* ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದ ಹಾಲಿ ಚಾಂಪಿಯನ್ ಇಂಗ್ಲೆಂಡ್* ಭಾರತ ಎದುರು 4 ವಿಕೆಟ್‌ಗಳ ಜಯ ಸಾಧಿಸಿದ ಹೀಥರ್ ನೈಟ್ ಪಡೆ* ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್‌ಗೆ ಗೆಲುವಿನ ನಿಟ್ಟುಸಿರು 

ಮೌಂಟ್‌ ಮಾಂಗನುಯಿ(ಮಾ.16): ಬೌಲರ್‌ಗಳ ಸಂಘಟಿತ ಪ್ರದರ್ಶನ ಹಾಗೂ ನಾಯಕಿ ಹೀಥರ್ ನೈಟ್ (Heather Knight) ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಭಾರತ ವಿರುದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women's World Cup) ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡವು 4 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಹಾಲಿ ವಿಶ್ವಚಾಂಪಿಯನ್ ಇಂಗ್ಲೆಂಡ್ ತಂಡವು ಹ್ಯಾಟ್ರಿಕ್ ಸೋಲಿನ ಬಳಿಕ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ ಕೇವಲ 135 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿಯರಿಬ್ಬರು ತಲಾ ಒಂದೊಂದು ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ 4 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ್ತಿಯರಿಬ್ಬರು ಪೆವಿಲಿಯನ್ ಸೇರಿದ್ದರು. ಈ ಉತ್ತಮ ಆರಂಭವನ್ನು ಪಡೆದ ಭಾರತ ತಂಡವು ಆ ಬಳಿಕ ತನ್ನ ಹಿಡಿತವನ್ನು ಕಳೆದುಕೊಂಡಿತು. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರಲು ಮಿಥಾಲಿ ರಾಜ್ ಪಡೆ ವಿಫಲವಾಯಿತು. ಮೂರನೇ ವಿಕೆಟ್‌ಗೆ ನಾಯಕಿ ಹೀಥರ್ ನೈಟ್ ಹಾಗೂ ಸ್ಕೀವರ್ ಜೋಡಿ 84 ಎಸೆತಗಳನ್ನು 65 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಸಂಕಷ್ಟದಲ್ಲಿದ್ದ ತಂಡವನ್ನು ಪಾರು ಮಾಡುವಲ್ಲಿ ಯಶಸ್ವಿಯಾದರು. ಚುರುಕಾಗಿ ರನ್‌ ಗಳಿಸಿದ ಸ್ಕೀವರ್ 46 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 45 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು.

ನಾಯಕಿಯ ಆಟವಾಡಿದ ಹೀಥರ್ ನೈಟ್‌: ಆರಂಭದಲ್ಲೇ ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕಿ ಹೀಥರ್ ನೈಟ್‌ ಆಸರೆಯಾದರು. ಸ್ಕೀವರ್‌ ಜತೆ ಉತ್ತಮ ಜತೆಯಾಟವಾಡಿದ ಹೀಥರ್ ನೈಟ್‌, ಭಾರತೀಯ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. ಹೀಥರ್ ನೈಟ್ 72 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 53 ರನ್ ಬಾರಿಸಿ ಅಜೇಯರಾಗುಳಿಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕೊನೆಯಲ್ಲಿ ದಿಢೀರ್ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್: ಒಂದು ಹಂತದಲ್ಲಿ 102 ರನ್‌ಗಳ ವರೆಗೆ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನತ್ತ ದಾಪುಗಾಲಿಡುತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಭಾರತೀಯ ಬೌಲರ್‌ಗಳು ಶಾಕ್ ನೀಡುವ ಯತ್ನ ನೀಡಿದರು. ಇಂಗ್ಲೆಂಡ್ ತಂಡವು ತನ್ನ ಖಾತೆಗೆ 26 ರನ್ ಸೇರಿಸುವಷ್ಟರಲ್ಲಿ ಮಧ್ಯಮ ಕ್ರಮಾಂಕದ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಹೀಗಿದ್ದರೂ ನೆಲಕಚ್ಚಿ ಬ್ಯಾಟಿಂಗ್ ನಡೆಸಿದ ನಾಯಕಿ ಹೀಥರ್‌ ನೈಟ್ ತಂಡವನ್ನು ಯಾವುದೇ ಅಪಾಯಕ್ಕೆ ಈಡು ಮಾಡದೇ ಸುಲಭವಾಗಿ ಗೆಲುವಿನ ದಡ ಸೇರಿಸಿದರು.

Scroll to load tweet…

ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡಕ್ಕೆ ಇಂಗ್ಲೆಂಡ್ ಬೌಲರ್‌ಗಳು ಶಾಕ್ ನೀಡಿದರು. ಇಂಗ್ಲೆಂಡ್ ಸ್ಪಿನ್ನರ್ ಚಾರ್ಲೆಟ್ಟೆ ಡೀನ್‌ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡವು ಕೇವಲ 134 ರನ್‌ಗಳಿಗೆ ಸರ್ವಪತನ ಕಂಡಿತು. ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧನಾ(35) ಹಾಗೂ ರಿಚಾ ಘೋಷ್(33) ರನ್ ಬಾರಿಸಿದ್ದು ಬಿಟ್ಟರೆ, ಉಳಿದ್ಯಾವ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರಲು ಯಶಸ್ವಿಯಾಗಲಿಲ್ಲ. ಇಂಗ್ಲೆಂಡ್ ತಂಡದ ಸ್ಪಿನ್ನರ್ ಚಾರ್ಲೆಟ್ಟೆ ಡೀನ್‌ 23 ರನ್‌ ನೀಡಿ 4 ವಿಕೆಟ್ ಪಡೆದರೆ, ಸೋರ್ಬಲೆ 2, ಎಕೆಲ್‌ಸ್ಟೋನ್ ಹಾಗೂ ಕೇಟ್ ಕ್ರಾಸ್ ತಲಾ ಒಂದೊಂದು ವಿಕೆಟ್ ಪಡೆದರು.