ್ಯದಲ್ಲಿ ಇದೇ ಮೊದಲ ಬಾರಿ ಒಟ್ಟು ನಾಲ್ವರು ಮಹಿಳಾ ಅಧಿಕಾರಿಗಳು ಕಾರ‍್ಯನಿರ್ವಹಿಸಲಿದ್ದು, ಲಕ್ಷ್ಮೇ ಅವರು ರೆಫ್ರಿಯಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಲಾರೆನ್ ಅಜೆನ್‌ಬಾಗ್ ಮತ್ತು ನ್ಯೂಜಿಲೆಂಡ್‌ನ ಕಿಮ್ ಕಾಟನ್ ಫೀಲ್ಡ್ ಅಂಪೈರ್‌ಗಳಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ.