ICC Women's World Cup: ಸೀವರ್ ಶತಕ ವ್ಯರ್ಥ, ಆಸ್ಟ್ರೇಲಿಯಾ 7ನೇ ಬಾರಿಗೆ ವಿಶ್ವ ಚಾಂಪಿಯನ್
* ಆಸ್ಟ್ರೇಲಿಯಾ ಮಹಿಳಾ ತಂಡವು ನೂತನ ಏಕದಿನ ವಿಶ್ವಚಾಂಪಿಯನ್
* ಹಾಲಿ ಚಾಂಪಿಯನ್ ಬಗ್ಗುಬಡಿದು 7ನೇ ಟ್ರೋಫಿ ಜಯಿಸಿದ ಕಾಂಗರೂ ಪಡೆ
* ಇಂಗ್ಲೆಂಡ್ ಎದುರು 71 ರನ್‌ಗಳ ಗೆಲುವು ಸಾಧಿಸಿದ ಮೆಗ್ ಲ್ಯಾನಿಂಗ್ ಪಡೆ
ಕ್ರೈಸ್ಟ್‌ಚರ್ಚ್(ಏ.03): 2022ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಏಳನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೂರ್ನಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಅಜೇಯವಾಗಿಯೇ ಫೈನಲ್ ಪ್ರವೇಶಿಸಿದ್ದ ಆಸ್ಟ್ರೇಲಿಯಾ ತಂಡವು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು 71 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಲ್ಲಿನ ಹೇಗ್ಲೇ ಓವಲ್ ಮೈದಾನದಲ್ಲಿ ಆಸ್ಟ್ರೇಲಿಯಾ ನೀಡಿದ್ದ 357 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಆಸೀಸ್ ತಂಡದಂತೆ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಡೇನಿಯಲ್ಲೆ ವ್ಯಾಟ್ 4 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಟಾಮಿ ಬಿಯುಮೌಟ್ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕಿ ಹೀಥರ್ ನೈಟ್ ಬ್ಯಾಟಿಂಗ್ ಕೇವಲ 26 ರನ್‌ಗಳಿಗೆ ಸೀಮಿತವಾಯಿತು.
ನಥಾಲಿ ಸೀವರ್ ಏಕಾಂಗಿ ಹೋರಾಟ: 86 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಥಾಲಿ ಸೀವರ್ ಏಕಾಂಗಿಯಾಗಿ ದಿಟ್ಟ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.ಮಧ್ಯಮ ಕ್ರಮಾಂಕದಲ್ಲಿ ಏಕಾಂಗಿ ಹೋರಾಟ ನಡೆಸಿದ ನಥಾಲಿ ಸೀವರ್ ಆಕರ್ಷಕ ಶತಕ ಸಿಡಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಲು ಯತ್ನಿಸಿದರು. ನಥಾಲಿ ಸೀವರ್ 121 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 148 ರನ್ ಬಾರಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ದೊರೆಯದೇ ಹೋದದ್ದು, ಪಂದ್ಯ ಇಂಗ್ಲೆಂಡ್‌ನಿಂದ ಕೈ ಜಾರದಂತೆ ಮಾಡಿತು. ಆಮಿ ಜೋನ್ಸ್(20), ಸೋಫಿಯಾ ಡಂಕ್ಲೆ(22) ಹಾಗೂ ಚಾರ್ಲೆಟ್ ಡೀನ್(21) ಅಲ್ಪ ಕಾಣಿಕೆ ನೀಡಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಪತ್ನಿ ಅಲೀಸಾ ಹೀಲಿ ಶತಕ ಬಾರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಮಿಚೆಲ್ ಸ್ಟಾರ್ಕ್..!
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಲಿಷ್ಠ ಆಸ್ಟ್ರೇಲಿಯಾ ತಂಡವು ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೇಚಲ್ ಹೇಯ್ನ್ಸ್ ಹಾಗೂ ಅಲೀಸಾ ಹೀಲಿ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 175 ಎಸೆತಗಳನ್ನು ಎದುರಿಸಿ 160 ರನ್‌ಗಳ ಜತೆಯಾಟ ನಿಭಾಯಿಸಿದರು. ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ಹೊಂದಿರುವ ರೇಚಲ್ ಹೇಯ್ನ್ಸ್ 93 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 68 ರನ್ ಬಾರಿಸಿ ಎಕೆಲ್‌ಸ್ಟೋನ್‌ಗೆ ವಿಕೆಟ್ ಒಪ್ಪಿಸಿದರು.
ದಾಖಲೆಯ ಶತಕ ಚಚ್ಚಿದ ಅಲೀಸಾ ಹೀಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲೀಸಾ ಹೀಲಿ ಮತ್ತೊಮ್ಮೆ ಮಹತ್ವದ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ತಾವೊಬ್ಬರು ಬಿಗ್ ಮ್ಯಾಚ್ ಪ್ಲೇಯರ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಂಗ್ಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಹೀಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸ್ಪೋಟಕ ಬ್ಯಾಟಿಂಗ್ ನಡೆಸಿದ ಅಲೀಸಾ ಹೀಲಿ 138 ಎಸೆತಗಳನ್ನು ಎದುರಿಸಿ 26 ಬೌಂಡರಿ ಸಹಿತ 170 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಮಹಿಳಾ ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇದರ ಜತೆಗೆ ಅಲೀಸಾ ಹೀಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 500+ ರನ್ ಬಾರಿಸಿದ ಮೊದಲ ಆಟಗಾರ್ತಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 9 ಪಂದ್ಯಗಳನ್ನಾಡಿರುವ ಅಲೀಸಾ ಹೀಲಿ 56.56ರ ಬ್ಯಾಟಿಂಗ್ ಸರಾಸರಿಯಲ್ಲಿ 509 ರನ್ ಬಾರಿಸಿದರು.
ಇನ್ನು ಆಸ್ಟ್ರೇಲಿಯಾದ ಮತ್ತೋರ್ವ ಬ್ಯಾಟರ್ ಬೆಥ್ ಮೂನಿ 62 ರನ್ ಬಾರಿಸಿದರೆ, ಕೊನೆಯಲ್ಲಿ ಎಲೈಸಾ ಪೆರ್ರಿ 17 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.