* ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಜಯ* ಅತಿಥೇಯ ನ್ಯೂಜಿಲೆಂಡ್ ಎದುರು 1 ವಿಕೆಟ್‌ ಅಂತರದ ರೋಚಕ ಜಯ * ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದ ಇಂಗ್ಲೆಂಡ್

ಆಕ್ಲೆಂಡ್(ಮಾ.20): ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವು ಆತಿಥೇಯ ನ್ಯೂಜಿಲೆಂಡ್ ಎದುರು 1 ವಿಕೆಟ್‌ ರೋಚಕ ಜಯ ಸಾಧಿಸುವ ಮೂಲಕ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಟೂರ್ನಿಯಲ್ಲಿ ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ ಹ್ಯಾಟ್ರಿಕ್ ಸೋಲು ಕಂಡಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು, ಇದೀಗ ಸತತ ಎರಡು ಗೆಲುವು ಸಾಧಿಸುವ ಮೂಲಕ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. 

ಇಲ್ಲಿನ ಈಡನ್ ಪಾರ್ಕ್‌ ಮೈದಾನದಲ್ಲಿ ನ್ಯೂಜಿಲೆಂಡ್ ನೀಡಿದ್ದ 204 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭದ ಹೊರತಾಗಿಯೂ ನಾಟಕೀಯ ಕುಸಿತ ಕಂಡಿತಾದರೂ, ಕೊನೆಯ ಕ್ಷಣದಲ್ಲಿ ರೋಚಕ ಜಯ ಸಾಧಿಸಿತು. ನಾಯಕಿ ಹೀಥರ್ ನೈಟ್‌(42) (Heather Knight) ಹಾಗೂ ನಥಾಲಿ ಸ್ಕೀವರ್(61) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ದರು. ಒಂದು ಹಂತದಲ್ಲಿ 186 ರನ್‌ಗಳವರೆಗೆ ಕೇವಲ 5 ವಿಕೆಟ್‌ ಕಳೆದುಕೊಂಡು ಸುಲಭ ಗೆಲುವಿನತ್ತ ಮುಖ ಮಾಡಿತ್ತು.

9 ರನ್‌ಗಳ ಅಂತರದಲ್ಲಿ 4 ವಿಕೆಟ್ ಪತನ: ಹೌದು, ಇಂಗ್ಲೆಂಡ್ ತಂಡವು ಸುಲಭವಾಗಿ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, ಸ್ಕೀವರ್ ವಿಕೆಟ್ ಪತನವಾಗುತ್ತಿದ್ದಂತೆಯೇ, ಇಂಗ್ಲೆಂಡ್ ತಂಡವು ದಿಢೀರ್ ಕುಸಿತ ಕಂಡಿತು. ಪರಿಣಾಮ 196 ರನ್‌ ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತಂಡವು 9 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಕೊನೆಯಲ್ಲಿ ಆನ್ಯ ಸೊಸೋಲೆ 10 ಎಸೆತಗಳನ್ನು ಎದುರಿಸಿ 7 ರನ್‌ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸೆಮೀಸ್ ಕನಸು ಜೀವಂತವಾಗಿರಿಸಿಕೊಂಡಿದೆ.

ICC Women's World Cup: ಭಾರತ ಎದುರು ಗೆದ್ದು ಸೆಮೀಸ್‌ಗೆ ಲಗ್ಗೆಯಿಟ್ಟ ಆಸ್ಟ್ರೇಲಿಯಾ

ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡಕ್ಕೆ ಸುಜಿ ಬೇಟ್ಸ್ ಹಾಗೂ ಸೋಫಿಯಾ ಡಿವೈನ್ ಮೊದಲ ವಿಕೆಟ್‌ಗೆ 61 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭವನ್ನು ಒದಗಿಸಿಕೊಟ್ಟರು. ಡಿವೈನ್‌ 41 ರನ್‌ ಬಾರಿಸಿದರೆ, ಅಮೆಲಿಯಾ ಕೆರ್ ಹಾಗೂ ಸ್ಯಾಟರ್‌ವೈಟ್ ತಲಾ 24 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಮ್ಯಾಡಿ ಗ್ರೀನ್‌ ಆಕರ್ಷಕ ಅಜೇಯ 52 ರನ್‌ಗಳನ್ನು ಗಳಿಸುವ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

Scroll to load tweet…

ನ್ಯೂಜಿಲೆಂಡ್ ತಂಡವು ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾಯಿತು. 150 ರನ್‌ಗಳಿಗೆ ಕೇವಲ 4 ವಿಕೆಟ್ ಕಳೆದುಕೊಂಡು ದೊಡ್ಡ ಮೊತ್ತ ಕಳಿಸುವತ್ತ ದಿಟ್ಟ ಹೆಜ್ಜೆಯಿಟ್ಟಿತು. ಆದರೆ ಆ ಬಳಿಕ ನಾಟಕೀಯ ಕುಸಿತ ಕಾಣುವ ಮೂಲಕ ಕೇವಲ 53 ರನ್‌ಗಳ ಅಂತರದಲ್ಲಿ ಉಳಿದ 6 ವಿಕೆಟ್ ಕಳೆದುಕೊಂಡು ಕೇವಲ 203 ರನ್‌ಗಳಿಗೆ ಸರ್ವಪತನ ಕಂಡಿತು.

ಇಂಗ್ಲೆಂಡ್ ಕ್ರಿಕೆಟ್ ತಂಡದ ಪರ ಕೇಟ್ ಕ್ರಾಸ್‌ 35 ರನ್‌ ನೀಡಿ 3 ವಿಕೆಟ್ ಪಡೆದರೆ, ಎಕೆಲ್‌ಸ್ಟೋನ್‌ 3 ಹಾಗೂ ಚಾರ್ಲೆಟ್‌ ಡೀನ್ 2 ವಿಕೆಟ್ ಪಡೆದರು. ಇಂಗ್ಲೆಂಡ್‌ ಬೌಲರ್‌ಗಳು ಶಿಸ್ತುಬದ್ದ ದಾಳಿ ನಡೆಸಿದ ಪರಿಣಾಮ ಆತಿಥೇಯ ನ್ಯೂಜಿಲೆಂಡ್ ತಂಡವು ಅಲ್ಪಮೊತ್ತಕ್ಕೆ ಕುಸಿಯಿತು. ಸದ್ಯ ಈ ಸೋಲಿನೊಂದಿಗೆ ಆತಿಥೇಯ ನ್ಯೂಜಿಲೆಂಡ್ ತಂಡವು ಆರನೇ ಸ್ಥಾನಕ್ಕೆ ಜಾರಿದ್ದರೆ, ಇಂಗ್ಲೆಂಡ್ ತಂಡವು 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ತಂಡಕ್ಕೆ ಲೀಗ್ ಹಂತದಲ್ಲಿ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಸೆಮೀಸ್‌ಗೇರುವ ಅವಕಾಶ ಸಮಾನ ಅವಕಾಶ ಎರಡೂ ತಂಡಕ್ಕಿದೆ. ಆದರೆ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ ಲೀಗ್ ಹಂತದಲ್ಲಿ ಇನ್ನೊಂದೇ ಪಂದ್ಯ ಬಾಕಿ ಉಳಿದಿದ್ದು, ಸೆಮೀಸ್‌ ಹಾದಿ ಸಾಕಷ್ಟು ದುರ್ಗಮ ಎನಿಸಿದೆ.