* ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕ್‌ಗೆ ಸವಾಲಿನ ಗುರಿ ನೀಡಿದ ಭಾರತ* ಆಕರ್ಷಕ ಅರ್ಧಶತಕ ಬಾರಿಸಿದ ಸ್ಮೃತಿ ಮಂಧನಾ, ಸ್ನೆಹ್ ರಾಣಾ, ಪೂಜಾ ವಸ್ತ್ರಾಕರ್* ದಿಢೀರ್ ಕುಸಿತದ ನಡುವೆಯೂ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದ ಭಾರತ
ಮೌಂಟ್ ಮಾಂಗನುಯಿ(ಮಾ.06): ಆರಂಭಿಕ ಬ್ಯಾಟರ್ ಸ್ಮೃತಿ ಮಂಧನಾ(52), ಸ್ನೆಹ್ ರಾಣಾ(53*), ಪೂಜಾ ವಸ್ತ್ರಾಕರ್(67) ಆಕರ್ಷಕ ಅರ್ಧಶತಕ ಹಾಗೂ ದೀಪ್ತಿ ಶರ್ಮಾ(40) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 244 ರನ್ ಬಾರಿಸಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ
ಇಲ್ಲಿನ ಬೇ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ (Mithali Raj) ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಭಾರತ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಇನಿಂಗ್ಸ್‌ನ ಮೂರನೇ ಓವರ್‌ನ ಕೊನೆಯ ಎಸೆತದಲ್ಲಿ ಭಾರತದ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ (Shafali Verma) ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಸ್ಮೃತಿ ಮಂಧನಾ(Smriti Mandhana) ಹಾಗೂ ದೀಪ್ತಿ ಶರ್ಮಾ (Deepti Sharma) ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು.
ಆಸರೆಯಾದ ಮಂಧನಾ-ದೀಪ್ತಿ ಜತೆಯಾಟ: ಆರಂಭದಲ್ಲಿ ಶಫಾಲಿ ವರ್ಮಾ ವಿಕೆಟ್ ಕಳೆದುಕೊಂಡಿದ್ದರಿಂದ ಎರಡನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಸ್ಮೃತಿ ಮಂದನಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 116 ಎಸೆತಗಳನ್ನು ಎದುರಿಸಿ 92 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು. ದೀಪ್ತಿ ಶರ್ಮಾ 57 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 40 ರನ್ ಬಾರಿಸಿ ನಶ್ರಾ ಸಂದು ಅವರಿಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಮೃತಿ ಮಂಧನಾ 75 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 52 ರನ್ ಬಾರಿಸಿ ಅನಮ್ ಅಮಿನ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ನಾಟಕೀಯ ಕುಸಿತ ಕಂಡ ಮಧ್ಯಮ ಕ್ರಮಾಂಕ: ಒಂದು ಹಂತದಲ್ಲಿ 96 ರನ್‌ಗಳವರೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಮಹಿಳಾ ತಂಡವು ದೀಪ್ತಿ ಶರ್ಮಾ ವಿಕೆಟ್ ಪತನವಾಗುತ್ತಿದ್ದಂತೆಯೇ ನಾಟಕೀಯ ಕುಸಿತ ಕಂಡಿತು. ಕೇವಲ 20 ರನ್‌ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು. ನಾಯಕಿ ಮಿಥಾಲಿ ರಾಜ್(9), ಹರ್ಮನ್‌ಪ್ರೀತ್ ಕೌರ್(5), ರಿಚಾ ಘೋಷ್(1) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು.
ICC Womem's World Cup: ಪಾಕ್ ಎದುರು ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ
ಸ್ನೆಹ್ ರಾಣಾ-ಪೂಜಾ ವಸ್ತ್ರಾಕರ್ ಜುಗಲ್ಬಂದಿ: ಒಂದು ಹಂತದಲ್ಲಿ ಕೇವಲ 114 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ಭಾರತ ತಂಡಕ್ಕೆ 7ನೇ ವಿಕೆಟ್‌ಗೆ ಪೂಜಾ ವಸ್ತ್ರಾಕರ್ ಹಾಗೂ ಸ್ನೆಹ್ ರಾಣಾ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ನಿರಂತರ ವಿಕೆಟ್ ಕಳೆದುಕೊಂಡಿದ್ದರಿಂದ ಭಾರತದ ರನ್ ಗಳಿಕೆಯ ವೇಗ ಕೂಡಾ ಕುಂಠಿತವಾಗಿತ್ತು. ಆದರೆ ಏಳನೇ ವಿಕೆಟ್‌ಗೆ ಪೂಜಾ ಹಾಗೂ ರಾಣಾ ದಾಖಲೆಯ ಶತಕದ ಜತೆಯಾಟವಾಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.
7ನೇ ವಿಕೆಟ್‌ಗೆ ಈ ಜೋಡಿ ಕೇವಲ 97 ಎಸೆತಗಳನ್ನು ಎದುರಿಸಿ 122 ರನ್‌ಗಳ ಜತೆಯಾಟ ನಿಭಾಯಿಸಿತು. ಚೊಚ್ಚಲ ಏಕದಿನ ವಿಶ್ವಕಪ್ ಆಡುತ್ತಿರುವ ಪೂಜಾ ವಸ್ತ್ರಾಕರ್ ಹಾಗೂ ಸ್ನೆಹ್ ರಾಣಾ ಮೊದಲ ಪಂದ್ಯದಲ್ಲೇ ಅಮೋಘ ಅರ್ಧಶತಕ ಬಾರಿಸಿ ಮಿಂಚಿದರು. ಪೂಜಾ ವಸ್ತ್ರಾಕರ್ 59 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 67 ರನ್ ಬಾರಿಸಿ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ಸ್ನೆಹ್ ರಾಣಾ 48 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ ಅಜೇಯ 53 ರನ್ ಬಾರಿಸಿ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು.
